ಗೋಕಾಕ:ಜೀವದ ಹಂಗು ತೊರೆದು ಹಗಲಿರುಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಕಾರ್ಯ ಪ್ರಶಂಸನೀಯ : ಶಾಸಕ ಬಾಲಚಂದ್ರ
ಜೀವದ ಹಂಗು ತೊರೆದು ಹಗಲಿರುಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಕಾರ್ಯ ಪ್ರಶಂಸನೀಯ : ಶಾಸಕ ಬಾಲಚಂದ್ರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 1:
ಕೋವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಕಾರ್ಯ ಪ್ರಶಂಸನೀಯ. ಇಡೀ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು ಮತ್ತು ಕೊರೋನಾ ವಾರಿಯರ್ಸ್‍ಗಳಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಗುರುವಾರದಂದು ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಆರೋಗ್ಯ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಅವಳಿ ತಾಲೂಕುಗಳಲ್ಲಿ ಕೋವಿಡ್ ಹತೋಟಿಗೆ ತರುವಲ್ಲಿ ವಾರಿಯರ್ಸ್‍ಗಳ ಪಾತ್ರ ಬಹು ಮುಖ್ಯವಾಗಿತ್ತು ಎಂದು ಹೇಳಿದರು.
ಕೋವಿಡ್ 1 ಮತ್ತು 2ನೇ ಅಲೆಯಿಂದಾಗಿ ಇಡೀ ಮನುಕುಲವೇ ಬೆಚ್ಚಿ ಬೀಳಿಸಿದಂತಾಗಿತ್ತು. ಅಷ್ಟೊಂದು ಘೋರ ಪ್ರಮಾಣದಲ್ಲಿ ಕೊರೋನಾ ಹರಡಿದೆ. ಆದರೂ ನಮ್ಮ ಟೀಂ ಎನ್‍ಎಸ್‍ಎಫ್, ಅಧಿಕಾರಿಗಳ ವಲಯ ಈ ನಿಟ್ಟಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ರೋಗಿಗಳ ಆರೈಕೆ ಮಾಡಿ ಅವರನ್ನು ಗುಣಮುಖರನ್ನಾಗಿ ಮನೆಗೆ ನಗುಮುಖದಿಂದ ಕಳುಹಿಸಿದ್ದಾರೆ. ಇವರ ಪರಿಶ್ರಮದಿಂದಲೇ ಸಾವಿನ ಸಂಖ್ಯೆಗಳು ನಮ್ಮಲ್ಲಿ ತೀರ ಇಳಿಮುಖವಾಗಿವೆ. ಸೊಂಕಿತರ ಸೇವೆಯೇ ತಮ್ಮ ಗುರಿ ಎಂದು ತಿಳಿದುಕೊಂಡು ಚಿಕಿತ್ಸೆ ನೀಡಿರುವ ವೈದ್ಯರ ಸೇವೆ ಶ್ಲಾಘನೀಯವೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೋವಿಡ್ 2ನೇ ಅಲೆ ಬಹುತೇಕ ಮುಗಿಯುವ ಹಂತದಲ್ಲಿದೆ. ಇನ್ನೇನು ಮೂರನೇ ಅಲೆ ಬರಬಹುದು ಎಂಬ ಅಂದಾಜಿನಲ್ಲಿ ತಜ್ಞರು ಹೇಳುತ್ತಿದ್ದಾರೆ. ಆದರೆ ದೇವರ ದಯೆಯಿಂದ ಮೂರನೇ ಅಲೆ ಬರಬಾರದು ಎಂದು ಪ್ರಾರ್ಥಿಸಿಕೊಳ್ಳೋಣ. ಈಗಾಗಲೇ ಸಾಕಷ್ಟು ನೋವುಗಳನ್ನು ಅನುಭವಿಸಿದಂತಾಗಿದೆ. ಒಂದು ವೇಳೆ ಮೂರನೇ ಅಲೆ ಅಪ್ಪಳಿಸಿದರೂ ಅದನ್ನು ಸಮರ್ಥವಾಗಿ ಎದುರಿಸಲಿಕ್ಕೆ ಅಧಿಕಾರಿಗಳು ಈಗಿಂದಲೇ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು.
