RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕೃಷಿ ಕಾಯ್ದೆಯ ಜಾರಿ ವಿರೋಧಿಸಿ ನಗರದಲ್ಲಿ ರಸ್ತೆ ತಡೆ ನಡೆಸಿ ರೈತ ಸಂಘಟನೆಗಳ ಪ್ರತಿಭಟನೆ

ಗೋಕಾಕ:ಕೃಷಿ ಕಾಯ್ದೆಯ ಜಾರಿ ವಿರೋಧಿಸಿ ನಗರದಲ್ಲಿ ರಸ್ತೆ ತಡೆ ನಡೆಸಿ ರೈತ ಸಂಘಟನೆಗಳ ಪ್ರತಿಭಟನೆ 

ಕೃಷಿ ಕಾಯ್ದೆಯ ಜಾರಿ ವಿರೋಧಿಸಿ ನಗರದಲ್ಲಿ ರಸ್ತೆ ತಡೆ ನಡೆಸಿ ರೈತ ಸಂಘಟನೆಗಳ ಪ್ರತಿಭಟನೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 27 :

ಕೇಂದ್ರ‌ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಯ ಜಾರಿ ವಿರೋಧಿಸಿ, ರೈತ ಸಂಘಟನೆಗಳು ಕರೆ  ನೀಡಿರುವ ಭಾರತ್ ಬಂದ್ ಕರೆಗೆ  ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಹೊರ ವಲಯದ ನಾಕಾ ನಂ 1 ರಲ್ಲಿಯ  ಅಂಗಡಿ ಮುಗಟ್ಟುಗಳನ್ನು ರೈತ ಹೋರಾಟಗಾರರು  ಸಂಪೂರ್ಣವಾಗಿ ಬಂದ್ ಮಾಡಿ  ಪ್ರತಿಭಟನೆ ನಡೆಸಿದರು .ಆದರೆ ಎಂದಿನಂತೆ ಬೆಳಗಿನ ವ್ಯಾಪಾರ-ವಹಿವಾಟು ಸುಗಮವಾಗಿ ನಡೆದಿದ್ದು, ಸಾರಿಗೆ ಬಸ್‌ಗಳು, ಆಟೋ ವಾಹನಗಳು, ಖಾಸಗಿ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ. ತಾಲೂಕಿನ ಅಂಕಲಗಿ, ಘಟಪ್ರಭಾ, ಕೌಜಲಗಿ ಸೇರಿದಂತೆ ಇತರ ಗ್ರಾಮಗಳಲ್ಲಿಯೂ ಸಹ ಬಂದ್‌ಗೆ ಮಿಶ್ರ ಪ್ರಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ನೂರಾರು ರೈತರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸೋಮವಾರದಂದು ಮುಂಜಾನೆ ನಗರದ ಹೊರ ವಲಯ ನಾಕಾ ನಂ 1 ರಲ್ಲಿ ಸೇರಿದ ರೈತ ಸಂಘಟನೆ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ತಮ್ಮ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿ ಸುಮಾರು 2 ಘಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಯಿಸಿದರು. ತದ ನಂತರ ಅಲ್ಲಿಂದ ಬಸವೇಶ್ವರ ವೃತ್ತದ ವರೆಗೆ  ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.

ಬಂಡವಾಳಶಾಹಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ಹಣವಂತ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಈ ಜನ ವಿರೋಧಿ ನಡೆಯಿಂದ ಇಡೀ ರೈತ ಕುಲ ತಬ್ಬಲಿಯಾಗುವ ದುಸ್ಥಿತಿ ಬರಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರಗಳು ಕೃಷಿ ಕ್ಷೇತ್ರ ನಾಶ ಮಾಡಿ ಆಹಾರ ಭದ್ರತೆಗಾಗಿ ಹೊರ ದೇಶಗಳತ್ತ ಕೈಚಾಚುವ ಪರಿಸ್ಥಿತಿ ಸೃಷ್ಟಿಸುತ್ತಿವೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ರೈತರನ್ನು ಶೋಷಿಸುತ್ತಿವೆ. ರೈತ ವಿರೋಧಿ ಕಾಯ್ದೆಗಳನ್ನು ಮಂಡಿಸಿ ತುಘಲಕ್‌ ದರ್ಬಾರ್‌ ನಡೆಸುತ್ತಿವೆ. ಲಜ್ಜೆಗೆಟ್ಟ ಸರ್ಕಾರಗಳಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯಿಲ್ಲ’  ‘ತೈಲೋತ್ಪನ್ನ ಹಾಗೂ ಕೃಷಿ ಸಲಕರಣೆಗಳ ಬೆಲೆ ಗಗನಕ್ಕೇರಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಗಳು ರೈತರನ್ನು ಬೀದಿಗೆ ತಳ್ಳಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಹಿತ ಕಾಯಲು ಹೊರಟಿವೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಣ್ಣ ಭೂ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇಂತಹ ಕೃಷಿ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು’ ಎಂದು ರೈತ ಸಂಘಟನೆಯ ಕಾರ್ಯಕರ್ತರು  ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಭೀಮಶಿ ಗದಾಡಿ, ಮುತ್ತೆಪ್ಪ ಬಾಗನ್ನವರ, ಪ್ರಕಾಶ ಹಾಲನ್ನವರ, ಭೀಮಶಿ ಹುಲಕುಂದ, ಶಂಕರ ಮದಿಹಳ್ಳಿ, ಕುಮಾರ ತಿಗಡಿ, ರಾಯಪ್ಪ ಗೌಡಪ್ಪನವರ, ರಮೇಶ ಗೋರಿಗೋಪ್ಪ, ಮಾರುತಿ ಬೆನಚಿನಮರಡಿ, ರಮೇಶ ತಿಗಡಿ, ಬಾಳು ಮರೆಪ್ಪಗೋಳ, ಶಂಕರ ಹಾದಿಮನಿ, ನಿಂಗಪ್ಪ ಬಿಗೌಡರ, ಭೀರಪ್ಪ ಡೋಣಿ, ಮಲ್ಲೇಶ ದಂಡಿನ, ಸಿದ್ದಪ್ಪ ಗೌಡಪ್ಪನವರ, ಬಸಪ್ಪ ಕಳ್ಳಿಗುದ್ದಿ, ಯಂಕಪ್ಪ ಕೊಪ್ಪದ, ನಾನಪ್ಪ ನಾಯಿಕ, ರಾಮಣ್ಣ ಕೋಳಚಿ, ಸಿದ್ದಪ್ಪ ತಪಸಿ, ರಮೇಶ ಡೋಣಿ, ಪಾಂಡುರಂಗ ನಾಯಿಕ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: