RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮನವಿ

ಗೋಕಾಕ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮನವಿ 

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮನವಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17 :

 

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಭೀಮಶಿ ಗದಾಡಿ ಅವರ ನೇತ್ರತ್ವದಲ್ಲಿ ಮಂಗಳವಾರದಂದು ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದ ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಕಾರ್ಯಾಲಯದ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಕಳೆದ 2019 ಹಾಗೂ 2020 ಸಾಲಿನಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಯಾದ ಮನೆ ಹಾಗೂ ಬೆಳೆಗಳಿಗೆ ಇನ್ನೂವರೆಗೂ ಪರಿಹಾರ ದೊರಕಿಲ್ಲ. ಅಲ್ಲದೇ ಕಳೆದ ತಿಂಗಳು ಪ್ರವಾಹ ಹಾಗೂ ಅತಿ ವೃಷ್ಟಿಯಿಂದ ಹಾನಿಯಾದ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಮಾಡಿಲ್ಲ, ಇದಕ್ಕೆಲ್ಲಾ ಯಾರು ಹೊಣೆ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಭೀಮಶಿ ಗದಾಡಿ ಅವರು ಖಾರವಾಗಿ ಪ್ರತಿಕ್ರೀಯಿಸಿದರು.
ಇತ್ತಿಚೆಗೆ ಸುರಿದ ಮಳೆ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾದ ಪ್ರದೇಶಗಳ ಸರ್ವೆ ಕಾರ್ಯವನ್ನು ಯಾವಾಗ ಆರಂಭಿಸುತ್ತಿರಿ. ನೀವು ಬರುವ ದಾರಿಯನ್ನು ರೈತರು ಕಾಯಬೇಕಾ.. ನಾವು ಇನ್ನೊಂದು ಬೆಳೆ ಬೆಳೆಯಲು ಬಿತ್ತನೆ ಮಾಡಬೇಕಾ ಅಥವಾ ಬೇಡವಾ ಎಂದು ಪ್ರಶ್ನಿಸಿದರು.
ಆಧಾರ ಕಾರ್ಡ ತಿದ್ದುಪಡಿಗಾಗಿ ಸಾರ್ವಜನಿಕರು ಕಳೆದು ಎಂಟು ತಿಂಗಳಿನಿಂದ ತಹಶೀಲದಾರ ಕಾರ್ಯಲಯಕ್ಕೆ ಅಲೆದಾಡುತ್ತಿದ್ದು, ಆಧಾರ ಕೇಂದ್ರ ಬಂದಾಗಿದ್ದು ಇನ್ನೂ ಕೆಲವು ಖಾಸಗಿ ಹಾಗೂ ಬ್ಯಾಂಕ್‍ಗಳಲ್ಲಿರುವ ಆಧಾರ ಕೇಂದ್ರಗಳಲ್ಲಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದರು.
ಪಹಣಿ ಪತ್ರಿಕೆ ವಿತರಣಾ ಕೇಂದ್ರದಲ್ಲಿರುವ ಮಹಿಳಾ ನೌಕರಳು ರೈತರೊಂದಿಗೆ ಸೌಜ್ಯನಯುತವಾಗಿ ವರ್ತಿಸುತ್ತಿಲ್ಲ, ಪಹಣಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ನಾಡ ಕಚೇರಿಗಳಲ್ಲಿ ಹಾಗೂ ಕಂದಾಯ ಇಲಾಖೆಯ ಪಡಸಾಲೆಯಲ್ಲಿ ಪಹಣಿ ಪತ್ರಿಕೆಗಳನ್ನು ವಿತರಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕಾರಣವೇನೆಂದು ಗದಾಡಿ ಅವರು ತಹಶೀಲದಾರರನ್ನು ಪ್ರಶ್ನಿಸಿದರು. ಇನ್ನೂ ಎಂಟು ದಿನಗಳಲ್ಲಿ ಸಮಸ್ಯೆಗೆ ಸ್ಪಂದಿಸದಿದ್ದರೆ ಮಿನಿ ವಿಧಾನ ಸೌಧದ ಆವರಣದಲ್ಲಿ ರೈತರು ತಮ್ಮ ಕುಟುಂಬದ ಜೊತೆಗೆ ದನಕರಗಳೊಂದಿಗೆ ಬಂದು ಅನಿರ್ಧೀಷ್ಠಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರ ಪ್ರಶ್ನೆಗೆ ಉತ್ತರಿಸಿದ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು, ತಾಂತ್ರಿಕ ತೊಂದರೆಯಿಂದ ಕಳೆದು ಪ್ರೆಬುವರಿ ತಿಂಗಳಿನಿಂದ ಆಧಾರ ಕೇಂದ್ರ ಹಾಗೂ ಪಹಣಿ ಪತ್ರಿಕೆ ವಿತರಣಾ ಕೇಂದ್ರಗಳು ಬಂದಾಗಿದ್ದು ಈ ಸಮಸ್ಯೆಯನ್ನು ಎಂಟು ದಿನದಲ್ಲಿ ಬಗೆ ಹರಿಸಲಾಗುವುದೆಂದು ತಹಶೀಲದಾರರು ತಿಳಿಸಿದರು.
ಬೆಳೆ ಹಾನಿಯ ಬಗ್ಗೆ ಈಗಾಗಲೇ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಅಂತಿಮ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಪ್ರವಾಹದ ನೀರು ಮನೆಗಳ ನುಗ್ಗಿದ ಕುರಿತು ಮಾಹಿತಿಯನ್ನು ಕಲೆ ಹಾಕಲಾಗಿದ್ದು ಇನ್ನೂ ಕೆಲವೊಂದು ಗ್ರಾಮಗಳ ಮಾಹಿತಿ ಬರಬೇಕಿದೆ. ಶೀಘ್ರದಲ್ಲಿ ಸಂತ್ರಸ್ತರ ಖಾತೆಗಳಿಗೆ ಪರಿಹಾರ ವರ್ಗಾವಣೆ ಮಾಡಲಾಗುವುದು. ಆಧಾರ ಕೇಂದ್ರಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಅವರ ಸಭೆಯನ್ನು ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಮುತ್ತೇಪ್ಪ ಬಾಗನ್ನವರ, ಮುಖಂಡರಾದ ಶಂಕರ ಮದಿಹಳ್ಳಿ, ರಾಯಪ್ಪ ಗೌಡಪ್ಪನವರ, ಕುಮಾರ ತಿಗಡಿ, ರಮೇಶ ಗುದಿಗೊಪ್ಪ, ಎಸ್.ಎಂ. ಬಿಳ್ಳೂರು, ಮುದಕಪ್ಪ ಬನಾಜ, ನಿಂಗಪ್ಪ ಗೌಡರ, ಮುತ್ತೇಪ್ಪ ಹುಲಕುಂದ, ಸಿದ್ದಪ್ಪ ತಪಸಿ,ಶಿವು ಇಳಿಗೇರ, ಸಿದ್ದಪ್ಪ ಖನವಿ,ಸಿದ್ದಪ್ಪ ಐದುಡ್ಡಿ, ಯಮನಪ್ಪ ಉಪ್ಪಾರ ಸೇರಿದಂತೆ ಅನೇಕರು ಇದ್ದರು.

Related posts: