ಗೋಕಾಕ:ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ಆರ್ಥಿಕ ಪ್ರಗತಿ : ಅಭಿಯಂತರ ಎಸ್.ಜಿ.ಲೋಕೊರ
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ಆರ್ಥಿಕ ಪ್ರಗತಿ : ಅಭಿಯಂತರ ಎಸ್.ಜಿ.ಲೋಕೊರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 19 :
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ರೈತರ ಆರ್ಥಿಕ ಪ್ರಗತಿಯೊಂದಿಗೆ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲವಾಗುತ್ತದೆ ಎಂದು ಬೆಳಗಾವಿಯ ಪಂಚಾಯತ್ ರಾಜ್ಯ ಇಂಜಿನಿಯರಿಂಗ್ ವೃತ್ತದ ಅಧೀಕ್ಷಕ ಅಭಿಯಂತರ ಎಸ್.ಜಿ.ಲೋಕೊರ ಹೇಳಿದರು.
ಗುರುವಾರದಂದು ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ಆಜಾದಿ ಕಾ ಅಮೃತಮಹೋತ್ಸವದ ಅಂಗವಾಗಿ ಜಿಲ್ಲಾ ಗ್ರಾಮೀಣ ರಸ್ತೆಗಳ ಕುರಿತು ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಚುತುಷ್ಠಪಥ ಹೆದ್ದಾರಿಗಳು ಹಾಗೂ ಗ್ರಾಮೀಣ ಭಾಗದ ರಸ್ತೆಗಳು ಜನತೆಗೆ ಹೆಚ್ಚಿನ ಸಾರಿಗೆ ಸಂರ್ಪಕ ಕಲ್ಪಿಸಿ ದೇಶದ ಆರ್ಥಿಕ ಪ್ರಗತಿಯೊಂದಿಗೆ ಗ್ರಾಮ ಸ್ವರಾಜ್ಯದ ಕನಸ್ಸನ್ನು ನನಸಾಗಿಸುತ್ತಿವೆ. ಈ ರಸ್ತೆಗಳನ್ನು ವೈಜ್ಞಾನಿಕ ಅಧ್ಯಯನದೊಂದಿಗೆ ಯೋಜನೆಗಳನ್ನು ರೂಪಿಸಿ ಗುಣಮಟ್ಟದ ರಸ್ತೆಗಳನ್ನು ಜನರ ಸಂಚಾರಕ್ಕೆ ಕಲ್ಪಿಸಲಾಗುತ್ತಿದೆ. ಜನಪ್ರತಿನಿಧಿಗಳು , ಸಾರ್ವಜನಿಕರು ಇಂತಹ ಕಾರ್ಯಾಗಾರಗಳಲ್ಲಿ ಪಾಲ್ಗೊಂಡು ಯೋಜನೆಗಳ ಮಹತ್ವವನ್ನು ಅರಿತು ಇವುಗಳ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಕಾರ್ಯಾಗಾರದಲ್ಲಿ ಪಿಎಂಜಿಎಸವಾಯ್ ರಸ್ತೆ ಆಯ್ಕೆ ಹಾಗೂ ಡಿ.ಪಿ.ಆರ್.ತಯಾರಿಕೆ ಕುರಿತು ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಸುಧಾರಾಣಿ , ರಸ್ತೆ ನಿರ್ಮಾಣದಲ್ಲಿ ನವಿನ ತಂತ್ರಜ್ಞಾನ ಬಳಕೆ ಕುರಿತು ತಾಂತ್ರಿಕ ಸಹಾಯಕ ಶಿವಾನಂದ ದೂಳಾಯಿ, ಗುಣಮಟ್ಟದ ಮೇಲ್ವಿಚಾರಣೆ ಕುರಿತು ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಗಂಗಾಧರ ಮಾತನಾಡಿದರು.
ವೇದಿಕೆಯ ಮೇಲೆ ಜಿ.ಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಿಕ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಯು.ಪಿ.ಕಾಂಬ್ಳೆ ಇದ್ದರು.
ಬಸವರಾಜ ಚೌಗಲಾ ಸ್ವಾಗತಿಸಿದರು, ಸಹಾಯಕ ಅಭಿಯಂತರ ಎಂ.ಐ ದೇಸೂರ ವಂದಿಸಿದರು.