ಗೋಕಾಕ:”ವಿದ್ಯಾರ್ಥಿಗಳ ಯಶಸ್ಸಿನ ಯಾನಕ್ಕೆ ಬಿಇಓ ರವರ ಪತ್ರ ಅಭಿಯಾನ” : ಜಿ.ಬಿ.ಬಳಗಾರ ವಿನೂತನ ಕಾರ್ಯಕ್ಕೆ ಪಾಲಕರ ಪ್ರಶಂಸೆ
“ವಿದ್ಯಾರ್ಥಿಗಳ ಯಶಸ್ಸಿನ ಯಾನಕ್ಕೆ ಬಿಇಓ ರವರ ಪತ್ರ ಅಭಿಯಾನ” : ಜಿ.ಬಿ.ಬಳಗಾರ ವಿನೂತನ ಕಾರ್ಯಕ್ಕೆ ಪಾಲಕರ ಪ್ರಶಂಸೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 2 :
ಕೊರೋನಾ ಮಹಾಮಾರಿ ಸೋಲಿಸಲು ಸರಕಾರದ ಎಲ್ಲಾ ಇಲಾಖೆಗಳು ಟೋಂಕ ಕಟ್ಟಿ ಕಾರ್ಯ ಮಾಡುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ಇಲಾಖಾ ಮಟ್ಟದಲ್ಲಿ ಕರೋನಾ ಸೋಂಕು ಹರಡದಂತೆ ಕ್ರಮಗಳನ್ನು ತಗೆದುಕೊಳ್ಳುವುದರ ಜೊತೆಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ “ವಿದ್ಯಾರ್ಥಿಗಳ ಯಶಸ್ಸಿನ ಯಾನಕ್ಕೆ ಬಿ.ಇ.ಓ.ರವರ ಪತ್ರ ಅಭಿಯಾನ” ವಿನೂತನ ಕಾರ್ಯವನ್ನು ಪ್ರಾರಂಭಸಿದ್ದಾರೆ. ಇವರ ಈ ಕಾರ್ಯಕ್ಕೆ ವಲಯದ ಎಲ್ಲ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕೊರೋನಾ ಮಹಾಮಾರಿ ಸಂಧರ್ಭದಲ್ಲಿ ಸರಕಾರ ಲಾಕಡೌನ ವಿಧಿಸಿರುವ ಪರಿಣಾಮ ಎಲ್ಲರೂ 50 ದಿನಗಳಿಂದ ಮನೆಯಲ್ಲಿದ್ದು ಕೊರೋನಾ ಸರಪಳಿಯನ್ನು ಮುರಿಯಲು ಸಹಕರಿಸುತ್ತಿರುವ ತುರ್ತು ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಬಿಇಒ ಬಳಗಾರ ಅವರು ಈ ಸಾಲಿನ ಎಸ್.ಎಸ್.ಎಲ್ .ಸಿ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗದೆ ಓದಿನ ಕಡೆ ಗಮನ ಹರಿಸಬೇಕೆಂಬ ಸದುದ್ದೇಶದಿಂದ ತಮ್ಮ ವಲಯದ ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆಲ್ಲ ಪತ್ರವನ್ನು ಬರೆಯುವ ಮುಖೇನ ವಿದ್ಯಾರ್ಥಿ ಹಾಗೂ ಅವರ ಪಾಲಕರಲ್ಲಿ ಓದಿನ ಆಸಕ್ತಿಯನ್ನು ತುಂಬುತ್ತಿದ್ದಾರೆ ಇವರ ಈ ಕಾರ್ಯಕ್ಕೆ ವಿದ್ಯಾರ್ಥಿಗಳ ಪಾಲಕರಿಂದಲೂ ಸಹ ಬೆಂಬಲ ವ್ಯಕ್ತವಾಗಿದೆ. ಪತ್ರ ತಲುಪಿದ ತಕ್ಷಣ ಪಾಲಕರು ಮತ್ತು ಈ ಬಾರಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಅತಿ ಹುರುಪಿನಿಂದ ತಮ್ಮ ಮಕ್ಕಳನ್ನು ಅಭ್ಯಾಸದ ಕಡೆ ತಾವೇ ಸ್ವತಃ ಮುತುವರ್ಜಿ ವಹಿಸಿ ಕಾರ್ಯಪ್ರವೃತ್ತವಾಗಿದ್ದಾರೆ.
