RNI NO. KARKAN/2006/27779|Wednesday, November 6, 2024
You are here: Home » breaking news » ಮೂಡಲಗಿ:ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ : ಶಾಸಕ ಬಾಲಚಂದ್ರ

ಮೂಡಲಗಿ:ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ : ಶಾಸಕ ಬಾಲಚಂದ್ರ 

ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆ : ಶಾಸಕ ಬಾಲಚಂದ್ರ

ಮೂಡಲಗಿ ಸೆ 30 : ಮೂಡಲಗಿ ತಾಲೂಕು ರಚನೆಗೆ ಇನ್ನೊಂದೇ ಮೆಟ್ಟಿಲು ಬಾಕಿ ಉಳಿದಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಲಿದೆ. ಯಾರೂ ಇದರ ಬಗ್ಗೆ ಅನುಮಾನ ಮಾಡಿಕೊಳ್ಳಬಾರದು. ಜೊತೆಗೆ ಧರಣಿ ನಿರತ ವೇದಿಕೆಯನ್ನು ದುರ್ಬಳಕೆ ತಡೆಯುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೋರಾಟದ ಪ್ರಮುಖರಿಗೆ ಕಿವಿಮಾತು ಹೇಳಿದ್ದಾರೆ.

ಈ ಬಗ್ಗೆ ಶನಿವಾರದಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಳೆದ 23 ದಿನಗಳಿಂದ ಮೂಡಲಗಿ ತಾಲೂಕು ಕೇಂದ್ರಕ್ಕಾಗಿ ನಡೆಸುತ್ತಿರುವ ಅನಿರ್ದಿಷ್ಠ ಸತ್ಯಾಗ್ರಹ ದಿನದಿಂದ ದಿನಕ್ಕೆ ನಾಗರೀಕರ ಮೂಲ ಉದ್ಧೇಶ ಮರೆಯಾಚಿ ತಮ್ಮ ವಿರುದ್ಧ ಉದ್ಧೇಶಪೂರ್ವಕವಾಗಿಯೇ ಅಪಪ್ರಚಾರವನ್ನು ಮಾಡಲಾಗುತ್ತಿದೆ. ಇದರಿಂದ ವೇದಿಕೆಯು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಅವರು ದೂರಿದ್ದಾರೆ. ಇದರ ಹಿನ್ನೆಲೆ ಏನು? ಎಂದು ಪ್ರಶ್ನಿಸಿರುವ ಅವರು, ಕೈಬಿಟ್ಟಿರುವ ಮೂಡಲಗಿಗೆ ತಾಲೂಕಾ ಸ್ಥಾನಮಾನ ಪಡೆದುಕೊಳ್ಳಲು ಅವಿರತವಾಗಿ ಶ್ರಮಿಸುತ್ತಿರುವ ತಮ್ಮನ್ನು ಮೂಡಲಗಿ ವಿರೋಧಿ ಎಂಬಂತೆ ಬಿಂಬಿಸುತ್ತಿರುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದಾರೆ.

ಅ.2 ರವರೆಗೆ ಸರ್ಕಾರಿ ರಜೆಗಳು ಬಂದಿರುವುದರಿಂದ ಮೂಡಲಗಿ ತಾಲೂಕು ಪ್ರಸ್ತಾವನೆಯನ್ನು ಸಂಪುಟ ಸಭೆಗೆ ತರಲು ಸ್ವಲ್ಪ ವಿಳಂಬವಾಗಿದೆ. ಅಕ್ಟೋಬರ್ 4 ರಂದು ನಡೆಯುವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನುಮೋದನೆ ನೀಡಲಿದ್ದಾರೆ. ಈಗಾಗಲೇ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಹೊಸ ಪ್ರಸ್ತಾವನೆಗೆ ಸಹಮತ ನೀಡಿದ್ದಾರೆ. ಮೂಡಲಗಿ ನೂತನ ತಾಲೂಕು ಕೇಂದ್ರವಾಗಿ ಅಸ್ಥಿತ್ವಕ್ಕೆ ಬರುವುದು ನೂರಕ್ಕೆ 100ರಷ್ಟು ಖಾತ್ರಿ ಎಂದು ಅವರು ಹೇಳಿದ್ದಾರೆ.

