ಗೋಕಾಕ:ಕವಿತೆಗಳು ಭಾವನೆಯ ಪ್ರತಿಬಿಂಬವಾಗಿವೆ : ಶ್ರೀಮತಿ ದೀಪಿಕಾ ಚಾಟೆ
ಕವಿತೆಗಳು ಭಾವನೆಯ ಪ್ರತಿಬಿಂಬವಾಗಿವೆ : ಶ್ರೀಮತಿ ದೀಪಿಕಾ ಚಾಟೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 9 :
ಕವಿತೆಗಳು ಭಾವನೆಯ ಪ್ರತಿಬಿಂಬವಾಗಿವೆ. ಕವಿಗಳು ಇದನ್ನು ಅರಿತು ಕವನಗಳನ್ನು ರಚಿಸಿದರೆ ಒಳ್ಳೆಯ ಕವನ ಹಾಗೂ ಕವಿಯಾಗಿ ಹೊರಹೊಮ್ಮಲ್ಲಿಕೆ ಸಾಧ್ಯ ಎಂದು ಬೆಳಗಾವಿಯ ಸಾಹಿತಿ ಶ್ರೀಮತಿ ದೀಪಿಕಾ ಚಾಟೆ ಹೇಳಿದರು.
ಶನಿವಾರದಂದು ನಗರದಲ್ಲಿ ಕಸಾಪ ತಾಲೂಕು ಘಟಕ ಹಾಗೂ ಭಾವಯಾನ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿಮೂರ್ತಿ ಪುರಾಣಿಕ, ಚಂದ್ರಶೇಖರ್ ಕಂಬಾರ, ಬಸವರಾಜ ಕಟ್ಟಿಮನಿ ಸೇರಿದಂತೆ ಅನೇಕ ಸಾಹಿತಿಗಳು ಹುಟ್ಟಿ ಬೆಳೆದ ನಾಡಿನಲ್ಲಿ ಅವರ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಿ ಈ ಭಾಗವನ್ನು ಸಾಹಿತ್ಯಕವಾಗಿ ಗಟ್ಟಿ ಗೊಳಿಸುತ್ತಿರುವದು ಸಂತೋಷದ ವಿಷಯವಾಗಿದೆ.
ಕವಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದವ ಹವ್ಯಾಸ ಬೆಳಿಸಿಕೊಳ್ಳಬೇಕು. ಕವನ ರಚನೆಯಲ್ಲಿ ಶಬ್ದಗಳ ಸಂಗ್ರಹ ಬಹಳ ಮುಖ್ಯವಾಗಿದೆ. ಅನುಭವಿ ಸಾಹಿತಿಗಳ ಸಂಗಮಾಡಿದರೆ ಕವನ ರಚನೆಯಲ್ಲಿ ಸುಲಭವಾಗುತ್ತದೆ. ಭಾಷೆಯ ಮೇಲೆ ಹಿಡಿತವಿಟ್ಟು ಕವಿಗಳು ಕವನ ರಚಿಸಲು ಮುಂದಾಗಬೇಕು. ಅನುಭವ ಹಾಗೂ ಪ್ರತಿಭೆಗಳ ಸಮಾಗಮವೇ ಕವಿತೆಗಳಾಗಿವೆ. ನಿರಂತರ ಅಭ್ಯಾಸದಿಂದ ನಮ್ಮ ಬರವಣಿಗೆ ಶುದ್ಧಗೊಳ್ಳುವದರ ಮೂಲಕ ಒಳ್ಳೆಯ ಕವಿತೆಗಳು ಹೊರಹೊಮ್ಮಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಶೀಲರಾಗಿ ಆರೋಗ್ಯಕರ ಕವನಗಳನ್ನು ನಾಡಿಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷೆ ಭಾರತಿ ಮದಭಾವಿ ವಹಿಸಿದ್ದರು. ಕಾರ್ಯಕ್ರಮವನ್ನು ಹಿರಿಯ ಕವಿ ಶಾಮರಾವ್ ಕರಿಕಟ್ಟಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕೊಪ್ಪಳದ ಸಾಹಿತಿ, ಕಥೆಗಾರ ಇಸ್ಮಾಯಿಲ್ ತಳಕಲ್ ಅವರನ್ನು ಸತ್ಕರಿಸಿ , ಗೌರವಿಸಲಾಯಿತು.
ವೇದಿಕೆಯಲ್ಲಿ ಪ್ರೊ.ಚಂದ್ರಶೇಖರ್ ಅಕ್ಕಿ, ಮಹಾಂತೇಶ ತಾಂವಶಿ, ಶ್ರೀಮತಿ ಶಕುಂತಲಾ ಅಂಗಡಿ ,ಮಹಾನಂದ ಪಾಟೀಲ, ಸುರೇಶ ಮುದ್ದಾರ ಉಪಸ್ಥಿತರಿದ್ದರು .