RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ನಾನು ನಾಮಪತ್ರ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ : ವಿ.ಪ ಪಕ್ಷೇತರ ಅಭ್ಯರ್ಥಿ ಲಖನ್ ಸ್ವಷ್ಟನೆ

ಬೆಳಗಾವಿ:ನಾನು ನಾಮಪತ್ರ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ : ವಿ.ಪ ಪಕ್ಷೇತರ ಅಭ್ಯರ್ಥಿ ಲಖನ್ ಸ್ವಷ್ಟನೆ 

ನಾನು ನಾಮಪತ್ರ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ : ವಿ.ಪ ಪಕ್ಷೇತರ ಅಭ್ಯರ್ಥಿ ಲಖನ್ ಸ್ವಷ್ಟನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ನ 23 :

 

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ದ್ವಿ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಆಯ್ಕೆ ಬಯಿಸಿ ಗೋಕಾಕದ ಉದ್ಯಮಿ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.
ತಮ್ಮ ಬೆಂಬಲಿಗರು, ಕಾರ್ಯಕರ್ತರ ಒತ್ತಾಸೆ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ನಡುಕ ಸೃಷ್ಟಿಸುವಂತಾಗಿದೆ.
ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ತಮ್ಮ ಸಹಸ್ರಾರು ಬೆಂಬಲಿಗರು ಹಾಗೂ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸದಸ್ಯರ ಬೃಹತ್ ಮೆರವಣಿಗೆ ನಡೆಸುವ ಮೂಲಕ ಲಖನ್ ಜಾರಕಿಹೊಳಿ ತಮ್ಮ ಶಕ್ತಿ ಪ್ರದರ್ಶಿಸಿದರು. ಸರ್ದಾರ್ಸ ಕಾಲೇಜು ಮೈದಾನದಲ್ಲಿ ಜಮಾಯಿಸಿದ ಜಾರಕಿಹೊಳಿ ಅವರ ಬೆಂಬಲಿಗರು, ಜಿಲ್ಲೆಯ ಸ್ಥಳೀಯಸಂಸ್ಥೆಗಳ ಸದಸ್ಯರು ಲಖನ್ ಜಾರಕಿಹೊಳಿ ಪರವಾಗಿ ಘೋಷಣೆ ಕೂಗಿದರು. ಸಹಸ್ರಾರು ಬೆಂಬಲಿಗರ ಜೊತೆಗೆ ಬೃಹತ್ ಮೆರವಣಿಗೆ ಮೂಲಕ ತೆರಳಿದ ಲಖನ್ ಜಾರಕಿಹೊಳಿ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಬಳಿಯಿರುವ ಗಣೇಶ ಮಂದಿರದಲ್ಲಿ ಅಂಗಾರಿಕ ಸಂಕಷ್ಟಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಆಶ್ವಾರೂಢ ವೀರರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ತಮ್ಮ ಬೃಹತ್ ಬೆಂಬಲಿಗರೊಂದಿಗೆ ತೆರಳಿ, ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಅವರಿಗೆ ತಮ್ಮ ಉಮೇದುವಾರಿಕೆಯನ್ನೂ ಸಲ್ಲಿಸಿದರು.
ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ್ ಪಾಟೀಲ, ಕಾರ್ಮಿಕ ಧುರೀಣ ಅಂಬಿರಾವ್ ಪಾಟೀಲ, ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಉಪಸ್ಥಿತರಿದ್ದರು.
ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಲ್ಲ- ಲಖನ್ ಜಾರಕಿಹೊಳಿ ಸ್ಪಷ್ಟನೆ
ನನ್ನ ಬೆಂಬಲಿಗರು, ಮತದಾರರ ಆಶೀರ್ವಾದದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಹೊರತು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿಯಲ್ಲ ಎಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಗರದ ಸರ್ದಾರ್ಸ ಮೈದಾನದಲ್ಲಿ ತಮ್ಮ ಅಪಾರ ಅಭಿಮಾನಿ ಬಳಗದಿಂದ ಮಂಗಳವಾರ ರ‌್ಯಾಲಿ ನಡೆಸಿ ನಗರದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನನ್ನ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿಗೆ ನಷ್ಟವಾಗುತ್ತಿದೆ ಎಂದು ಕೆಲವರು ಅಪ ಪ್ರಚಾರ ನಡೆಸುತ್ತಿದ್ದಾರೆ. ನನ್ನ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿಗೆ ಯಾವುದೇ ಕಾರಣಕ್ಕೂ ನಷ್ಟವಾಗುವುದಿಲ್ಲ. ಅವರಿಗೆ ಹಾನಿಕ್ಕಿಂತ ಲಾಭವಾಗುತ್ತದೆ. ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಂತೂ ಅಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಎರಡನೇ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಟಿಕೆಟ್‌ನ್ನೇ ಕೇಳಿಲ್ಲ. ಮೊದಲೇ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದೆ. ಅದರಂತೆ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಸಹೋದರರು ಬಿಜೆಟಿ ಟಿಕೆಟ್‌ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದರು ನಿಜ. ಆದರೆ, ನಾನು ನಮ್ಮ ಬೆಂಬಲಿಗರು, ಕಾರ್ಯಕರ್ತರ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಈ ಚುನಾವಣೆಗೆ ನನಗೆ ಯಾರೂ ನನ್ನ ಪ್ರತಿಸ್ಪರ್ಧಿಯಲ್ಲ. ಈ ಕುರಿತು ನಾನು ಯಾವುದೇ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಕಾಂಗ್ರೆಸ್ , ಬಿಜೆಪಿ ಎರಡೂ ಪಕ್ಷದಲ್ಲಿ ನನ್ನ ಸಹೋದರರು ಇದ್ದಾರೆ. ಅವರು ತಮ್ಮ ತಮ್ಮ ಪಕ್ಷದ ಪರವಾಗಿ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಾರೆ. ಸತೀಶ ಜಾರಕಿಹೊಳಿ ಅವರು ಏನೇ ಹೇಳಿಕೆ ನೀಡಿದರೂ ಅವರು ಎಷ್ಟೇಯಾದರೂ ನನ್ನ ಸಹೋದರ. ನನ್ನ ಸ್ಪರ್ಧೆಗೂ, ಸಹೋದರರಿಗೂ ಸಂಬಂಧ ಇಲ್ಲ. ನಾನು ಸ್ಥಳೀಯ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೋಸ್ಕರ ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನೇನೂ ಹೆಚ್ಚಿನ ಸಂಖ್ಯೆಯಲ್ಲಿ ನನ್ನ ಬೆಂಬಲಿಗರನ್ನು ಸೇರಿಲ್ಲ. ನಮ್ಮ ಅಭಿಮಾನಿಗಳು,ಕಾರ್ಯಕರ್ತರೇ ಸ್ವಯಂ ಪ್ರೇರಣೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ನನ್ನ ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ಹೇಳಿದರು.
ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಇಲ್ಲ
ವಿಧಾನ ಪರಿಷತ್ತಿಗೆ ಆಯ್ಕೆ ಬಯಿಸಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಆದರೆ, ನನ್ನ ಸಹೋದರ ಸತೀಶ ಜಾರಕಿಹೊಳಿ ಅವರು ನಾನು ನಾಮಪತ್ರ ಹಿಂಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ನಾನು ನಾಮಪತ್ರ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಸತೀಶ ಜಾರಕಿಹೊಳಿ ಅವರ ಸುತ್ತಮುತ್ತ ಇರುವ ಜನರು ನನ್ನ ವಿರುದ್ಧ ಊಹಾಪೋಹಗಳನ್ನು ಹರಡಿಸುತ್ತಿದ್ದಾರೆ. ನಮ್ಮ ಅಭಿಮಾನಿಗಳು, ಬೆಂಬಲಿಗರು ಇದಕ್ಕೆ ಕಿವಿಗೊಡಬಾರದು ಎಂದು ಲಖನ್ ಜಾರಕಿಹೊಳಿ ಮನವಿ ಮಾಡಿದರು.

Related posts: