ಗೋಕಾಕ:ಕಾರ್ಯವ್ಯಾಪ್ತಿ ಉಪ-ವಿಭಾಗಾಧಿಕಾರಿಗಳಿಗೆ ವರ್ಗಾವಣೆ ಖಂಡಿಸಿ ವಕೀಲರಿಂದ ಪ್ರತಿಭಟನೆ, ಕಲಾಪ ಬಹಿಷ್ಕಾರ
ಕಾರ್ಯವ್ಯಾಪ್ತಿ ಉಪ-ವಿಭಾಗಾಧಿಕಾರಿಗಳಿಗೆ ವರ್ಗಾವಣೆ ಖಂಡಿಸಿ ವಕೀಲರಿಂದ ಪ್ರತಿಭಟನೆ, ಕಲಾಪ ಬಹಿಷ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 :
ರಾಜ್ಯ ಸರ್ಕಾರ ದಿಢೀರನೆ ಜನನ ಮತ್ತು ಮರಣಗಳ ನೋಂದಣಿ ಕಾನೂನಿನಡಿಯ ಪ್ರಕರಣಗಳ ದಾಖಲೆ, ವಿಚಾರಣೆ ಮತ್ತು ಇತ್ಯರ್ಥ ಪಡಿಸುವ ಅಧಿಕಾರವನ್ನು ಜೆಎಂಎಫ್‍ಸಿ ನ್ಯಾಯಾಯಗಳಿಂದ ಕಂದಾಯ ಉಪ-ವಿಭಾಗಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಿ ಹೊರಡಿಸಿರುವ ಅಧಿಸೂಚನೆಯನ್ನು ವಿರೋಧಿಸಿ ಮತ್ತು ಈ ಮೊದಲಿನ ವ್ಯವಸ್ಥೆಯನ್ನೇ ಮುಂದುವರೆಸುವಂತೆ ಒತ್ತಾಯಿಸಿ ಇಲ್ಲಿನ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸೋಮವಾರ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ಬಹಿಷ್ಕರಿಸಿದರು.
ನ್ಯಾಯಾಲಯ ಆವರಣದಿಂದ ಬಸವೇಶ್ವರ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರು, ತಹಶೀಲ್ದಾರ ಕಚೇರಿ ಎದುರು ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಜನಸಾಮಾನ್ಯರು ಮತ್ತು ಕಕ್ಷೀಗಾರರಿಗೆ ತೊಂದರೆ ಮತ್ತು ಉಪ-ವಿಭಾಗಾಧಿಕಾರಿಗಳ ಕಚೇರಿಗೆ ಹೋಗಿ-ಬರುವುದು ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ ಎಂದು ಪ್ರತಿಭಟನಾ ನಿರತ ವಕೀಲರು ನೆರೆದಿದ್ದ ಸಾರ್ವಜನಿಕರಿಗೆ ವಿವರಿಸಿದರು.
ತದನಂತರ ಆಗಮಿಸಿದ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರು ವಕೀಲರ ಸಂಘದ ಅಧ್ಯಕ್ಷ ಸಿ.ಡಿ.ಹುಕ್ಕೇರಿ ಅವರಿಂದ ಮನವಿ ಪತ್ರ ಸ್ವೀಕರಿಸಿ, ಮುಂದಿನ ಕ್ರಮಕ್ಕಾಗಿ ಅದನ್ನು ಸರ್ಕಾರಕ್ಕೆ ರವಾನಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲ ಎಸ್.ಎಂ.ತಿಗಡಿ, ಕೆ.ಎ.ಕಳಸಣ್ಣವರ, ಪ್ರೇಮಾ ಚಿಕ್ಕೋಡಿ, ಚಂದ್ರು ನೀಲಣ್ಣವರ, ಮಹೇಶ ಜಾಧವ ಸೇರಿದಂತೆ ನೂರಾರು ವಕೀಲರು ಪಾಲ್ಗೊಂಡಿದ್ದರು.