ಬೆಳಗಾವಿ:ಮಾನವನ ಆರ್ಥಿಕ ಪ್ರಗತಿಗೆ ಮೌಢ್ಯಗಳೇ ಅಡ್ಡಿಯಾಗಿವೆ : ಮಾಜಿ ಸಚಿವ ಸತೀಶ್
ಮಾನವನ ಆರ್ಥಿಕ ಪ್ರಗತಿಗೆ ಮೌಢ್ಯಗಳೇ ಅಡ್ಡಿಯಾಗಿವೆ : ಮಾಜಿ ಸಚಿವ ಸತೀಶ್
ಬೆಳಗಾವಿ ಸೆ 25: ಶಿಕ್ಷಣವೇ ಸಮಾಜದ ಶಕ್ತಿಯಾಗಿದೆ. ದೇವರು, ಧಾರ್ಮಿಕ ಆಚರಣೆಗಳ ಹೆಸರಲ್ಲಿ ಹಣವನ್ನು ಪೋಲು ಮಾಡುವ ಬದಲು ಮಕ್ಕಳಿಗೆ ಶಿಕ್ಷಣ ನೀಡಲು ಬಳಸಬೇಕು. ವಾಲ್ಮೀಕಿ ನಾಯಕ ಸಮಾಜ ಮೌಢ್ಯಗಳಿಂದ ಹೊರಬಂದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜವನ್ನು ಬಲಿಷ್ಠವಾಗಿ ಕಟ್ಟಲು ಸಹಕರಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ಉದ್ಘಾಟನೆ ಮತ್ತು ಮಹರ್ಷಿ ವಾಲ್ಮೀಕಿ ಕುರಿತು ವಿಚಾರ ಸಂಕಿರಣ ಸಭೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ದೇವರು, ಧರ್ಮದ ಹೆಸರಲ್ಲಿ ಹಲವಾರು ಆಚರಣೆಗಳು ಜಾರಿಯಲ್ಲಿವೆ. ಪೂಜೆ ಪುನಸ್ಕಾರಗಳಿಂದ ಮನೆ ಗಟ್ಟಿಯಾಗುವುದಿಲ್ಲ, ಮನೆ ಕಟ್ಟಲು ಯಾವ ಸಾಮಗ್ರಿ ಬಳಸಿದ್ದೀರಿ, ಮನೆ ಕಟ್ಟಲು ಅನುಸರಿಸಿದ ವಿಧಿ ವಿಧಾನಗಳ ಮೇಲೆ ಮನೆಯ ಗಟ್ಟಿತನ ಸಾಬೀತಾಗುತ್ತದೆ. ಪೂಜಾರಿ ಯಾವ ರಾಜ್ಯದವರಾದರೂ, ಎಂಥಹ ಖಡಕ್ ಪೂಜೆ ಮಾಡಿದರೂ ಮನೆ ಗಟ್ಟಿತನಕ್ಕೂ ಅದಕ್ಕೂ ಸಂಬಂಧವಿಲ್ಲ. ನಂಬಿಕೆ ಮತ್ತು ಮೂಢನಂಬಿಕೆ ನಡುವಿನ ವ್ಯತ್ಯಾಸ ಸಮಾಜದ ಬಹಳಷ್ಟು ಜನರಿಗೆ ತಿಳಿದಿಲ್ಲ. ಈ ವ್ಯತ್ಯಾಸ ಅರಿತು ಮೌಢ್ಯಗಳಿಂದ ಹೊರಬಂದರೆ ಸಮಾಜದ ಪ್ರಗತಿ ಸಾಧ್ಯವಾಗುತ್ತದೆ ಎಂದು ಶಾಸಕ ಸತೀಶ ಜಾರಕಿಹೊಳಿ ಕಿವಿಮಾತು ಹೇಳಿದರು.
ಸಮಾಜದ ಪ್ರಗತಿ ಆರ್ಥಿಕ ಪ್ರಗತಿಯೊಂದಿಗೆ ಹೊಂದಿಕೊಂಡಿದೆ. ಆರ್ಥಿಕ ಪ್ರಗತಿಗೆ ಮೌಢ್ಯಗಳೇ ಅಡ್ಡಿಯಾಗಿವೆ.ಮನೆ ಕಟ್ಟಿದರೆ, ವಾಹನ ಕೊಂಡರೆ ಸಮಾಜ ಸುಧಾರಣೆ ಆಗಿದೆ ಎಂದು ಅರ್ಥವಲ್ಲ. ಸರಕಾರಿ ಶಾಲೆಗಳ ಓದು ವಾಲ್ಮೀಕಿ ನಾಯಕ ಸಮಾಜಕ್ಕೆ ಮಾತ್ರ ಮೀಸಲಾಗಿರುವುದಿಲ್ಲ. ಸಮಾಜದ ಬೇರೆ ಬೇರೆ ವರ್ಗಗಳ ಜನರು ಕಾನ್ವೆಂಟ್ ಶಾಲೆಗಳು, ಅತ್ಯುತ್ತಮ ಶಿಕ್ಷಣ ನೀಡುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದಂತೆ ವಾಲ್ಮೀಕಿ ಸಮಾಜದವರು ಮಕ್ಕಳಿಗೆ ಶಿಕ್ಷಣ ನೀಡಲು ಆಸಕ್ತಿ ಹೊಂದಬೇಕು. ಸಮಾಜದಲ್ಲಿ ಮಕ್ಕಳು ಯೋಗ್ಯ ವ್ಯಕ್ತಿಯಾಗಿ ಬದುಕುವಂತಹ ವಾತಾವರಣ ಕಲ್ಪಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯು ಸಮಾಜವನ್ನು ಸಂಘಟಿಸಲು ತೋರಿರುವ ಉತ್ಸಾಹ ಮೆಚ್ಚುವಂಥದು. ಸಮಾಜದಲ್ಲಿ ಬದಲಾವಣೆ ತರಲು ಅವರ ಪ್ರಯತ್ನ ಮುಂದುವರಿಯಲಿ. ಇದಕ್ಕೆ ಸಮಾಜದ ಎಲ್ಲರೂ ಸಹಕಾರ ನೀಡೋಣ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜ ವನದುರ್ಗ ಮಾತನಾಡಿ, ರಾಜ್ಯಗಳನ್ನು ಕಟ್ಟಿ ಬೆಳೆಸಿದ, ಪೋಷಿಸಿದ, ಜನ ಮೆಚ್ಚುವಂತೆ ಆಡಳಿತ ನಡೆಸಿದ ನಾಯಕ ಸಮಾಜ ಅನ್ನಕ್ಕಾಗಿ, ಅಕ್ಷರ, ಅರಿವಿಗಾಗಿ ಅವಮಾನ ಅನುಭವಿಸುವುದು ನಿಲ್ಲಬೇಕು. ಸಮಾಜ ಈಗ ನಡೆಯುತ್ತಿರುವ ದಾರಿಯನ್ನು ಬದಲಿಸಬೇಕು. ಇಲ್ಲಗಳ ನಡುವೆ ಬದುಕುವುದನ್ನು ತಡೆಯಬೇಕು. ಬೆನ್ನ ಹಿಂದಿನ ಬದುಕಿಗೆ ಇರುವ ವಾಲ್ಮೀಕಿ ಮಹರ್ಷಿ ಮತ್ತು ಕಣ್ಣ ಮುಂದಿನ ಬೆಳಕಾಗಿರುವ ಶಾಸಕ ಸತೀಶ ಜಾರಕಿಹೊಳಿ ಅವರಂಥವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ನಂಬಿಕೆ ಮತ್ತು ನಿಷ್ಠೆ ಸಮಾಜಕ್ಕೆ ಬಹುದೊಡ್ಡ ಆಸ್ತಿ. ಚರಿತ್ರೆಯಿಂದ ಪಾಠ ಕಲಿತು ಸಮಾಜವನ್ನು ಸಂಘಟಿಸಬೇಕು ಎಂದು ಡಾ.ರಂಗರಾಜ ವನದುರ್ಗ ಕಿವಿ ಮಾತು ಹೇಳಿದರು.
ಕರ್ನಾಟಕ ವಾಲ್ಮೀಕಿ ಸೇನೆಯ ರಾಜ್ಯಾಧ್ಯಕ್ಷ ಪ್ರತಾಪ ಮದಕರಿ ನಾಯಕ ಅವರು ರಚಿಸಿದ ಹಾಡುಗಳ ಧ್ವನಿ ಸುರುಳಿಯನ್ನು ಶಾಸಕ ಸತೀಶ ಜಾರಕಿಹೊಳಿ ಬಿಡುಗಡೆ ಮಾಡಿದರು.
ಕರ್ನಾಟಕ ವಾಲ್ಮೀಕಿ ಸೇನೆಯ ರಾಜ್ಯಾಧ್ಯಕ್ಷ ಪ್ರತಾಪ ಮದಕರಿ ನಾಯಕ ಮಾತನಾಡಿ, ಸಮಾಜ ಸಂಘಟನೆ ಬಲಪಡಿಸಲು ಸಹಕಾರ ಕೋರಿ, ಸುದೀರ್ಘವಾಗಿ ಮಾತನಾಡಿದರು.
ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ದಾವಣಗೆರೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ರಾಯಚೂರು ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಡಾ. ಅಂಜಲಿ ನಿಂಬಾಳಕರ, ಅರುಣ ಕಟಾಂಬಳೆ, ಕಿರಣ ಸಾಯನಾಕ, ಸುಚೇತಾ ಗಂಡಗುದರಿ, ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷ ದೇವರಾಜ ಕಾಟೂರ, ಎ.ಸಿ.ತಿಪ್ಪೇಸ್ವಾಮಿ, ಬಸವರಾಜ ಡಿ.ಗುರಿಕಾರ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಎಲ್ .ಎನ್.ಮೂರ್ತಿ, ಗಣಪತಿ ಗಸ್ತಿ, ಮಹಾಂತೇಶ ತಳವಾರ, ಸೂರ್ಯಪ್ರಕಾಶ ಮತ್ತಿತರರು ಪಾಲ್ಗೊಂಡಿದ್ದರು.
ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ರಾಜ್ಯಾಧ್ಯಕ್ಷ ವಿಜಯ ಬ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಶಿ. ಪೊಲೀಸ್ ಕಾರ್ಯಕ್ರಮ ನಿರ್ವಹಿಸಿದರು.