ಬೆಳಗಾವಿ:ಆನಂದಿಬಾಯಿ ಜೋಶಿ ಹೆರಿಗೆ ಆಸ್ಪತ್ರೆ ಉದ್ಘಾಟಿಸಿದ ಶಾಸಕ ಅಭಯ ಪಾಟೀಲ
ಆನಂದಿಬಾಯಿ ಜೋಶಿ ಹೆರಿಗೆ ಆಸ್ಪತ್ರೆ ಉದ್ಘಾಟಿಸಿದ ಶಾಸಕ ಅಭಯ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜ 17 :
ಇಲ್ಲಿನ ವಡಗಾವಿಯ ಟಿಎಚ್‌ಒ ಕಚೇರಿ ಸಮೀಪದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿರುವ ‘ಆನಂದಿಬಾಯಿ ಜೋಶಿ ಹೆರಿಗೆ ಆಸ್ಪತ್ರೆ’ಯನ್ನು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಸೋಮವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಸದ್ಯ ಹೊರ ರೋಗಿಗಳ ವಿಭಾಗ ಉದ್ಘಾಟಿಸಲಾಗಿದೆ. ಪ್ರಸ್ತುತ 10 ಹಾಸಿಗೆಗಳ ಸಾಮರ್ಥ್ಯವಿದೆ. 30 ಹಾಸಿಗೆಗಳಿಗೆ ಇದನ್ನು ಮೇಲ್ದರ್ಜೆಗೇರಿಸಲಾಗುವುದು. ಇದರಿಂದ ಈ ಭಾಗದ ಬಡ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.
‘ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಸರ್ಕಾರದಿಂದ ನೇಮಿಸಲಾಗುವುದು. ಮುಂದಿನ ತಿಂಗಳು ಇಲ್ಲಿ ಸೇವೆ ಆರಂಭವಾಗಲಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದ ವರ್ಗದವರಿಗೆ ಇದರಿಂದ ಪ್ರಯೋಜನವಾಗಲಿದೆ. ದೇಶದ ಮೊದಲ ವೈದ್ಯೆ ಆನಂದಿಬಾಯಿ ಜೋಶಿ ಅವರ ಹೆಸರು ಇಡಲಾಗಿದೆ. ₹ 2.50 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ’ ಎಂದು ತಿಳಿಸಿದರು.
‘ಶಸ್ತ್ರಚಿಕಿತ್ಸಾ ಕೊಠಡಿ, ಜನರಲ್ ವಾರ್ಡ್, ಹೆರಿಗೆ ವಾರ್ಡ್, ಲೇಬರ್ ರೂಂ, ಪ್ರಯೋಗಾಲಯ, ಲಸಿಕಾ ಕೊಠಡಿ ಹಾಗೂ ಸಮಾಲೋಚನೆ/ಪರೀಕ್ಷಾ ಕೊಠಡಿಯನ್ನು ಒಳಗೊಂಡಿದೆ. ಅಗತ್ಯ ಉಪಕರಣಗಳನ್ನು ಆರೋಗ್ಯ ಇಲಾಖೆಯಿಂದ ಒದಗಿಸಲಿದೆ. ಸಣ್ಣ ಪುಟ್ಟ ಕೆಲಸಗಳು ಬಾಕಿ ಇದ್ದು, ಪೂರ್ಣಗೊಳ್ಳುತ್ತಿದ್ದಂತೆಯೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು’ ಎಂದರು.
‘ಹೊಸದಾಗಿ ದೊರೆಯುತ್ತಿರುವ ಈ ಅತ್ಯಾಧುನಿಕ ಸೌಲಭ್ಯದ ಬಗ್ಗೆ ವಡಗಾವಿ, ಶಹಾಪುರ ಹಾಗೂ ಖಾಸಬಾಗ ಭಾಗದಲ್ಲಿ ಪ್ರಚಾರ ನಡೆಸುವಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ತಿಳಿಸಲಾಗಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು.
‘ವಡಗಾವಿಯಲ್ಲಿರುವ ನಗರ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ನಗರಪಾಲಿಕೆ ಸದಸ್ಯರಾದ ಮಂಗೇಶ ಪವಾರ ಮತ್ತು ಸಾರಿಕಾ ಪಾಟೀಲ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಟಿಎಚ್‌ಒ ಶಿವಾನಂದ ಮಾಸ್ತಿಹೊಳಿ ಇದ್ದರು.