ಗೋಕಾಕ:ನಾಡಿನ ಕೆಲವೊಂದು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ : ಡಾ.ಸಿ.ಕೆ ನಾವಲಗಿ
ನಾಡಿನ ಕೆಲವೊಂದು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ : ಡಾ.ಸಿ.ಕೆ ನಾವಲಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 12 :
ನಾಡಿನಲ್ಲಿ ಆಚರಿಸುವ ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರು ಸಹ ಕೆಲವೊಂದು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ ಇದನ್ನು ಹೊಗಲಾಡಿಸಲು ನಾಗರ ಪಂಚಮಿಯಂದು ಶ್ರೀ ಮಠದಿಂದ ಹಾಲನ್ನು ರೋಗಿಗಳಿಗೆ ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ ಎಂದು ಸಾಹಿತಿ ಡಾ. ಸಿ.ಕೆ ನಾವಲಗಿ ಹೇಳಿದರು.
ಗುರುವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಇಲ್ಲಿನ ಶೂನ್ಯ ಸಂಪಾದನ ಮಠದ ವತಿಯಿಂದ ನಾಗರ ಪಂಚಮಿ ಹಬ್ಬದ ನಿಮಿತ್ಯ ಬಡ ರೋಗಿಗಳಿಗೆ ಹಾಲು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾಗರಪಂಚಮಿಯಂದು ಹುತ್ತಕ್ಕೆ ಹಾಲು ಸುರಿದು ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ಪ್ರತಿ ವರ್ಷ ಅಪೌಷ್ಟಿಕತೆಯಿಂದ 40ಸಾವಿರಕ್ಕಿಂತ ಹೆಚ್ಚು ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಹುತ್ತಕ್ಕೆ ಎರೆದು ಹಾಲನ್ನು ವ್ಯರ್ಥ ಮಾಡುವ ಬದಲು ಮಕ್ಕಳಿಗೆ ಮತ್ತು ಬಡವರಿಗೆ ಕೊಟ್ಟರೆ ಅದು ಅಮೃತವಾಗುತ್ತದೆ. ಈ ಕುರಿತು ಜನರು ಚಿಂತಿಸಬೇಕಾದ ಅಗತ್ಯವಿದೆ’ ಎಂದರು.
‘ಬಡ ಮಕ್ಕಳು, ಅನಾಥಾಶ್ರಮ ಹಾಗೂ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಈ ಹಾಲು ಹಂಚುವ ಮೂಲಕ ಶೂನ್ಯ ಸಂಪಾದನ ಮಠದ ಶ್ರೀಗಳು ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ. ಎಲ್ಲರೂ ಮೂಢನಂಬಿಕೆಯಂತಹ ಆಚರಣೆಗಳನ್ನು ಬಿಟ್ಟು ಹೋರ ಬರಬೇಕಾಗಿದೆ ಎಂದು ಡಾ. ಸಿ.ಕೆ ನಾವಲಗಿ ಹೇಳಿದರು.
ಈ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಶ್ರೀ ಮುರುಘಾಜೇಂದ್ರ ಮಹಾಸ್ವಾಮಿಗಳು, ಡಾ.ರವೀಂದ್ರ ಅಂಟಿನ, ಮಲ್ಲಿಕಾರ್ಜುನ ಈಟಿ, ಮಹಾಂತೇಶ ಕುರಬೇಟ, ಬಸನಗೌಡ ಪಾಟೀಲ, ಬಸವರಾಜ ಹತರಕಿ, ಬಸವರಾಜ ಖಾನಪ್ಪನ್ನವರ,ಮೈಲಾರಲಿಂಗ ಉಪ್ಪಿನ, ಎಸ್.ಕೆ ಮಠದ, ವೀಣಾ ಹಿರೇಮಠ, ಶಕುಂತಲಾ ಕಟ್ಟಿ, ರಾಜೇಶ್ವರಿ ಬೇಟ್ಟದಗೌಡರ, ಸೇವಂತಾ ಮುಚ್ಚಂಡಿ ಹಿರೇಮಠ, ಆರ್. ಎಲ್. ಮಿರ್ಜಿ, ಮಹಾದೇವಿ ಕಿರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .