ಗೋಕಾಕ:‘ಕ್ಷತ್ರೀಯ ಮರಾಠಾ ಸಮಾಜಕ್ಕೆ ಬೊಮ್ಮಾಯಿ ಮಂತ್ರಿಮಂಡಳದಲಿ ಪ್ರಾತಿನಿಧ್ಯ ನೀಡಲು ಆಗ್ರಹ
‘ಕ್ಷತ್ರೀಯ ಮರಾಠಾ ಸಮಾಜಕ್ಕೆ ಬೊಮ್ಮಾಯಿ ಮಂತ್ರಿಮಂಡಳದಲಿ ಪ್ರಾತಿನಿಧ್ಯ ನೀಡಲು ಆಗ್ರಹ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10 :
ಕರ್ನಾಟಕದಲ್ಲಿ 45 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಕ್ಷತ್ರೀಯ ಮರಾಠಾ ಸಮಾಜಕ್ಕೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮಂತ್ರಿ ಮಂಡಳದಲ್ಲಿ ಸಮಾಜದ ಕನಿಷ್ಠ ಓರ್ವರಿಗಾದರೂ ಸಚಿವ ಸ್ಥಾನ ನೀಡದೇ ಸಮಾಜವನ್ನು ನಿರ್ಲಕ್ಷಿಸಲಾಗಿದೆ ಎಂದು ಗೋಕಾಕ ತಾಲ್ಲೂಕು ಕ್ಷತ್ರೀಯ ಸಮಾಜ ಆರೋಪಿಸಿದೆ.
ಮಂಗಳವಾರ ಸಂಜೆ ನಗರದ ವಿಠ್ಠಲ-ರುಕ್ಮಾಯಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡ ಸಮಾಜದ ಮುಖಂಡರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕ್ಷತ್ರೀ ಸಮಾಜದ ಒಬ್ಬರಿಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಒತ್ತಾಯಿಸಲಾಯಿತು.
ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ, ನಗರಸಭೆ ಮಾಜಿ ಸದಸ್ಯ ಜ್ಯೋತಿಬಾ ಸುಭಂಜಿ, ಹಿರಿಯ ವಕೀಲ ಎಂ.ಎನ್.ಸಾವಂಜಿ, ನಿವೃತ್ತ ಪ್ರಾಧ್ಯಾಪಕ ಎಸ್.ಎ.ಗಾಯಕವಾಡ, ವಕೀಲ ಎಸ್.ಡಿ.ಜಾಧವ, ಇನ್ನೋರ್ವ ನಗರಸಭೆ ಮಾಜಿ ಸದಸ್ಯ ಪರಶುರಾಮ ಭಗತ ಅವರು ಹಿಂದುತ್ವವನ್ನೇ ಸದಾ ಬೆಂಬಲಿಸಿಕೊಂಡು, ಅದನ್ನೇ ಬೆನ್ನೆಲುಬಾಗಿಸಿಕೊಂಡ ಭಾರತೀಯ ಜನತಾ ಪಕ್ಷವನ್ನು ಕ್ಷತ್ರೀಯ ಮರಾಠಾ ಸಮಾಜ ಇದುವರೆಗೆ ಬೆಂಬಲಿಸುತ್ತಾ ಬಂದಿದೆ. ವಿವಿಧ ರಾಜಕೀಯ ಪಕ್ಷಗಳ ಈ ಹಿಂದಿನ ಸರ್ಕಾರಗಳು ನಮ್ಮ ಸಮಾಜಕ್ಕೆ ಸೇರಿದ ಕನಿಷ್ಠ ಒಬ್ಬೊಬ್ಬ ಶಾಸಕರಿಗೆ ಮಂತ್ರಿ ಮಂಡಳದಲ್ಲಿ ಅವಕಾಶ ನೀಡಿದಂತೆಯೇ ಈ ಸರ್ಕಾರದ ಅವಧಿಯಲ್ಲೂ ಅವಕಾಶ ಕಲ್ಪಿಸಲೇಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಬಿಜೆಪಿ ಸರ್ಕಾರ ನಮ್ಮ ಸಮಾಜದ ಬೇಡಿಕೆಯನ್ನು ಪರಿಗಣಿಸಬೇಕು. ತಪ್ಪಿದಲ್ಲಿ, ಮುಂಬರುವ ಚುನಾವಣೆ ವೇಳೆ ಕ್ಷತ್ರೀಯ ಮರಾಠಾ ಸಮಾಜ ಬಾಂಧವರು ತಮ್ಮ ಮತವನ್ನು ಯಾರ ಪರ ಚಲಾಯಿಸಬೇಕು ಎಂದು ಪರಾಮರ್ಶಿಸಬೇಕಾ ಅನಿವಾರ್ಯತೆ ಎದುರಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗೋಕಾಕ ತಾಲ್ಲೂಕು ಕ್ಷತ್ರೀಯ ಸಮಾಜದ ಅಧ್ಯಕ್ಷ ದಶರಥ ಗುಡ್ಡದಮನಿ, ರಾಜು ಪವಾರ, ವಿಜಯ ಜಾಧವ, ದೀಪಕ ಮಾಂಗಳೇಕರ, ಸಚಿನ ಜಾಧವ, ನಗರಸಭೆ ಸದಸ್ಯ ಪ್ರಕಾಶ ಮುರಾರಿ, ಕೇದಾರಿ ಪವಾರ, ಪುಂಡಲೀಕ ಘೋರ್ಪಡೆ, ಶಿಕ್ಷಕ ರಾಮಚಂದ್ರ ಕಾಕಡೆ ಮೊದಲಾದ ಸಮಾಜದ ಪ್ರಮುಖರು ಇದ್ದರು.