ಗೋಕಾಕ:ನಿಘಂಟು ತಜ್ಞ ವೆಂಕಟಸುಬ್ಬಯ್ಯ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಬಸವರಾಜ ಖಾನಪ್ಪನವರ
ನಿಘಂಟು ತಜ್ಞ ವೆಂಕಟಸುಬ್ಬಯ್ಯ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಬಸವರಾಜ ಖಾನಪ್ಪನವರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 19 :
ನಿಘಂಟು ತಜ್ಞರೆಂದೇ ಪ್ರಖ್ಯಾತರಾದ ಪ್ರೋ ವೆಂಕಟಸುಬ್ಬಯ್ಯನವರು, ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕರವೇ ಅಧ್ಯಕ್ಷ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಬಸವರಾಜ ಖಾನಪ್ಪನವರ ತಿಳಿಸಿದ್ದಾರೆ.
ಸೋಮವಾರದಂದು ನಗರದಲ್ಲಿ ಪತ್ರಿಕಾ ಪ್ರಕಟಣೆ
ನೀಡಿರುವ ಅವರು ಪ್ರೊ. ಜಿ. ವೆಂಕಟಸುಬ್ಬಯ್ಯನವರು ಮೊದಲು ಉದ್ಯೋಗಕ್ಕಾಗಿ ಸೇರಿದ್ದು ಮಂಡ್ಯದ ಪುರಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಬೆಂಗಳೂರಿನ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, 1972ರಲ್ಲಿ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973ರಲ್ಲಿ ನಿವೃತ್ತಿ ಪಡೆದಿದ್ದರು.
ಜಿ. ವೆಂ. ಅವರು ಕನ್ನಡ ಸಾಹಿತ್ಯವನ್ನು ಬೆಳೆಸುವ ಕೈಂಕರ್ಯದಲ್ಲಿ ಎಂದೂ ಮುಂದು. ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಅವರು ಹಲವಾರು ಕೃತಿ ರಚನೆ ಮಾಡಿದ್ದರು. ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ‘ಬಾಲ ಕರ್ನಾಟಕ’ ಸಂಘ ಸ್ಥಾಪನೆ ಮಾಡಿದರು. ಎಚ್.ಎಂ. ಶಂಕರ ನಾರಾಯಣರಾಯರು ಹೊರತಂದ ‘ರೋಹಿಣಿ’ ಕೈಬರಹದ ಪತ್ರಿಕೆಗೆ ಸಹಾಯ ನೀಡಿದರು. ಬೆಂಗಳೂರಿಗೆ ಬಂದ ನಂತರ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾದರು. 1954-56ರ ವರೆಗೆ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 1965-69ರ ವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಘಂಟು ಸಮಿತಿಯ ಸದಸ್ಯರಾಗಿ, 1965-67ರವರೆಗೆ ಕನ್ನಡ ವಿಶ್ವಕೋಶ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿ ಹೀಗೆ ಅವರು ವಿವಿಧ ರೀತಿಗಳಲ್ಲಿ ಸಲ್ಲಿಸಿದ ಸೇವೆ ಅಪಾರವಾದದ್ದು. ಇಂತಹ ಮಹಾನ ಚೇತನ್ ಕನ್ನಡದ ಕಂದ ವೆಂಕಟ ಸುಬ್ಬಯ್ಯನವರು ನಮ್ಮನ್ನು ಬಿಟ್ಟು ಅಗಲಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಕನ್ನಡಪರ ಹೋರಾಟಗಾರ ಬಸವರಾಜ ಖಾನಪ್ಪನವರ ಶೋಕ ವ್ಯಕ್ತಪಡಿಸಿದ್ದಾರೆ.