ಗೋಕಾಕ:ಸಾರಿಗೆ ನೌಕರರ ಮುಷ್ಕರ : ಸಾರ್ವಜನಿಕ ಸಾರಿಗೆ ಸ್ಥಗಿತ, ಖಾಸಗಿ ಬಸ್ಸುಗಳ ಓಡಾಟ, ಪ್ರಯಾಣಿಕರಿಗೆ ತಟ್ಟಿದ ಬಂದ್ ಬಿಸಿ
ಸಾರಿಗೆ ನೌಕರರ ಮುಷ್ಕರ : ಸಾರ್ವಜನಿಕ ಸಾರಿಗೆ ಸ್ಥಗಿತ, ಖಾಸಗಿ ಬಸ್ಸುಗಳ ಓಡಾಟ, ಪ್ರಯಾಣಿಕರಿಗೆ ತಟ್ಟಿದ ಬಂದ್ ಬಿಸಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 7 :
ವೇತನ ಪರಿಷ್ಕರಣೆಯ ತಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.
ಇದರಿಂದಾಗಿ ಇಂದು ರಾಜ್ಯ ರಸ್ತೆ ಸಾರಿಗೆಗಳು ಬಹುತೇಕ ಕಡೆಗಳಲ್ಲಿ ರಸ್ತೆಗಿಳಿದಿಲ್ಲ. ಇದರ ಪರಿಣಾಮ ಗೋಕಾಕ ಸೇರಿದಂತೆ ಹಲವು ಗ್ರಾಮಗಳಿಗೆ ಇಂದು ಬಸ್ ಸಂಚಾರ ಸ್ತಬ್ಧವಾಗಿದೆ. ಜನರು ದಿನನಿತ್ಯದ ವಹಿವಾಟುಗಳಿಗೆ, ಕಾರ್ಯಗಳಿಗೆ ಬಸ್ ಗಳನ್ನೇ ಸಂಚಾರಕ್ಕೆ ನಂಬಿಕೊಂಡಿದ್ದವರು ಪರದಾಡುವಂತಾಗಿದೆ.
ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ ಖಾಸಗಿ ಬಸ್ಸುಗಳು ಇಂದು ರಸ್ತೆಗಳಲ್ಲಿ ಹೆಚ್ಚಾಗಿ ಓಡಾಡಿಕೊಂಡಿದ್ದು, ಪರಿಸ್ಥಿತಿಯ ಲಾಭವನ್ನು ಖಾಸಗಿ ಬಸ್ಸುಗಳ ಮಾಲೀಕರು ಮಾಡಿಕೊಳ್ಳುತ್ತಿದ್ದರು. ಎಲ್ಲೆಡೆ ಪ್ರಯಾಣಿಕರಿಂದ ದುಪ್ಪಟ್ಟು ದರ ಕೇಳುವುದು, ಕೆಲವೆಡೆ ಪ್ರಯಾಣಿಕರಿಂದ ದರ ಸುಲಿಗೆ ಮಾಡುವುದು ಕಂಡುಬರುತ್ತಿದೆ.
ಗೋಕಾಕದಲ್ಲಿ ಪ್ರತಿದಿನ ಸುಮಾರು 113 ಸಾರ್ವಜನಿಕ ಬಸ್ಸುಗಳು ಓಡಾಡುತ್ತಿದ್ದು, ಸುಮಾರು 6000ಕ್ಕೂ ಹೆಚ್ಚು ಪ್ರಯಾಣಿಕರು ಸಾವಿರಾರು ವಿದ್ಯಾರ್ಥಿಗಳು ಅದನ್ನು ನಂಬಿಕೊಂಡಿದ್ದರು . ಆದರೆ ಇಂದು ಸಾರ್ವಜನಿಕರಿಗೆ ಸಾರಿಗೆ ಬಸ್ಸುಗಳು ಇಲ್ಲದೆ ಖಾಸಗಿ ಬಸ್ಸುಗಳನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ. ಹಲವು ಕಡೆಗಳಲ್ಲಿ ಖಾಸಗಿ ಬಸ್ಸುಗಳ ನಿರ್ವಾಹಕರು ಪ್ರಯಾಣಿಕರಿಂದ ದುಪ್ಪಟ್ಟು ದರ ಕೇಳುತ್ತಿರುವುದು ವರದಿಯಾಗಿದೆ.