ಆದರೆ, ಕಳೆದೆರಡು ದಿನಗಳಿಂದ ಹೋರಾಟ ಸಮೀತಿಯ ಕೆಲ ಪ್ರಮುಖರು ಮೂಡಲಗಿ ತಾಲೂಕಾಗುವುದಿಲ್ಲ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸೋಣ. ಹೊಸ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸುತ್ತದೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬೇಡಿ. ತಾಲೂಕು ರಚನೆಯಲ್ಲಿ ಯಾರೂ ಕಾನೂನು ಹೋರಾಟಕ್ಕೆ ಇಳಿಯಬಾರದು. ಒಂದು ವೇಳೆ ಕೋರ್ಟು-ಕಛೇರಿ ಅಂತಾ ಅಲೆದಾಡಿದರೆ ತಾಲೂಕು ಪ್ರಕ್ರಿಯೆ ವಿಳಂಬವಾಗುತ್ತದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲವೆಂದು ಹೇಳಿದ್ದಾರೆ.
ಮೂಡಲಗಿ ತಾಲೂಕು ವಿಷಯವನ್ನು ಕೆಲವರು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದಾರೆ. ಇದರಲ್ಲಿ ಯಾರ ಪ್ರತಿಷ್ಠೆಯೂ ಮುಖ್ಯವಾಗುವುದಿಲ್ಲ. ತಾಲೂಕಾದರೆ ಗೆಲ್ಲುವುದು ಮಾತ್ರ ಮೂಡಲಗಿ ಭಾಗದ ಜನರು ಎಂದು ಹೇಳಿರುವ ಅವರು, ಕೆಲವರು ಹಬ್ಬಿಸುತ್ತಿರುವ ರಾಜಕೀಯ ಪ್ರೇರಿತ ಊಹಾಪೋಹಗಳನ್ನು ನಂಬಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಮೂಡಲಗಿ ತಾಲೂಕು ರಚನೆಯಲ್ಲಿ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ. ಮೂಡಲಗಿ ತಾಲೂಕಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಅಂತಾ ಸಾಕಷ್ಟು ಬಾರಿ ಹೇಳುತ್ತಿದ್ದರೂ ನಂಬುವಂತಹ ಸ್ಥಿತಿ ಕೆಲ ಪ್ರಮುಖರಿಗಿಲ್ಲ. ಎಲ್ಲಿ ತಾಲೂಕಾದರೇ ಶಾಸಕರ ಕೈ ಮೇಲಾಗುವ ಭಯದಿಂದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಇದರಿಂದಾಗಿಯೇ ಮೂಡಲಗಿ ಜನರಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಕೆಲವು ಹೋರಾಟಗಾರರಿಗೆ ಮೂಡಲಗಿ ತಾಲೂಕಾಗುವುದು ಸುತಾರಾಂ ಇಷ್ಟವಿಲ್ಲ. ತಮ್ಮ ಹೆಸರನ್ನು ಕೆಡಿಸುವ ಉದ್ಧೇಶದಿಂದಲೇ ರಾಜಕೀಯ ಬೆರೆಸಿ ಅಮಾಯಕ ಮೂಡಲಗಿ ಜನರೊಂದಿಗೆ ಚಲ್ಲಾಟವಾಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.