ರೋಗಿಗಳ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲು ಪಡಿಸಲು ಕ್ಷೇತ್ರದ ಎಲ್ಲ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಂಬ್ಯುಲೆನ್ಸ್ ಸೇವೆಯನ್ನು ಕಲ್ಪಿಸಿಕೊಡುತ್ತಿದ್ದೇವೆ. ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿ ಅಂಬ್ಯುಲೆನ್ಸ್‍ಗಳನ್ನು ನೀಡಿದ್ದು, ಇದರಿಂದ ಬಡ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ಅನುಕೂಲವಾಗಲಿದೆ. ಕೋವಿಡ್ ಸಂದರ್ಭದಲ್ಲಿ ಕೆಲವು ಖಾಸಗಿ ಅಂಬ್ಯುಲೆನ್ಸ್‍ಗಳು ಬಡ ರೋಗಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದರಿಂದ ಎಲ್ಲ ಆಸ್ಪತ್ರೆಗಳಿಗೂ ಅಂಬ್ಯುಲೆನ್ಸ್‍ಗಳನ್ನು ನೀಡಲು ಕ್ರಮ ಕೈಗೊಂಡಿದ್ದಾಗಿ ಅವರು ಹೇಳಿದರು. ಅಂಬ್ಯುಲೆನ್ಸ್‍ಗಳನ್ನು ಸಮರ್ಪಕವಾಗಿ ನಿರ್ವಹಿಸಲು ದಿನದ 24 ಗಂಟೆಗಳ ಕಾಲ ಕಾಲ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ. ಮೂವರು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಅಂಬ್ಯುಲೆನ್ಸ್‍ಗಳ ಚಾಲಕರ ಪ್ರತಿ ತಿಂಗಳ ವೇತನವನ್ನು ಸ್ವತಃ ತಾವೇ ಭರಿಸುವುದಾಗಿ ಅವರು ಹೇಳಿದರು.
ಕೋವಿಡ್ ನಿರ್ವಹಣೆಗಾಗಿ ತಮ್ಮ ಶಾಸಕರ ನಿಧಿಯ 2 ಕೋಟಿ ರೂ.ಗಳನ್ನು ವ್ಯಯಿಸಲಾಗುವುದು. ಇದರಲ್ಲಿ ಆಕ್ಸಿಜನ್ ಕಾನ್ಸ್‍ಂಟ್ರೇಟರ್, ಅಂಬ್ಯುಲೆನ್ಸ್ ಸೇವೆಗಳು ಸೇರಿವೆ. ಪ್ರಸಂಗ ಬಿದ್ದರೆ ಹೆಚ್ಚುವರಿಯಾಗಿಯೂ ವೈಯಕ್ತಿಕವಾಗಿ ಹಣವನ್ನು ಕೋವಿಡ್ ನಿರ್ಮೂಲನೆಗಾಗಿ ನೀಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಕೋವಿಡ್ ಲಸಿಕೆಗಳನ್ನು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಹಾಕಿಸಿಕೊಳ್ಳಬೇಕು. ಲಸಿಕೆ ಪಡೆಯುವುದರಿಂದ ಶೇ 98 ರಷ್ಟು ನಮ್ಮಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಲಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಲಸಿಕೆ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸುವಂತೆ ಅವರು ಸೂಚನೆ ನೀಡಿದರು.
ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ. ಶಶಿಧರ ಬಗಲಿ, ಬೆಳಗಾವಿ ಆರೋಗ್ಯ ಇಲಾಖೆಯ ವಿಭಾಗೀಯ ಸಹನಿರ್ದೇಶಕ ಡಾ. ಪ್ರಭು ಬಿರಾದಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಾಂತ ಮುನ್ಯಾಳ, ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶೈಲೇಶ ಗಡೇದ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ಟಿಎಚ್‍ಓ ಡಾ.ಮುತ್ತಣ್ಣ ಕೊಪ್ಪದ, ಸಿಎಂಓ ಡಾ. ರವೀಂದ್ರ ಅಂಟಿನ್, ಲೇಕ್‍ವ್ಯೂವ್ ಆಸ್ಪತ್ರೆಯ ನಿರ್ದೇಶಕ ಡಾ. ಗಿರೀಶ ಸೋನವಾಲ್ಕರ, ಲೇಕ್‍ವ್ಯೂವ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಶಿಕಾಂತ ಕುಲಗೋಡ, ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕರವೀರಪ್ರಭು ಕ್ಯಾಲಕೊಂಡ, ಗೋಕಾಕ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಡಾ. ಸಂದೀಪ ದಂಡಿನ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಪಿಐ ಶ್ರೀಶೈಲ ಬ್ಯಾಕೂಡ, ಮೂಡಲಗಿ ಪಿಎಸ್‍ಐ ಎಚ್.ವಾಯ್. ಬಾಲದಂಡಿ, ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ತಜ್ಞ ವೈದ್ಯ ಡಾ.ಆರ್.ಎಸ್. ಬೆಣಚಿನಮರಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವೈದ್ಯರ ದಿನಾಚರಣೆ ಅಂಗವಾಗಿ ಅವಳಿ ತಾಲೂಕುಗಳ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸತ್ಕರಿಸಿದರು.