ಬೆಳಗಾವಿ:ನಾನೂ ಸಹ ಸಗಟು ತರಕಾರಿ ಮಾರುಕಟ್ಟೆ ನಿರ್ಮಿಸಲಿದ್ದೇನೆ : ಶಾಸಕ ಸತೀಶ ಜಾರಕಿಹೊಳಿ
ನಾನೂ ಸಹ ಸಗಟು ತರಕಾರಿ ಮಾರುಕಟ್ಟೆ ನಿರ್ಮಿಸಲಿದ್ದೇನೆ : ಶಾಸಕ ಸತೀಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಫೆ 4 :
‘ನಗರದಲ್ಲಿ ನಾನೂ ಒಂದು ಸಗಟು ತರಕಾರಿ ಮಾರುಕಟ್ಟೆ ನಿರ್ಮಿಸಲಿದ್ದೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ನಗರದಲ್ಲಿ ನಿರ್ಮಿಸಲಾಗಿರುವ ಖಾಸಗಿ ಸಗಟು ತರಕಾರಿ ಮಾರುಕಟ್ಟೆಗೆ ಸರ್ಕಾರದಿಂದ ಕಾನೂನುಬದ್ಧವಾಗಿ ಅನುಮತಿ ನೀಡಲಾಗಿದೆ.
ಇದರಿಂದ ಸರ್ಕಾರಿ ಎಪಿಎಂಸಿಯ ವರ್ತಕರು ಗೊಂದಲಕ್ಕೆ ಸಿಲುಕಿದ್ದಾರೆ’ ಎಂದು ಹೇಳಿದರು.
‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಎಪಿಎಂಸಿ ಮೇಲೆ ಕಾನೂನಿನ ಮೂಲಕ ಬಲ ಪ್ರಯೋಗ ಮಾಡಲಾಗಿದೆ. ಬೆಳಗಾವಿಯಲ್ಲಿ ನಡೆದಿರುವುದು ದೇಶದಲ್ಲೇ ಹೊಸ ಪ್ರಯೋಗವಾಗಿದೆ. ಸದ್ಯದ ಸ್ಥಿತಿಯಲ್ಲಿ ಎರಡು ಮಾರುಕಟ್ಟೆಗಳೂ ಅಧಿಕೃತವಾಗಿವೆ. ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ವರ್ತಕರ ಸಮಸ್ಯೆ ಬಗೆಹರಿಸಬೇಕಾಗುತ್ತದೆ’ ಎಂದು ತಿಳಿಸಿದರು.
‘ನಮ್ಮ ಮಂದಿಯನ್ನು ಉಳಿಸುವುದಕ್ಕಾಗಿ ವರ್ತಕರಿಗೆ ಮಳಿಗೆಗಳನ್ನು ನೀಡಲು ಪರ್ಯಾಯವಾಗಿ ಮಾರುಕಟ್ಟೆ ಕಟ್ಟಿಕೊಡಲು ನಿರ್ಧರಿಸಿದ್ದೇನೆ. ಅವರನ್ನು ಉಳಿಸುವ ಜವಾಬ್ದಾರಿ ನನ್ನ ಮೇಲಿದೆ. ನನ್ನನ್ನು ನಂಬಿ ಮಳಿಗೆಗಳಿಗಾಗಿ ಹಣ ಹಾಕಿದ್ದಾರೆ. ಸರ್ಕಾರ ಈಗ ಆ ಹಣ ವಾಪಸ್ ಕೊಡುವಂತೆ ಪಟ್ಟು ಹಿಡಿದಿದ್ದಾರೆ. 2-3 ಕಡೆಗಳಲ್ಲಿ ಜಾಗ ನೋಡಿದ್ದೇವೆ. ₹ 30 ಲಕ್ಷದಿಂದ ₹ 40 ಲಕ್ಷದಲ್ಲಿ ಮಾರುಕಟ್ಟೆ ನಿರ್ಮಿಸುತ್ತೇವೆ’ ಎಂದು ಮಾಹಿತಿ ನೀಡಿದರು.
‘ಅನಧಿಕೃತ ಎಂದು ಹೇಳಿದ್ದವರೇ ಖಾಸಗಿ ಮಾರುಕಟ್ಟೆಗೆ ಅನುಮತಿ ಕೊಡಿಸಿ, ಉದ್ಘಾಟನೆ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.