ಪತ್ರದಲ್ಲಿರುವ ಕೆಲ ಸಾಲುಗಳನ್ನು ಗಮನಿಸಿದರೆ ಮೈ ರೋಮಾಂಚನಗೊಳ್ಳುತ್ತದೆ. ಹಾಯ್ ಪುಟ್ಟಾ ಹೇಗಿದ್ದೀಯಾ? ನೀವು ಆರಾಮದಿಂದ ಇದ್ದೀರಿ ಎಂದು ಭಾವಿಸುತ್ತೇನೆ ಮನೆಯಲ್ಲಿ ಎಲ್ಲರೂ ಚನ್ನಾಗಿದ್ದಾರಾ? ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸು ಎಂಬ ಭಾವನಾತ್ಮಕ ಮಾತುಗಳಿಂದ ಪ್ರಾರಂಭವಾಗುವ ಈ ಪತ್ರ ಕ್ರಮೇಣ ವಿದ್ಯಾರ್ಥಿಗೆ ಓದಿನ ಕಡೆ ಕರೆದುಕೊಂಡು ಹೋಗುತ್ತದೆ.
ಕಳೆದ ತಿಂಗಳು 24 ರಿಂದ ಪ್ರಾರಂಭವಾಗಿರುವ ಈ ಅಭಿಯಾನದಿಂದ ಉತ್ತೇಜಿತರಾಗಿರುವ ವಿದ್ಯಾರ್ಥಿಗಳು ಆನಲೈನ ಪಾಠದ ಜೊತೆಗೆ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಗೆ ತಯಾರಿಗಾಗಿ ತಮ್ಮ ವಿಷಯ ಗುರುಗಳಿಗೆ ದೂರವಾಣಿ ಮುಖಾಂತರ ಸಂರ್ಪಕಿಸಿ ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಒಟ್ಟಾರೆ ಬಿಇಒ ಬಳಗಾರ ಅವರ ಈ ವಿನೂತನ ಕಾರ್ಯ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.
” ಒಬ್ಬ ಉನ್ನತ ಅಧಿಕಾರಿಯಾಗಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸಹ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಹೊಂದಿ ಎಲ್ಲಾ ವಿದ್ಯಾರ್ಥಿಗಳಿಗೆ ಪತ್ರ ಕಳುಹಿಸಿ ಓದಿನಲ್ಲಿ ಆಸಕ್ತಿ ವಹಿಸುವಂತೆ ಮಾಡುತ್ತಿರುವ ಇವರ ಕಾರ್ಯ ನಿಜವಾಗಿಯೂ ಸ್ವಾಗತಾರ್ಹವಾಗಿದ್ದು, ಇವರ ಬರೆದ ಪತ್ರದಿಂದ ಪ್ರೇರಿತರಾಗಿ ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸುತ್ತಿದ್ದಾರೆ”.
– ಮುಸ್ತಾಕ ಚಾಂದಸಾಬ ಖಂಡಾಯತ
ಎಸ್.ಎಲ್.ಎಲ್.ಸಿ ವಿದ್ಯಾರ್ಥಿಯ ಪಾಲಕ
” ಬಿಇಒ ಬಳಗಾರ ಸರ ಬರೆದ ಪತ್ರ ಬಂದು ತಲುಪಿದೆ. ಅವರ ಪತ್ರ ಓದಿ ನನಗೆ ತುಂಬಾ ಖುಷಿಯಾಗಿ ಪತ್ರ ಬಂದಾಗಿನಿಂದ ಪ್ರತಿದಿನ ನನ್ನ ಓದಿನ ಸಮಯವನ್ನು ಹೆಚ್ಚಿಸಿಕೊಂಡು ಅಭ್ಯಾಸ ಮಾಡುತ್ತಿದ್ದೇನೆ. ಅಂತಿಮ ಪರೀಕ್ಷೆಯಲ್ಲಿ ಖಂಡಿವಾಗಿ ಹೆಚ್ಚಿನ ಅಂಕ ಪಡೆದು ಪಾಸಾಗುತ್ತೇನೆ”.
– ನಬಿಸಾಬ ಮ ಖಂಡಾಯತ
ಎಸ್.ಎಸ್.ಎಲ್.ಸಿ ವಿದ್ಯಾರ್ಥಿ.