ಗೋಕಾಕ:ಕೊರೋನಾ ಹಿನ್ನೆಲೆ : ಮಾಸ್ಕ ಧರಿಸಿ , ಸಾಮಾಜಿಕ ಅಂತರ ಕಾಯ್ದುಕೊಂಡು ಬಕ್ರೀದ್ ಹಬ್ಬ ಆಚರಣೆ
ಕೊರೋನಾ ಹಿನ್ನೆಲೆ : ಮಾಸ್ಕ ಧರಿಸಿ , ಸಾಮಾಜಿಕ ಅಂತರ ಕಾಯ್ದುಕೊಂಡು ಬಕ್ರೀದ್ ಹಬ್ಬ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 21 :
ಮಹಾಮಾರಿ ಕೊರೋನಾ ಮಧ್ಯದಲ್ಲಿ ಇಲ್ಲಿಯ ಮುಸ್ಲಿಂ ಬಾಂಧವರು ತ್ಯಾಗ , ಬಲಿದಾನಗಳ ಪ್ರತೀಕವಾದ ಈದುಲ್ಲ್ ಅಝ್ಹಾ ( ಬಕ್ರೀದ್ ) ಹಬ್ಬದ ಪ್ರಯುಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು , ಮಾಸ್ಕ ಧರಿಸಿ ತಮ್ಮ ತಮ್ಮ ಗಲ್ಲಿಯಲ್ಲಿರುವ ಮಸೀದಗಳಲ್ಲಿ ಬುಧವಾರದಂದು ಸಾಮೂಹಿಕ ಪ್ರಾರ್ಥನೆ ಮಾಡಿ ಈದ್ ಆಚರಿಸಿದರು
ಬಕ್ರೀದ್ ಹಬ್ಬದ ಸಲುವಾಗಿ ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ನಗರದ ಹೊಸಪೇಟೆ ಗಲ್ಲಿಯ ನೂರಾನಿ ಮಸೀದ, ಅಂಬೇಡ್ಕರ್ ನಗರದ ಮದೀನಾ, ಈದ್ಗಾ ಮತ್ತು ಮಕ್ಕಾ ಮಸೀದ , ಹಾಳಬಾಗ ಗಲ್ಲಿಯ ಹಾಜಿ ಮಸೀದ , ಜಲಾಲಗಲ್ಲಿಯ ಜಾಮೀಯಾ ಮಸೀದ, ಬಾಂಬೆಚಾಳನ ಗಮಾಮ , ಮಹಾಲಿಂಗೇಶ್ವರ ನಗರದ ಉಸ್ಮಾನೀಯಾ ಮಸೀದ , ಜನತಾ ಪ್ಲಾಟ್ ನ ಸಾಹಾಬಾ ಮಸೀದ , ಬಸವ ನಗರದ ಹಜರತ ಬಿಲಾಲ ಮಸೀದ ಸೇರಿದಂತೆ ನಗರದಲ್ಲಿಯ ಒಟ್ಟು 31 ಮಸೀದಗಳಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಅಂಗವಾಗಿ ಒಂದು ಬಾರಿಗೆ 50 ಜನರಂತೆ ಪ್ರತಿ ಮಸೀದಿಯಲ್ಲಿ ಮೂರ್ನಾಲ್ಕು ಸಾರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕೊರೋನಾ ಮಹಾಮಾರಿಗೆ ಮಂಕಾದ ಬಕ್ರೀದ್ :
ವರ್ಷದಲ್ಲಿ ಎರೆಡು ಸಾರಿ ಈದ್ಗಾ ಮೈದಾನದಲ್ಲಿ ಜರಗುವ ವಿಶೇಷ ಪ್ರಾರ್ಥನೆಯಲ್ಲಿ ಕಿಕ್ಕಿರಿದು ಸೇರುತ್ತಿದ್ದ ಮುಸ್ಲಿಂ ಬಾಂಧವರು, ಬೆಂಬಿಡದೆ ಕಾಡುತ್ತಿರುವ ಮಾಹಾಮಾರಿ ಕೊರೋನಾ ವೈರಸ್ ಹರಡುವಿಕೆಯಿಂದ ಈ ಬಾರಿಯೂ ಸಹ ಈದ್ ಸರಳವಾಗಿ ಆಚರಿಸಿದ್ದು ಕಂಡು ಬಂದಿತ್ತು . ಸಂಪೂರ್ಣ ತುಂಬಿ ತುಳುಕುತ್ತಿದ ಈದ್ಗಾ ಮೈದಾನ ಕೊರೋನಾ ಹಿನ್ನಲೆಯಲ್ಲಿ ಸಂಪೂರ್ಣ ಖಾಲಿಯಾಗಿ ಬಿಕ್ಕೋ ಎನ್ನುತಿತ್ತು. ಕೇವಲ ಬೆರೆಳನಿಕೆ ಜನ ಮಾತ್ರ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಉಳಿದವರೆಲ್ಲ ತಮ್ಮ ತಮ್ಮ ಓಣಿಯಲ್ಲಿರು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಮಸೀದಿಯಲ್ಲಿ ಈದ್ ಪ್ರಾರ್ಥನೆಗಾಗಿ ಬರುತಿದ್ದ ಎಲ್ಲರ ಮುಖದಲ್ಲಿ ಕೊರೋನಾ ವೈರಸ್ ನ ಕರಾಳ ಛಾಯೆ ಆವರಿಸಿತ್ತು. ಕೊರೋನಾ ವೈರಸ್ ಭಯ ಹಾಗೂ ಸರಕಾರದ ಮಾರ್ಗಸೂಚಿಯಂತೆ ಯಾರೊಬ್ಬರೂ ಹಸ್ತಲಾಘವ ಮಾಡದೆ ಬಾಯಿಂದ ಮಾತ್ರ ಈದ್ ಶುಭಾಶಯಗಳನ್ನು ಸಲ್ಲಿಸುತ್ತಿದ್ದ ದೃಶ್ಯಗಳು ಎಲ್ಲಾ ಮಸೀದಗಳ ಆವರಣದಲ್ಲಿ ಕಂಡು ಬರುತ್ತಿದ್ದವು .
ಈ ಸಂದರ್ಭದಲ್ಲಿ ಮೌಲಾನ ಜಮ್ಮಶೇದ ಆಲಂ ರಹೆಮಾನಿ, ಹಾಜಿ ಕುತುಬುದ್ದೀನ ಬಸ್ಸಾಪೂರ, ಸ್ಥಾಯಿ ಸಮಿತಿ ಚೇರಮನ್ ಕೆ.ಎಂ ಗೋಕಾಕ, ಅಂಜುಮನ್ ಅಧ್ಯಕ್ಷ ಜಾವೇದ ಗೋಕಾಕ, ಎಂ.ಡಿ.ಥರಥರಿ , ರಪೀಕ ಹಿರೇಕೂಡಿ, ಜಮಾಲ ಅಕ್ತರ ಹುಕ್ಕೇರಿ, ಇಸ್ಮಾಯಿಲ್ ಜಮಾದಾರ ಉಪಸ್ಥಿತರಿದ್ದರು .