RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಅಶ್ಲೀಲ ಪದಗಳೊಂದಿಗೆ ಟೀಕಿಸಿರುವ ಸಚಿವ ರಮೇಶ ಜಾರಕಿಹೊಳಿ ಕ್ರಮ ಖಂಡನೀಯ : ಅಶೋಕ ಪೂಜಾರಿ

ಗೋಕಾಕ:ಅಶ್ಲೀಲ ಪದಗಳೊಂದಿಗೆ ಟೀಕಿಸಿರುವ ಸಚಿವ ರಮೇಶ ಜಾರಕಿಹೊಳಿ ಕ್ರಮ ಖಂಡನೀಯ : ಅಶೋಕ ಪೂಜಾರಿ 

ಅಶ್ಲೀಲ ಪದಗಳೊಂದಿಗೆ ಟೀಕಿಸಿರುವ  ಸಚಿವ ರಮೇಶ ಜಾರಕಿಹೊಳಿ ಕ್ರಮ ಖಂಡನೀಯ : ಅಶೋಕ ಪೂಜಾರಿ

ಗೋಕಾಕ ಸೆ 26: ಸರಕಾರ ನೇಮಿಸಿದ ಸಮೀತಿಗಳ ವರದಿಗಳ ಆಧಾರದ ಮೇಲೆ ರಚನೆಗೊಂಡ ಮೂಡಲಗಿ ತಾಲೂಕು ಆದೇಶವನ್ನು ಸ್ಥಗಿತಗೊಳಿಸಿದ ಸರಕಾರದ ನಿರ್ಣಯವನ್ನು ವಿರೋಧಿಸಿ ಮತ್ತು ಕೂಡಲೇ ಮೂಡಲಗಿ ತಾಲೂಕ ರಚನೆಯ ಆದೇಶವನ್ನು ಕಾರ್ಯರೂಪಕ್ಕೆ ತರಲು ಆಗ್ರಹಿಸಿ ಮೂಡಲಗಿ ತಾಲೂಕಾ ಹೋರಾಟ ಸಮೀತಿಯ ಆಶ್ರಯದಲ್ಲಿ ನಡೆಯುತ್ತಿರುವ ಪಕ್ಷಾತೀತ ಹೋರಾಟದಲ್ಲಿ ಭಾಗವಹಿಸಿದ ಮುಖಂಡರನ್ನು ಅಶ್ಲೀಲ ಪದಗಳೊಂದಿಗೆ ಟೀಕಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ನಡೆಯನ್ನು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ತೀವ್ರವಾಗಿ ಖಂಡಿಸಿದ್ದಾರೆ.

ನಗರದಲ್ಲಿ ಇಂದು ತಮ್ಮ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಮೇಶ ಜಾರಕಿಹೊಳಿ ಯವರು ಸರಕಾರದ ಜವಾಬ್ದಾರಿಯುತ ಸಚಿವರಾಗಿದ್ದಾರೆ. ಅವರ ನಡೆ-ನುಡಿ ಕಾನೂನಾತ್ಮಕವಾಗಿ, ನೈತಿಕವಾಗಿ ಮತ್ತು ಸಂಸ್ಕಂತಿಕವಾಗಿ ಜವಾಬ್ದಾರಿಯುತವಾಗಿರಬೇಕು ಎಂದು ಹೇಳಿದ ಅವರು ಮೂಡಲಗಿ ತಾಲೂಕಾ ಹೋರಾಟಗಾರರನ್ನು ಅವಹೇಳನಕರಾವಾಗಿ ಟೀಕಿಸುವ ಭರದಲ್ಲಿ ಉಪಯೋಗಿಸಿರುವ ಪದಗಳು ಅವರ ಸ್ಥಾನಕ್ಕೆ ಮತ್ತು ವ್ಯಕ್ತಿತ್ವಕ್ಕೆ ಶೋಭೆತರುವಂತದ್ದಾಗಿಲ್ಲ ಎಂದು ಹೇಳಿದರು.

