ಮೂಡಲಗಿ:ಮೂಡಲಗಿಗೆ ಶೀಘ್ರ ಅಗ್ನಿಶಾಮಕ ಠಾಣೆ ಮಂಜೂರು : ಶಾಸಕ-ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿಗೆ ಶೀಘ್ರ ಅಗ್ನಿಶಾಮಕ ಠಾಣೆ ಮಂಜೂರು : ಶಾಸಕ-ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಜೂ 3 :
ಮೂಡಲಗಿಯಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಯನ್ನು ಮಂಜೂರಾತಿ ಪಡೆಯಲು ಇಷ್ಟರಲ್ಲಿಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗುವುದು ಎಂದು ಶಾಸಕ ಹಾಗೂ ಕಹಾಮ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದ್ದಾರೆ.
ಕಳೆದ ಮಂಗಳವಾರದಂದು ಅಗ್ನಿಶಾಮಕ ಇಲಾಖೆಯೂ ಹೊರಡಿಸಿದ ನೂತನವಾಗಿ ರಚನೆಯಾಗಿರುವ ಅಗ್ನಿಶಾಮಕ ಠಾಣೆಯ ಪಟ್ಟಿಯಲ್ಲಿ ಮೂಡಲಗಿಯನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಮೂಡಲಗಿಯಲ್ಲಿ ಅತಿ ಶೀಘ್ರವೇ ಅಗ್ನಿಶಾಮಕ ಠಾಣೆಯ ಮಂಜೂರಾತಿ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೂಡಲಗಿಯ ಹೊಸ ತಾಲೂಕು ಸ್ಥಾನಮಾನ ಹೊಂದಿರುವುದರಿಂದ ಇಲ್ಲಿ ಅಗ್ನಿಶಾಮಕ ಠಾಣೆ ಅಗತ್ಯವಾಗಿದೆ ಇದಕ್ಕಾಗಿ ಈಗಾಗಲೇ ಮೂಡಲಗಿಯ ಸುಣಧೋಳಿ ರಸ್ತೆಗೆ ಹೊಂದಿಕೊಂಡಿರುವ ದನದ ಪೇಟೆಯಲ್ಲಿ ಪುರಸಭೆಯಿಂದ ಎರಡು ಎಕರೆ ಜಮೀನನ್ನು ನೀಡಲಾಗಿದೆ. ಆದರೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ 1.05 ಜಮೀನು ಸಿಕ್ಕಿದೆ, ಇನ್ನುಳಿದ ಜಾಗೆಯೂ ರಸ್ತೆಯಲ್ಲಿ ಹೋಗಿದೆ, ಇದರಿಂದ ಹೊಸ ಠಾಣೆಗೆ ನಿವೇಶನದ ಸಮಸ್ಯೆ ಎದುರಾಗಿರಬಹುದು. ಇದೇ ಕಾರಣಕ್ಕೆ ಮೂಡಲಗಿಯಲ್ಲಿ ಅಗ್ನಿಶಾಮಕ ಠಾಣೆಯ ರಚನೆ ಕಾರ್ಯ ವಿಳಂಬಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿಯನ್ನು ವಿವರಿಸಲಾಗುವುದು, ಹೊಸದಾಗಿ ರಚನೆಯಾಗಿರುವ ಅಗ್ನಿಶಾಮಕ ಠಾಣೆಗಳಲ್ಲಿ ಮೂಡಲಗಿಯನ್ನು ಕೈ ಬಿಟ್ಟಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅದಕ್ಕೆ ಬೇಕಾದ ಎಲ್ಲ ಸೌಲತ್ತುಗಳನ್ನು ಪುರಸಭೆಯಿಂದ ದೊರಕಿಸಿ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮೂಡಲಗಿಗೆ ಹೊಸ ಅಗ್ನಿಶಾಮಕ ಠಾಣೆ ರಚನೆಗೆ ಮಂಜೂರಾತಿ ಸಿಕ್ಕೇಸಿಗುತ್ತದೆ ಇದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದ್ದಾರೆ.