ಗೋಕಾಕ:ಪತ್ರಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಿ : ಸರ್ವೋತ್ತಮ ಜಾರಕಿಹೊಳಿ ಅಭಿಮತ
ಪತ್ರಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಿ : ಸರ್ವೋತ್ತಮ ಜಾರಕಿಹೊಳಿ ಅಭಿಮತ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ 20 :
ಪತ್ರಕರ್ತರು ಸಂಘಟಿತರಾಗಿ ಸೇವಾಮನೋಭಾವದಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಗರದ ಸಮುದಾಯ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಪದಾಧಿಕಾರಿಗಳ ನೇಮಕ ಮತ್ತು ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೋದ್ಯಮದ ಮೇಲೆ ಜನತೆ ವಿಶ್ವಾಸವಿಟ್ಟಿದ್ದಾರೆ. ಜನರ ವಿಶ್ವಾಸಕ್ಕೆ ದಕ್ಕೆ ಬಾರದಂತೆ ನೈಜ ವರದಿಗಳನ್ನು ನೀಡುವ ಮೂಲಕ ಪತ್ರಿಕೋದ್ಯಮದ ಘನತೆ ಹೆಚ್ಚಿಸಬೇಕು. ವರದಿಗಾರರ ಹಿತ ಕಾಯಲು ಸಂಘದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದಸ್ಯರಿಗೆ ತಲುಪಿಸಲಾಗುವದು ಇತರ ಸಂಘಗಳ ಗೊಂದಲಕ್ಕೆ ಒಳಗಾಗದೆ ಈ ಸಂಘದ ಮೇಲೆ ವಿಶ್ವಾಸವಿಟ್ಟು ಜಿಲ್ಲಾ ಗೌರಾವಾಧ್ಯಕ್ಷರಾದ ಡಾ.ಭೀಮಶಿ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಬಲಿಷ್ಠ ಪಡಿಸುವಂತೆ ಹೇಳಿದರು .
ವೇದಿಕೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ, ಜಿಲ್ಲಾ ಉಪಾಧ್ಯಕ್ಷ ಯಲ್ಲಪ್ಪ ತಳವಾರ, ಜಿಲ್ಲಾ ಕಾರ್ಯದರ್ಶಿ ಟಿ.ಎನ್ ಮುರಂಕರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾದ ಸೂರ್ಯಕಾಂತ ಪಾಟೀಲ, ಭೀಮಪ್ಪ ಕಿಚಡಿ ಸುಕುಮಾರ ಬನ್ನೂರೆ ಉಪಸ್ಥಿತರಿದ್ದರು.