ಗೋಕಾಕ:ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಿ : ರಾಜೇಂದ್ರ ಗೌಡಪ್ಪಗೋಳ
ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಿ : ರಾಜೇಂದ್ರ ಗೌಡಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 19 :
ವಿಶ್ವವನ್ನೇ ಆತಂಕಕ್ಕೆ ದೂಡಿರುವ ಮಹಾಮಾರಿ ಕರೋನ ಕಾಲದಲ್ಲಿ ಬಿಜೆಪಿ ಕಾರ್ಯಕರ್ತರು ಸಮಾಜ ಬಗ್ಗೆ ಅತ್ಯಂತ ಸಂವೇದನೆಯಿಂದ, ಸೇವಾ ಮನೋಭಾವನೆಯಿಂದ, ಜನಸೇವೆಯೇ ಜನಾರ್ದನ ಸೇವೆ ಎಂಬ ಭಾವನೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಬಿಜೆಪಿ ಗೋಕಾಕ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ಅವರು, ಗುರುವಾರದಂದು ನಗರದ ಶಾಸಕ ರಮೇಶ ಜಾರಕಿಹೊಳಿ ಅವರ ಕಚೇರಿಯಲ್ಲಿ ಜರುಗಿದ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಗೋಕಾಕ್ ನಗರ ಮತ್ತು ಗ್ರಾಮೀಣ ಮಂಡಳ ಆರೋಗ್ಯ ಸ್ವಯಂಸೇವಕರ ಮಂಡಲ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇಶದ ಪ್ರತಿ ಹಳ್ಳಿಗಳಲ್ಲಿರುವ ನಮ್ಮ ಕಾರ್ಯಕರ್ತರು ಕರೋನಾ ವಾರಿಯರ್ಸ್‍ಗಳಾಗಿ ವೈದ್ಯಕೀಯ ಹಾಗೂ ವೈಜ್ಞಾನಿಕ ತಳಹದಿಯ ಆಧಾರದಲ್ಲಿ ಕರೋನ ತಡೆಗಟ್ಟುವ ಅಥವಾ ಅದರ ತೀವ್ರತೆಯನ್ನು ಸಮರ್ಥವಾಗಿ ಎದುರಿಸಲು ತಯಾರಾಗುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಪೇಕ್ಷೆಯಂತೆ ದೇಶದ 2ಲಕ್ಷ ಹಳ್ಳಿಗಳಲ್ಲಿ ಪ್ರತಿ ಹಳ್ಳಿಗೆ ಇಬ್ಬರಂತೆ ಒಬ್ಬ ಪುರುಷ ಕಾರ್ಯಕರ್ತ ಮತ್ತು ಒಬ್ಬ ಮಹಿಳಾ ಕಾರ್ಯಕರ್ತರ 4ಲಕ್ಷ ಜನ ನಮ್ಮ ಕಾರ್ಯಕರ್ತರು “ಸೇವೆಯೇ ಸಂಘಟನೆ ” ಘೋಷ ವಾಕ್ಯದ ಅಡಿಯಲ್ಲಿ ವಿಶ್ವದ ಅತಿದೊಡ್ಡ “ಆರೋಗ್ಯ ಸೇವಕರ ಅಭಿಯಾನ” ದಡಿಯಲ್ಲಿ ನಾವು ಕಾರ್ಯನಿರ್ವಹಿಸಬೇಕಾಗಿದೆ. ಆರೋಗ್ಯ ಸ್ವಯಂ ಸೇವಕರ ಅಭಿಯಾನವನ್ನು ಈ ಜವಾಬ್ದಾರಿಯನ್ನು ದಕ್ಷತೆಯಿಂದ ಸಂವೇದನಾ ಶೀಲರಾಗಿ ಯಶಸ್ವಿಗೊಳಿಸೋಣ ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಸ್ವಯಂ ಸೇವಕರಿಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಆರೋಗ್ಯ ತಪಾಸಣಾ ಕಿಟ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಶಾಸಕರ ಸಹಾಯಕ ಸುರೇಶ ಸನದಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ಹಿರೇಮಠ, ಆರೋಗ್ಯ ಸ್ವಯಂ ಸೇವಕ ಜಿಲ್ಲಾ ಸಂಚಾಲಕ ವಿಶಾಲ್ ಮಾವರಕರ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲ್ಹಾರ್, ಮಹಿಳಾ ಮೋರ್ಚಾ ಸವದತ್ತಿ ಅಧ್ಯಕ್ಷೆ ಡಾ. ನೈನಾ ಭಸ್ಮೆ, ಮಹಿಳಾ ಮೋರ್ಚಾ ಗೋಕಾಕ ಗ್ರಾಮೀಣ ಅಧ್ಯಕ್ಷೆ ಭಾರತಿ ಅಂಗಡಿ ಸೇರಿದಂತೆ ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ ಪ್ರಮುಖರು, ಬಿಜೆಪಿ ಪದಾಧಿಕಾರಿಗಳು ಇದ್ದರು
.