ಗೋಕಾಕ:ಸ್ವರ ಸಾಧನ ಸಂಗೀತ ವಿದ್ಯಾಲಯದಿಂದ ಗುರು ವಂದನಾ ಹಾಗೂ ಸ್ವರ ನಮನ ಕಾರ್ಯಕ್ರಮ
ಸ್ವರ ಸಾಧನ ಸಂಗೀತ ವಿದ್ಯಾಲಯದಿಂದ ಗುರು ವಂದನಾ ಹಾಗೂ ಸ್ವರ ನಮನ ಕಾರ್ಯಕ್ರಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 7 :
ಸಂಗೀತಕ್ಕೆ ಆಗಾಧವಾದ ಅದ್ಭುತವಾದ ಶಕ್ತಿ ಇದ್ದು, ಸಂಗೀತದಿಂದ ಶಾಂತಿ ಸಮಾಧಾನ ಲಭಿಸುತ್ತದೆ ಎಂದು ಇಲ್ಲಿಯ ಜ್ಞಾನ ಮಂದಿರ ಅಧ್ಯಾತ್ಮ ಕೇಂದ್ರದ ಧರ್ಮದರ್ಶಿನಿ ಸುವರ್ಣಾತಾಯಿ ಹೊಸಮಠ ಹೇಳಿದರು.
ಶನಿವಾರದಂದು ನಗರದ ಜ್ಞಾನ ಮಂದಿರ ಅಧ್ಯಾತ್ಮ ಕೇಂದ್ರದಲ್ಲಿ ಇಲ್ಲಿಯ ಸ್ವರ ಸಾಧನ ಸಂಗೀತ ವಿದ್ಯಾಲಯದಿಂದ ಗುರು ವಂದನಾ ಹಾಗೂ ಸ್ವರ ನಮನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಸಂಗೀತವು ಮಾನವನ ಜೀವನಕ್ಕೆ ಪ್ರೇರಕ ಶಕ್ತಿಯಾಗಿದೆ, ಸಾಧನೆ ಮಾಡಲು, ಮನಸ್ಸಿನ ಹತೋಟಿಗೆ ತೆಗೆದುಕೊಳ್ಳುಲು ಸಂಗೀತ ಮಾಂತ್ರಿಕ ಶಕ್ತಿಯಾಗಿದೆ. ಜೀವನದಲ್ಲಿ ಎಲ್ಲವನ್ನು ಕಳೆದುಕೊಳ್ಳಬಹುದು ಆದರೆ ಕಲಿತ ವಿದ್ಯೆಯನ್ನು ಎಂದೆಂದಿಗೂ ಕಳೆದುಕೊಳ್ಳಲಾಗುದು, ಜೀವನದಲ್ಲಿ ಸಾಧನೆ ಮಾಡಲು ಗುರು ಮಾರ್ಗದರ್ಶನ ಪ್ರಮುಖವಾಗಿದೆ. ಗುರುವಿನ ಗುಲಾಮರಾಗಿ ಕಲಿತರೇ ಸಾಧಕರಾಗಲು ಸಾಧ್ಯವಾಗುತ್ತದೆ. ಗೋಕಾವಿ ನಾಡು ಸಂಗೀತದ ಉಗಮಸ್ಥಾನವಾಗಿದೆ ಎಂದು ತಿಳಿಸಿದರು.
ನಿವೃತ್ತ ಸಂಗೀತ ಶಿಕ್ಷಕ ಪಂಡಿತ ಮಲ್ಲಿಕಾರ್ಜುನ ವಕ್ಕುಂದ ಅವರು ಸ್ವರ ಸಾಧನ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗುರು ವಂದನೆ ಹಾಗೂ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿ, ಭಾರತೀಯ ಸಂಸ್ಕøತಿ ಪ್ರತೀಕವಾಗಿರುವ ಸಂಗೀತವು ತನ್ನದೆಯಾದ ಇತಿಹಾಸವನ್ನು ಹೊಂದಿದೆ. ಇಂದಿನ ಆಧುನಿಕತೆ ಹಾಗೂ ಪಾಶ್ಚಿಮಾತ್ಯ ಸಂಗೀತದ ಭರಾಟೆಯಲ್ಲಿ ನಮ್ಮ ಸಂಸ್ಕøತಿಯ ಸಂಗೀತವು ಅವನತಿಯತ್ತ ಸಾಗುತ್ತಿದ್ದು ಅದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಯುವ ಸಮುದಾಯ ಮಾಡಬೇಕಾಗಿದೆ. ಗುರು-ಶಿಷ್ಯರ ಬಾಂಧ್ಯವದ ಪರಂಪರೆಯು ಮುಂದುವರೆಯಲಿ, ಸಾಧನೆಗೆ ಗುರುವಿನ ಮಾರ್ಗದರ್ಶನ ಅತ್ಯವಶ್ಯವಾಗಿದೆ ಎಂದು ತಿಳಿಸಿದರು.
ಸ್ವರ ಸಾಧನ ಸಂಗೀತ ವಿದ್ಯಾಲಯದ ಮುಖ್ಯಸ್ಥರಾಗಿರುವ ಗುರುಪಾದ ಮದೆನ್ನವರ ಮಾತನಾಡಿ ಯುವ ಜನಾಂಗ ಟ್ರಾಕ್ ಸಿಂಗಿಂಗ್‍ಗೆ ಮಾರು ಹೋಗುತ್ತಿದ್ದು, ನಮ್ಮ ಹಿಂದುಸ್ತಾನಿ, ಶಾಸ್ತ್ರೀಯ ಸಂಗೀತವನ್ನು ಮರೆಯುತ್ತಿದ್ದಾರೆ. ಸಂಗೀತವನ್ನು ಕಲಿತು, ಅರಿತು, ಅನುಭವಿಸಿ ಹಾಡುವುದು ಮುಖ್ಯವಾಗಿದೆ. ಗೋಕಾವಿ ಪರಂಪರೆಯ ನಾಡು ಕಲೆಗಳ ತವರೂರಾಗಿದೆ. ಗೋಕಾವಿ ನಾಡಿನ ಸಂಗೀತದ ಪ್ರತಿಭೆಯಾದ ಓಂಕಾರ ಪತ್ತಾರ ಸಾಕ್ಷಿಯಾಗಿದ್ದಾರೆ. ಇಂತಹ ಹಲವಾರು ಪ್ರತಿಭೆಗಳು ನಮ್ಮಲಿದ್ದು ಅವರಿಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಶಾಮರಾವ ಕರಿಕಟ್ಟಿ, ಕಲಾವಿದರಾದ ಈಶ್ವರಚಂದ್ರ ಬೆಟಗೇರಿ, ಕಾಡೇಶಕುಮಾರ ಜಿ.ಕೆ. ಲೇಖಕಿ ವಿದ್ಯಾ ರೆಡ್ಡಿ, ಶಿಕ್ಷಕ ರಾಮಚಂದ್ರ ಕಾಕಡೆ, ಶಿವಾನಂದ ಪೂಜೇರಿ, ಮಹಾಂತೇಶ ದಾಸಪ್ಪನವರ, ಶಿವಾಜಿ ಪಾಟೀಲ, ಅಜಾದ ಸನದಿ, ಮುನ್ನಾ ಪಠಾಣ, ಮಹಾಂತೇಶ ಆಡಕಾಯಿ ಸೇರಿದಂತೆ ಅನೇಕರು ಇದ್ದರು.