ಗೋಕಾಕ:ನಿಸ್ವಾರ್ಥ ಸೇವೆಯೊಂದಿಗೆ ಒಳ್ಳೆಯ ವ್ಯಕ್ತಿಗಳಾಗಿ ಬದುಕಿರಿ : ನಾರಾಯಣ ಮಠಾಧಿಕಾರಿ
ನಿಸ್ವಾರ್ಥ ಸೇವೆಯೊಂದಿಗೆ ಒಳ್ಳೆಯ ವ್ಯಕ್ತಿಗಳಾಗಿ ಬದುಕಿರಿ : ನಾರಾಯಣ ಮಠಾಧಿಕಾರಿ
ನಮ್ಮ ಬೆಳಗಾವಿ ಇ – ,ವಾರ್ತೆ, ಗೋಕಾಕ ಮಾ 11 :
ಸೇವೆಯೇ ನಿಜವಾದ ಧರ್ಮವಾಗಿದ್ದು, ಎಲ್ಲರೂ ನಿಸ್ವಾರ್ಥ ಸೇವೆಯೊಂದಿಗೆ ಒಳ್ಳೆಯ ವ್ಯಕ್ತಿಗಳಾಗಿ ಬದುಕಿರೆಂದು ವಿಶ್ವ ಹಿಂದು ಪರಿಷತ್ತಿನ ಬೆಳಗಾವಿ ವಿಭಾಗ ಸಂಚಾಲಕ ನಾರಾಯಣ ಮಠಾಧಿಕಾರಿ ಹೇಳಿದರು.
ರವಿವಾರದಂದು ನಗರದ ಉಪಕಾರಾಗೃಹದ ಬಂಧಿ ನಿವಾಸಿಗಳಿಗೆ ಯುಗಾದಿ ಹಬ್ಬದ ಪ್ರಯುಕ್ತ ಇಲ್ಲಿಯ ಜೆಸಿಐ ಸಂಸ್ಥೆಯಿಂದ ಸಿಹಿ ಮತ್ತು ಒಳಾಂಗಣ ಕ್ರೀಡಾ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಯವಿಲ್ಲದೇ ಧರ್ಮವಿಲ್ಲ, ಕ್ರೋಧಕ್ಕೆ ಒಳಗಾಗದೇ ಮತ್ತೊಬ್ಬರಿಗೆ ಒಳಿತನ್ನು ಬಯಸಿ ಉತ್ತಮ ನಾಗರೀಕರಾಗಿ ಬದುಕಿರೆಂದು ತಿಳಿಸಿದರು.
ಸಿಟ್ಟು ತನ್ನ ವೈರಿ ಅದರಿಂದ ದೂರವಾಗಿ ಶಾಂತಚಿತ್ತರಾಗಿ ಸಮಸ್ಯಗಳಿಗೆ ಸ್ಪಂದಿಸಿದರೇ ನೆಮ್ಮದಿ ಜೀವನ ಸಾಧ್ಯ. ಅನ್ಯಾಯ ಎದರಿಸಲು ಕಾನೂನು ಮಾರ್ಗ ಅನುಸರಿಸಿದರೇ ನ್ಯಾಯ ದೊರೆಯುತ್ತದೆ. ಹೆಣ್ಣು-ಹೊನ್ನು-ಮಣ್ಣಿಗಾಗಿ ಎಲ್ಲ ಅನಾಹುತಗಳಿಗೆ ಕಾರಣವಾಗಿದ್ದು ಇವುಗಳ ಹತೋಟಿಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸತ್ಪರುಷರ ತತ್ವಗಳ ಪಾಲನೆಯೊಂದಿಗೆ ಸಾತ್ವಿಕ ಜೀವನವನ್ನು ಸಾಗಿಸಿ ತಾವು ಒಳ್ಳೆಯವರಾಗಿ, ಒಳ್ಳೆಯ ಸಮಾಜವನ್ನು ನಿರ್ಮಿಸಿ, ನಾವೆಲ್ಲಾ ಭಾರತೀಯರೆಂದು ದೇಶದ ಹಿತಕ್ಕಾಗಿ ಬದುಕೋಣವೆಂದು ತಿಳಿಸಿದರು.
ಹಿಂದು ಧರ್ಮ ಹಾಗೂ ಪಂಚಾಂಗದ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷವಾಗಿದ್ದು, ಪ್ರಕೃತಿಯಲ್ಲಿ ಹಸಿರು ಚಿಗುರುವ ಮೂಲಕ ಹೊಸತನದ ನಾಂದಿಯೊಂದಿಗೆ ಪ್ರಾರಂಭವಾಗುವ ಈ ದಿನ ನಮ್ಮ ಜೀವನದಲ್ಲಿ ಸಿಹಿ-ಕಹಿಗಳ ಸಂದೇಶವೇ ಬೇವು-ಬೆಲ್ಲವಾಗಿದ್ದು ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂದೇಶವನ್ನು ಸಾರುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಪಕಾರಾಗೃಹದ ಅಧೀಕ್ಷಕ ಅಂಬರೀಷ ಪೂಜೇರಿ ವಹಿಸಿದ್ದರು. ವೇದಿಕೆ ಮೇಲೆ ಜೆಸಿಐ ಮಹಿಳಾ ಘಟಕದ ಅಧ್ಯಕ್ಷೆ ತೇಜಸ್ವಿನಿ ಕಡೆವಾಡಿ, ಪೂರ್ವ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ರಜನಿಕಾಂತ ಮಾಳೋದೆ, ಶೇಖರ ಉಳ್ಳಾಗಡ್ಡಿ, ಆರ್.ಎಸ್.ಎಸ್ ಮುಖಂಡ ಚೂನಪ್ಪ ಹಟ್ಟಿ ಇದ್ದರು. ಶಕೀಲ ಜಕಾತಿ ಸ್ವಾಗತಿಸಿ ವಂದಿಸಿದರು.