ಗೋಕಾಕ:ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಿನ್ನಲೆಯಲ್ಲಿ ಬೆಟಗೇರಿಯಲ್ಲಿ ಪೂರ್ವಭಾವಿ ಸಭೆ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಿನ್ನಲೆಯಲ್ಲಿ ಬೆಟಗೇರಿಯಲ್ಲಿ ಪೂರ್ವಭಾವಿ ಸಭೆ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಮಾ 27 :
ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿವಿದೇ ಸರಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸ್ಥಳೀಯ ಪರೀಕ್ಷಾ ಕೇಂದ್ರದ ಮುಖ್ಯಸ್ಥ ರಮೇಶ ಅಳಗುಂಡಿ ಮಾತನಾಡಿ, ಮಾ.28 ರಿಂದ ಏ.11ರ ವರೆಗೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಜರುಗಲಿರುವ ಪ್ರಯುಕ್ತ ಸ್ಥಳೀಯ ಪರೀಕ್ಷಾ ಕೇಂದ್ರದಲ್ಲಿ 14 ಪರೀಕ್ಷಾ ಕೊಠಡಿ, 16 ಜನ ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಒಬ್ಬರು ಸ್ಥಾನಿಕ ವಿಕ್ಷಕ ಜಾಗೃತ ದಳ, ಒಬ್ಬರು ಪರೀಕ್ಷಾ ಮುಖ್ಯ ಅಧಿಕ್ಷಕ, ಓರ್ವ ಕಸ್ಟೊಡಿಯನ್, ಒಬ್ಬರು ಪರೀಕ್ಷಾ ಕೇಂದ್ರದ ಸಹಾಯಕರು ಸೇರಿದಂತೆ ಮತ್ತಿತರು ಕಾರ್ಯನಿರ್ವಹಿಸಲಿದ್ದಾರೆ. ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಪರೀಕ್ಷಾ ಕೊಠಡಿಗಳ ಸ್ಯಾನಿಟೈಜರ್ ಸಿಂಪರಣೆ ಮಾಡಲಾಗಿದೆ. ಸುಗಮ ಪರೀಕ್ಷೆ ನಡೆಯುವ ನಿಟ್ಟಿನಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಸ್ಥಳೀಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 265 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ ಸುಮಾರು 200 ಮೀಟರ್ ಅಂತರದಲ್ಲಿ 144 ಕಲಂ ನೀಷೆದಾಜ್ಞೆ ಜಾರಿಗೊಳಿಸಲಾಗಿದೆ. ನಕಲು ನಡೆಯದಂತೆ ಸಿಸಿ ಕ್ಯಾವiರಾ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ನಿಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಆಗದಂತೆ ವಿದ್ಯಾರ್ಥಿ ಪಾಲಕರಿಗೆ ಮನವರಿಕೆ ಮಾಡಲಾಗಿದೆ ಎಂದು ಸ್ಥಳೀಯ ಪರೀಕ್ಷಾ ಕೇಂದ್ರದ ಮುಖ್ಯಸ್ಥ ರಮೇಶ ಅಳಗುಂಡಿ ತಿಳಿಸಿದರು.
ಇಲ್ಲಿಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಶಾಲೆಯ ಶಿಕ್ಷಕರು, ಸಿಬ್ಬಂದಿ, ಮತ್ತಿತರರು ಇದ್ದರು.