ಗೋಕಾಕ : ಗೋಕಾಕ ಸುತ್ತ ಮುತ್ತ ಉತ್ತಮ ಮಳೆ : ಮಾಜಿ ಸಚಿವ ಬಾಲಚಂದ್ರ ಹರ್ಷ
ಗೋಕಾಕ ಸುತ್ತ ಮುತ್ತ ಉತ್ತಮ ಮಳೆ : ಮಾಜಿ ಸಚಿವ ಬಾಲಚಂದ್ರ ಹರ್ಷ
ಗೋಕಾಕ ಸೆ 15 : ಕಳೆದೊಂದು ವಾರದಿಂದ ಗೋಕಾಕ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಸಂತಸದಲ್ಲಿದ್ದಾರೆ. ಹಿಂಗಾರು ಬೆಳೆಗಳಿಗೆ ಈ ಮಳೆ ಪೂರಕವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬರಗಾಲದ ಛಾಯೆಯಲ್ಲಿದ್ದ ನಮ್ಮ ರೈತರಿಗೆ ಈ ಮಳೆಯಿಂದ ಹರ್ಷ ಇಮ್ಮಡಿಗೊಂಡಿದೆ. ಗೋಕಾಕ ತಾಲೂಕಿನಲ್ಲಿ ವ್ಯಾಪಕವಾಗಿ ವರುಣನ ಅರ್ಭಟ ಮುಂದುವರೆದಿದೆ. ಅರಭಾವಿ ಮತಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿಯೂ ವರುಣನು ಹರಿಸಿದ್ದಾನೆ. ಹೀಗಾಗಿ ಹಿಂಗಾರು ಬೆಳೆಗಳ ಸ್ಥಿತಿ ಆಶಾದಾಯಕವಾಗಿದೆ. ವರುಣನ ಕೃಪೆಯಿಂದ ಹಿಡಕಲ್ ಜಲಾಶಯವು ತುಂಬುತ್ತಿದೆ. ಈಗಾಗಲೇ 35 ಟಿಎಂಸಿವರೆಗೆ ಜಲಾಶಯದಲ್ಲಿ ನೀರು ಸಂಗ್ರಹವಾಗಿದೆ ಎಂದು ಅವರು ಹೇಳಿದ್ದಾರೆ.
ವರುಣನ ಆಶೀರ್ವಾದ ಹೀಗೆಯೇ ಮುಂದುವರೆದರೆ ಮುಂದಿನ ಅಕ್ಟೋಬರ ತಿಂಗಳವರೆಗೆ 45 ಟಿಎಂಸಿ ನೀರು ಸಂಗ್ರಹವಾಗುವ ಲಕ್ಷಣಗಳಿವೆ. ಕುಡಿಯುವ ನೀರಿಗಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದ ಜನರಿಗೆ ಸತತ ಸುರಿಯುತ್ತಿರುವ ಮಳೆಯಿಂದಾಗಿ ಕುಡಿಯುವ ನೀರಿನ ಹಾಹಾಕಾರ ತಪ್ಪಿದಂತಾಗಿದೆ. ಹಿಡಕಲ್ ಜಲಾಶಯದಲ್ಲಿ ಅಕ್ಟೋಬರ್ ತಿಂಗಳವರೆಗೆ ನೀರನ್ನು ಸಂಗ್ರಹಿಸಬೇಕು. ಸಂಗ್ರಹವಾದ ನೀರನ್ನು ನವ್ಹೆಂಬರ ತಿಂಗಳಲ್ಲಿ ಆಗಿನ ಪರಿಸ್ಥಿತಿ ಅನುಸಾರ ನೀರಿನ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ರೈತರ ಹಿತದೃಷ್ಟಿಯಿಂದ ನೀರನ್ನು ಹರಿಸುವ ಬಗ್ಗೆ ಶಾಸಕರ ಅಭಿಪ್ರಾಯ ಪಡೆದು ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವಂತೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ.
ಎಪ್ರೀಲ್-ಮೇ ತಿಂಗಳಲ್ಲಿ ಬೇಸಿಗೆ ಬರುವುದರಿಂದ ಜನರಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಜಲಾಶಯದಲ್ಲಿ ನೀರು ಸಂಗ್ರಹಿಸುವುದು ಅತ್ಯವಶ್ಯವಾಗಿದೆ. ಇದರಿಂದ ಬೇಸಿಗೆಯನ್ನು ಎದುರಿಸಲಿಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಮಳೆಯ ಮಧ್ಯೆಯೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಳೆದೊಂದು ವಾರದಿಂದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವನೆಯಿಂದ ಮಳೆಯಲ್ಲಿಯೇ ಜನರ ಕುಂದುಕೊರತೆಗಳನ್ನು ನೀಗಿಸುತ್ತಿರುವುದಕ್ಕೆ ಕ್ಷೇತ್ರದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.