ಗೋಕಾಕ:ನ್ಯಾಯಾಲಯದ ಆದೇಶ ಪಾಲನೆ ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯ : ಶಾಸಕ ರಮೇಶ ಜಾರಕಿಹೊಳಿ
ನ್ಯಾಯಾಲಯದ ಆದೇಶ ಪಾಲನೆ ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯ : ಶಾಸಕ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 13 :
ನಮ್ಮ ದೇಶ ಸಂವಿಧಾನದ ಮೇಲೆ ನಿಂತಿದೆ ನ್ಯಾಯಾಲಯದ ಆದೇಶ ಪಾಲನೆ ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯ. ತಮ್ಮ ಮಕ್ಕಳಿಗೆ ಶಾಲೆ, ಕಾಲೇಜು ಆವರಣಗಳಲ್ಲಿ ಹಿಜಾಬ್ ಹಾಗೂ ಕೇಸರಿ ಧರಿಸದಂತೆ ಕ್ಷೇತ್ರದ ಜನತೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಮನವಿ ಮಾಡಿದರು.
ಅವರು, ನಗರದ ತಮ್ಮ ಗೃಹ ಕಚೇರಿಯಲ್ಲಿ ರವಿವಾರ ಬೆಳಿಗ್ಗೆ ಹಿಜಾಬ್ ವಿಚಾರ ಕುರಿತು ಕ್ಷೇತ್ರದ ಮುಖಂಡರುಗಳ ಹಾಗೂ ಅಧಿಕಾರಿಗಳ ತುರ್ತು ಸಭೆ ನಡೆಸಿ ಮಾತನಾಡಿ, ಹಿಜಾಬ್ ವಿಚಾರ ಕುರಿತು ಸಾಮಾಜಿಕ ಜಾಲತಾನಗಳಲ್ಲಿ ಶಾಂತಿ ಕದಡುವ ಕೇಲಸಗಳಾಗುತ್ತಿವೆ, ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಿ ಶಾಲೆ, ಕಾಲೇಜು ಆವರಣಗಳಲ್ಲಿ ಯಾವುದೇ ಧರ್ಮದ ಉಡುಪುಗಳನ್ನು ಹಾಕದಂತೆ ಹೈಕೋರ್ಟ ಮಧ್ಯಂತರ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದರು.
ಬೆಂಗಳೂರಿನ ಕಾಲೇಜಿನಲ್ಲಿ ಯುವತಿಯೋರ್ವಳು ಅಲ್ಲಾಹುಅಕ್ಬರ್ ಎಂದು ಭಾವೋದ್ವೇಗವಾಗಿ ಹೇಳಿದ್ದಾಳೆ. ಆದರೆ ಶಾಂತಿ ಸುವ್ಯಸ್ಥೆ ಹಾಳು ಮಾಡಲು ಅವಳಿಗೆ ಬಹುಮಾನ ಘೋಷಿಸಿದ್ದಾರೆ. ಇಂತಹ ಘಟನೆಗಳು ನಡೆಯಬಾರದಿತ್ತು. ಹಿಂದುಗಳು ಹಿಂದುಗಳಿಗೂ ಬಹುಮಾನ ಘೋಷಣೆ ಮಾಡುತ್ತಾರೆ ಹೀಗಾಗಿ ನಾವೆಲ್ಲರೂ ಸಹೋದರತ್ವದಲ್ಲಿ ಸಹಬಾಳ್ವೆ ನಡೆಸಬೇಕು.
ಸೋಮವಾರದಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು, ಮಕ್ಕಳ ಪರೀಕ್ಷೆಗಳು ಹತ್ತಿರ ಬರುತ್ತಿರುವ ಹಿನ್ನಲೆ ನಾವೆಲ್ಲರೂ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಬೇಕಿದೆ. ಶಾಂತಿ ಸೌಹಾರ್ದಯುತವಾಗಿ ನಾವೆಲ್ಲರೂ ನೆಲೆಸಿದ್ದೆವೆ. ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಕೇಲಸ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಇದೇ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹಾಗೂ ಡಿವೈಎಸ್‍ಪಿ ಮನೋಜಕುಮಾರ ನಾಯಕ ಮಾತನಾಡಿ ಹಿಜಾಬ್ ವಿಚಾರದಲ್ಲಿ ಮಕ್ಕಳಲ್ಲಿ ಹಾಗೂ ಸಮಾಜದಲ್ಲಿ ಗೊಂದಲಗಳನ್ನು ಸೃಷ್ಟಿಸುವವರ ವಿರುದ್ಧ ಕಠೀಣ ಕ್ರಮಕೈಗೊಳ್ಳಲಾಗುವದು ಎಂದರು.
ಈ ಸಂದರ್ಭದಲ್ಲಿ ಸಿಪಿಐಗಳಾದ ಗೋಪಾಲ ರಾಠೋಡ, ಶ್ರೀಶೈಲ್ ಬ್ಯಾಕೂಡ, ಪಿಎಸ್‍ಐಗಳಾದ ನಾಗರಾಜ ಖಿಲಾರೆ, ಕೆ ವಾಲಿಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ನಗರಸಭೆ ಸ್ಥಾಯಿ ಸಮಿತಿ ಚೇರಮನ್ ಕುತ್ಬುದ್ದಿನ ಗೋಕಾಕ, ಮುಸ್ಲಿಂ ಸಮಾಜ ಮುಖಂಡ ಎಚ್ ಡಿ ಮುಲ್ಲಾ, ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಜಾವೇದ ಗೋಕಾಕ, ಅಬ್ಬಾಸ ದೇಸಾಯಿ, ಇಸ್ಮಾಯಿಲ್ ಗೋಕಾಕ, ಆಸೀಫ್ ಮುಲ್ಲಾ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರುಗಳು ಇದ್ದರು.