ಗೋಕಾಕ:ಪ್ರವಾಹ ನಿಯಂತ್ರಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಟೀಂ ಆಗಿ ಕಾರ್ಯ ನಿರ್ವಹಿಸಿ : ಅಧಿಕಾರಿಗಳಿಗೆ ಶಾಸಕ ರಮೇಶ ಸೂಚನೆ
ಪ್ರವಾಹ ನಿಯಂತ್ರಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಟೀಂ ಆಗಿ ಕಾರ್ಯ ನಿರ್ವಹಿಸಿ : ಅಧಿಕಾರಿಗಳಿಗೆ ಶಾಸಕ ರಮೇಶ ಸೂಚನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 17 :
ಕಳೆದ 2 ವರ್ಷದಲ್ಲಿ ಬಳ್ಳಾರಿ ನಾಲಾದಿಂದ ತುಂಬಾ ತೊಂದರೆಯಾಗಿದೆ ಇದಕ್ಕೆ ಗೇಜ್ ಮಾಡಿ ಪ್ರವಾಹ ಪರಿಸ್ಥಿತಿಯನ್ನು ತಪ್ಪಿಸಲು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಗುರುವಾರದಂದು ನಗರದ ತಾ.ಪಂ ಸಭಾಂಗಣದಲ್ಲಿ ಪ್ರವಾಹ ನಿರ್ವಹಣೆ ಕುರಿತು ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ ನಾಲಾದಿಂದ ಹೊರ ಬರುವ ನೀರಿನಿಂದ ಮೊದಲು ಗೋಕಾಕ ಮತ್ತು ಮೂಡಲಗಿ ನಂತರ ಮುಧೋಳ ಪ್ರದೇಶಗಳು ತೊಂದರೆಗೆ ಒಳಪಡುತ್ತವೆ.
ಕೋಯಿನ್ನಾ ಡ್ಯಾಂನ ನೀರ ಹೋರ ಹರಿವು ಅನುಗುಣವಾಗಿ ರಾಜಾಪೂರ ಬ್ಯಾರೇಜ್ , ಕಲ್ಲೋಳ ಬ್ಯಾರೇಜ್ ಮತ್ತು ಆಲಮಟ್ಟಿ ಜಲಾಶಯಗಳು ಹೋರ ಹರಿವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಇದರಿಂದ ಪ್ರವಾಹ ಉಂಟಾಗುವ ಹಾನಿಯನ್ನು ತಪ್ಪಿಸಲು ಸಾಧ್ಯ . ನೀರಾವರಿ ಅಧಿಕಾರಿಗಳು ನೀರಿನ ಹರಿಬಿಡುವ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು ಇದರಿಂದ ಪ್ರವಾಹ ಪರಿಸ್ಥಿತಿ ಎದುರಿಸಲು ಸಾಧ್ಯ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಪ್ರವಾಹ ಎದುರಿಸಲು ಮುಖ್ಯವಾಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕು.ಕೋಯಿನಾ , ರಾಜಾಪೂರ ಕಲ್ಲೋಳ ಡ್ಯಾಂ ಜೊತೆಗೆ ಆಲಮಟ್ಟಿ ಜಲಾಶಯದ ಹೊರ ಹರಿವಿನ ಮೇಲೆ ಪ್ರವಾಹ ನಿರ್ವಹಿಸುವ ಬಗ್ಗೆ ನಿರ್ಧರಿಸಬೇಕಾಗಿದೆ ಈ ಎಲ್ಲ ಜಲಾಶಯಗಳ ಬಗ್ಗೆ ಆಗಾಗ ಮಾಹಿತಿ ನೀಡಬೇಕು.
ನೀರಾವರಿ ಇಲಾಖೆಯವರು ಒಂದು ಟೀಂ ಆಗಿ ಕಾರ್ಯ ನಿರ್ವಹಿಸಬೇಕು. ಈಗಾಗಲೇ ಮಹಾರಾಷ್ಟ್ರ ನೀರಾವರಿ ಸಚಿವರೊಂದಿಗೆ ಮಾತನಾಡಿದ್ದು, ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.
ಪ್ರವಾಹ ಬಂದರೆ ಜನರನ್ನು ಸ್ಥಳಾಂತರ ಮಾಡಲು ಯಾವೆಲ್ಲ ಕ್ರಮಕೈಗೊಳ್ಳಬೇಕು ಎನ್ನುವ ಬಗ್ಗೆ ಅಧಿಕಾರಿಗಳು ಸಭೆ ನಡೆಸಿ ಆದಷ್ಟು ಬೇಗ ಕ್ರಮ ಕೈಗೊಳ್ಳಲು ಉನ್ನತ ಮಟ್ಟದ ಅಧಿಕಾರಿಗಳು ಮುಂದಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರವಾಹದಿಂದ ಆಗುವ ಬೆಳೆಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ರೈತರಿಗೆ ತೊಂದರೆಯಾಗದಂತೆ ಗೋಬ್ಬರ, ರಸಗೋಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಸರಿಯಾಗಿ ನೀಡಬೇಕು. ಗ್ರಾಮ ಮಟ್ಟದಲ್ಲಿ ಪಂಚಾಯಿತಿ ಮಟ್ಟದಲ್ಲಿ ಕಾರ್ಯದರ್ಶಿ ಮತ್ತು ಪಿಡಿಓಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ಮಾತನಾಡಿ ಸನ್ 2020 ರಲ್ಲಿ ಬಂದ ಪ್ರವಾಹ ಸಮಯದಲ್ಲಿ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಗಳನ್ನು ನೇಮಕ ಮಾಡಿದ ಹಾಗೆ ಈಗಲೂ ಸಹ ನೇಮಕ ಮಾಡಲಾಗಿದೆ. ಪ್ರವಾಹದ ತುತ್ತಾಗುವ ಹಳ್ಳಿಯ ಜನಸಂಖ್ಯೆ, ಜಾನುವಾರು ಸೇರಿದಂತೆ ಇತರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಪಂಚಾಯತ್ ಮಟ್ಟದಲ್ಲಿ ಟಾಕ್ಸಪೋರ್ಸ ಕಮಿಟಿಯನ್ನು ರಚಿಸಲಾಗಿದೆ. ಪ್ರತಿ ಹಳ್ಳಿಯ ಗಂಜಿಕೇಂದ್ರ ತೆರೆಯಲು ಸರಕಾರಿ ಕಛೇರಿ ಗಳನ್ನು ಗುರುತಿಸಲಾಗಿದ್ದು, ಪ್ರತಿ ಗಂಜಿ ಕೇಂದ್ರಕ್ಕೆ ಒಬ್ಬರನ್ನು ನೋಡಲ್ ಅಧಿಕಾರಗಳನ್ನು ನೇಮಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು
ಸಭೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಾದ ಚಂದ್ರಶೇಖರ್ ಹಾಗೂ ದ್ಯಾಮನ್ನವರ ಅವರು
ಡ್ಯಾಂಗಳ ನೀರಿನ ಒಳ ಮತ್ತು ಹೊರ ಹರಿವಿನ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ , ಡಿ.ವಾಯ.ಎಸ್.ಪಿ ಮನೋಜಜಕುಮಾರ ನಾಯಿಕ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪೌರಾಯುಕ್ತ ಶಿವಾನಂದ ಹಿರೇಮಠ, ಸಿಪಿಐ ಗೋಪಾಲ ರಾಠೋಡ, ಡಾ. ರವೀಂದ್ರ ಅಂಟಿನ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.