ಮೂಡಲಗಿ ಧರಣಿಯಲ್ಲಿ ನಾನೂ ಪಾಲ್ಗೊಳ್ಳುತ್ತೇನೆಂದು ಹೇಳಿದಾಗ ಬೇಡ. ಬೇಡ.. ನೀವು ಬೆಂಗಳೂರಿಗೆ ತೆರಳಿ. ಅಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅವರಿಗೆ ಮನವರಿಕೆ ಮಾಡಿಕೊಡಿ. ಇಲ್ಲಿ ನಾವು ಧರಣಿ ಕೂಡ್ರುತ್ತೇವೆಂದು ಹೇಳಿದ ಪ್ರಮುಖರು ಈಗ ಒಮ್ಮೆಲೆ ತಾಲೂಕು ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯಲಿಲ್ಲ ಎಂದು ಮಾತನಾಡಿಕೊಳ್ಳುತ್ತಿರುವುದು ಯಾವ ನ್ಯಾಯ? ಇದರಿಂದ ಜನತೆಯಲ್ಲಿ ತಪ್ಪು ಭಾವನೆಗಳನ್ನು ಬಿಂಬಿಸುತ್ತಿರುವ ಹಿಂದಿನ ಮರ್ಮವಾದರೂ ಏನು? ಎಂದು ಅವರು ಪ್ರಶ್ನಿಸಿದ್ದಾರೆ.
ಮೂಡಲಗಿ ತಾಲೂಕು ಮಾಡಿಸಿಕೊಂಡೇ ಕ್ಷೇತ್ರಕ್ಕೆ ಕಾಲಿಡುತ್ತೇನೆ. ಅಲ್ಲಿಯವರೆಗೆ ನನ್ನ ಬಗ್ಗೆ ಏನೂ ಬೇಕಾದರೂ ಮಾತನಾಡಿ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಮೂಡಲಗಿ ತಾಲೂಕು ಘೋಷಣೆ ನಂತರ ನನ್ನನ್ನು ನಿಂದಿಸಿದವರಿಗೆ ವೇದಿಕೆಯಲ್ಲಿ ತಕ್ಕ ಉತ್ತರ ನೀಡುತ್ತೇನೆ. ಜನರ ಒಳತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ನಾನು ಹೆದರುವುದು ದೇವರು ಮತ್ತು ನಂಬಿದ ಜನರಿಗಾಗಿ. ಅದರಲ್ಲೂ ಭಾಷಣಕಾರರಿಗೆ ಎಂದೂ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ನಡೆಸಲಾಗುತ್ತಿರುವ ಧರಣಿ ಸತ್ಯಾಗ್ರಹದ ವೇದಿಕೆಯನ್ನು ಹೋರಾಟ ಸಮೀತಿಯ ಪ್ರಮುಖನೋರ್ವನು ರಾಜಕೀಯ ಸ್ವರೂಪದ ವೇದಿಕೆಯನ್ನಾಗಿ ದುರ್ಬಕೆ ಮಾಡಿಕೊಳ್ಳುವುದಿಲ್ಲವೆಂದು ಮೂಡಲಗಿ ಶಿವಬೋಧರಂಗನ ಮೇಲೆ ಪ್ರಮಾಣ ಮಾಡಿ ಹೇಳಿದ್ದರು. ಆದರೀಗ ವೇದಿಕೆಯನ್ನು ತಾಲೂಕಾ ಹೋರಾಟಕ್ಕೆ ಸೀಮಿತಗೊಳಿಸದೇ ಪೂರ್ಣ ರಾಜಕೀಯಮಯವಾಗಿರುವುದು ನಿಜಕ್ಕೂ ಖೇದಕರ ಎಂದಿರುವ ಅವರು, ಇದರಲ್ಲಿ ದೊಡ್ಡ ಷಡ್ಯಂತ್ರವಿದೆ ಎಂದು ದೂರಿದ್ದಾರೆ. ಹಿಂದೆ ತಾಲೂಕಾಗಲು ಯಾರು ತಪ್ಪಿಸಿದ್ದರೋ? ಯಾರೀಗ ತಾಲೂಕಿಗೆ ಅಡಚಣೆ ಮಾಡಿ ತಪ್ಪಿಸಲು ಹೊರಟಿದ್ದಾರೋ? ಅಂತಹ ಪಿತೂರಿಗಾರರಿಗೆ ಆ ಶಿವಬೋಧರಂಗನೇ ತಕ್ಕ ಶಿಕ್ಷೆ ನೀಡಲಿ. ಮೂಡಲಗಿ ಜನರಿಗೆ ನೀಡಿದ ಮಾತಿನಂತೆ ಮೂಡಲಗಿಯನ್ನು ಹೊಸ ತಾಲೂಕನ್ನು ರಚಿಸಿಕೊಂಡು ಬರುತ್ತೇನೆ. ಜನರಿಗೆ ನೀಡಿದ ವಚನವನ್ನು ಈಡೇರಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಮೂಡಲಗಿಯಲ್ಲಿ ಕೆಲವರು ಕರಾಳ ದಿನ ಬರುತ್ತದೆ ಎಂದು ಭಾಷಣ ಮಾಡುತ್ತಿದ್ದಾರೆ. ನಿಜವಾಗಿಯೂ ಯಾರಿಗೆ ಕರಾಳ ದಿನ ಬರುತ್ತದೆ ಎಂದು ಕಾಲವೇ ಉತ್ತರಿಸಲಿದೆ ಎಂದು ಟೀಕಾಕಾರರಿಗೆ ಛಾಟಿ ಏಟು ನೀಡಿದ್ದಾರೆ.

ಮೂಡಲಗಿ ಹೊಸ ತಾಲೂಕಿನಲ್ಲಿ ಮೂಡಲಗಿ ಪುರಸಭೆ, ನಾಗನೂರ, ಕಲ್ಲೋಳಿ ಪಟ್ಟಣ ಪಂಚಾಯತಿ, ಹಾಗೂ 21 ಗ್ರಾಮ ಪಂಚಾಯತಿಗಳು ಸೇರ್ಪಡೆಯಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

Related posts: