ಗೋಕಾಕ:ಮಳೆ ಹಾಗೂ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ : ಬಸವರಾಜ ಕುರಿಹುಲಿ
ಮಳೆ ಹಾಗೂ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ : ಬಸವರಾಜ ಕುರಿಹುಲಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 7 :
ನಿರಂತರ ಮಳೆ ಹಾಗೂ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿಗಳಾದ ಶ್ರೀ ಬಸವರಾಜ ಕುರಿಹುಲಿ ಅವರು ತಾಲೂಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರದಂದು ನಗರದ ತಹಶೀಲ್ದಾರ ಕಛೇರಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ನಿಯಂತ್ರಣದ ಬಗ್ಗೆ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಪಂಚಾಯತ ಮಟ್ಟದ ನೋಡಲ್ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದಲ್ಲದೆ ಕಾಳಜಿ ಕೇಂದ್ರಗಳಿಗಾಗಿ ಕಟ್ಟಡಗಳನ್ನು ಗುರುತಿಸಿ ಜನರ ಸ್ಥಳಾಂತರಕ್ಕಾಗಿ ಕ್ರಮವಹಿಸುವುದು ಮತ್ತು ರೋಗ ರುಜಿನಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಇತ್ಯಾದಿಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು.
ತಹಶೀಲ್ದಾರ ಪ್ರಕಾಶ ಮಾತನಾಡಿ ತಾಲೂಕು ಕಛೇರಿಯಲ್ಲಿ 24×7 ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಸಹಾಯವಾಣಿ ಸಂಖ್ಯೆ 08332-225073 ಸಂರ್ಪಕಿಸಬೇಕು . ಪ್ರವಾಹ ಪೀಡಿತವಾಗುವ ಸಂಭಾವ್ಯ ಗ್ರಾಮಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೂಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ ಮತ್ತು ಯಾವುದೇ ರೀತಿಯ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ತಾಲೂಕು ಆಡಳಿತದಿಂದ ಸಂಪೂರ್ಣ ಸಿಧ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಶಿವಾನಂದ ಹಿರೇಮಠ, ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಮುರಳಿ ದೇಶಪಾಂಡೆ, ತೋಟಗಾರಿಕೆ ಇಲಾಖೆಯ ಅಧಿಕಾರಿ ಜನಮಟ್ಟಿ, ಬಿಇಒ ಜಿ ಬಿ ಬಳಿಗಾರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್ ಪಿ ವರಾಳೆ, ಪಶು ವೈದ್ಯಕೀಯ ಇಲಾಖೆಯ ಡಾ. ಮೋಹನ ಕಮತ ಉಪಸ್ಥಿತರಿದ್ದರು.