ಮೂಡಲಗಿ ತಾಲೂಕಾ ಹೋರಾಟದಲ್ಲಿ ಬಿ.ಜೆ.ಪಿ., ಕಾಂಗ್ರೇಸ್, ಜೆ.ಡಿ.ಎಸ್. ಮುಂತಾದ ಎಲ್ಲ ಪಕ್ಷಗಳ ಮುಖಂಡರುಗಳು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಸಾಮಾಜಿಕ ಸೇವಾ ಸಂಸ್ಥೆಗಳು, ಮಹಿಳಾ ಸಂಘಟನೆಗಳು ಮತ್ತು ಯುವ ಸಂಘಟನೆಗಳು ಮುಂತಾದವರು ಪಕ್ಷಾತೀತವಾಗಿ ಭಾಗವಹಿಸಿದ್ದಾರೆ. ಮಾನ್ಯ ಸಚಿವರ ಸಹೋದರ ಅರಭಾಂವಿ ಭಾಗದ ಶಾಸಕರು ಸಹ ಪ್ರತಿಭಟನಾ ಸ್ಥಳದಲ್ಲಿ ಉಪಸ್ಥಿತರಿದ್ದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇಂತಹ ಸ್ಥಿತಿಯಲ್ಲಿ ಹೋರಾಟಗಾರರ ಬೇಡಿಕೆಯಲ್ಲಿ ರಾಜಕೀಯ ಬೆರೆಸುವದು ಅಥವಾ ಅವರ ಹೋರಾಟವನ್ನು ಪೂರ್ವಾಗ್ರಹ ಪೀಡಿತರಾಗಿ ಪರಿಗಣಿಸುವದು ಸಚಿವರ ವಿಚಾರ ಶಕ್ತಿಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ ಎಂದು ವಿಶ್ಲೇಷಿಸಿದರು.
ವಾಸ್ತವವಾಗಿ ಮೂಡಲಗಿ ತಾಲೂಕಾ ರಚನೆಯ ವಿಚಾರದಲ್ಲಿ ಗೊಂದಲ ನಿರ್ಮಿಸಿದವರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಈ ಹಿಂದೆ ಸರಕಾರದಿಂದ ಅಧಿಕೃತವಾಗಿ ರಚನೆಗೊಂಡ ಮೂಡಲಗಿ ತಾಲೂಕಿನ ಆದೇಶವನ್ನು ತಾವೇ ತಡೆಹಿಡಿದಿರುವದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ವರದಿಗಳ ಆಧಾರದ ಮೇಲೆ ಈಗಾಗಲೇ ಈ ಹಿಂದೆ ಸರಕಾರದಿಂದ ಮೂಡಲಗಿ ತಾಲೂಕ ರಚನೆ ಪ್ರಸ್ತಾಪದಲ್ಲಿ ಎಲ್ಲಿಯೂ ಸಹ ಗೋಕಾಕ ವಿಧಾನಸಭಾ ಕ್ಷೇತ್ರದ ಗ್ರಾಮಗಳು ಸೇರಿರುವ ಬಗ್ಗೆ ಪ್ರಸ್ತಾಪವಿಲ್ಲ. ಹಿಗಿರುವಾಗ ಸಚಿವರು ಜನರಲ್ಲಿ ಇಲ್ಲದ ಗೊಂದಲ ಏಕೆ ನಿರ್ಮಿಸುತ್ತಿದ್ದಾರೆ ಎಂಬುದು ಗೂಢಾರ್ಥದ ಪ್ರಶ್ನೆಯಾಗಿದ್ದು, ಇದು ಮೂಡಲಗಿ ತಾಲೂಕ ರಚನೆಯಲ್ಲಿ ಅವರ ವಿಸ್ವಾರ್ಹಾತೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ ಎಂದು ಹೇಳಿದರು.
ಗೋಕಾಕ ಬ್ಲಾಕ್ ಬಿ.ಜೆ.ಪಿ. ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶಟ್ಟಿ ಮಾತನಾಡಿ ಮಾನ್ಯ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಯವರು ಅತ್ಯಂತ ಅಶ್ಲೀಲ ಪದಗಳನ್ನು ಉಪಯೋಗಿಸಿ ಮೂಡಲಗಿ ತಾಲೂಕಾ ರಚನೆಯ ಹೋರಾಟಗಾರರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಕ್ರಮ ಖಂಡನೀಯವಾಗಿದೆ. ಈ ಕೂಡಲೇ ರಮೇಶ ಜಾರಕಿಹೊಳಿ ಯವರು ಬಹಿರಂಗವಾಗಿ ಹೋರಾಟಗಾರರ ಮತ್ತು ಮೂಡಲಗಿ ತಾಲೂಕ ಜನತೆಯಲ್ಲಿ ಕ್ಷೆಮೆ ಕೇಳಬೆಂದು ಒತ್ತಾಯಿಸಿದರು. ಒಂದು ವೇಳೆ ಅವರು ನಾನು ಹೇಳಿದ್ದೇ ವೇಧವಾಕ್ಯ ಎಂಬ ಭ್ರಮೆಯಲ್ಲಿ ಉಳಿದರೆ ಅವರ ವಿರುದ್ಧ ಪ್ರತಿಭಟನೆಗೆ ಇಳಿಯುವದಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೋಕಾಕ ಬ್ಲಾಕ್ ಗ್ರಾಮೀಣ ಘಟಕದ ಅಧ್ಯಕ್ಷ ವಿರುಪಾಕ್ಷಿ ಯಲಿಗಾರ, ಜನಪರ ಹೋರಾಟಗಾರ ದಸ್ತಗೀರ ಪೈಲವಾನ, ಶಕೀಲ ಧಾರವಾಢಕರ, ಪ್ರೇಮಾ ಚಿಕ್ಕೋಡಿ ಮುಂತಾದವರು ಉಪಸ್ಥಿತರಿದ್ದರು.

Related posts: