RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಒಳ್ಳೆಯ ಕಾರ್ಯ ಮಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಎಲ್ಲರೂ ಗೌರವಿಸೋಣ : ಹನಮಂತ ಗುಡ್ಲಮನಿ

ಮೂಡಲಗಿ:ಒಳ್ಳೆಯ ಕಾರ್ಯ ಮಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಎಲ್ಲರೂ ಗೌರವಿಸೋಣ : ಹನಮಂತ ಗುಡ್ಲಮನಿ 

ಒಳ್ಳೆಯ ಕಾರ್ಯ ಮಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಎಲ್ಲರೂ ಗೌರವಿಸೋಣ : ಹನಮಂತ ಗುಡ್ಲಮನಿ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಅ 29 :

ಕಳೆದೊಂದು ವಾರದಿಂದ ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಮೂಡಲಗಿ ಪಟ್ಟಣದ ರಸ್ತೆ ಸುಧಾರಣಾ ಕಾಮಗಾರಿಗೆ ಸೋಮವಾರದಂದು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಪಟ್ಟಣದ ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದವರೆಗಿನ 1 ಕಿ.ಮೀ ರಸ್ತೆ ಸುಧಾರಣಾ ಕಾಮಗಾರಿ ಮಾಡುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೊನೆಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ರಸ್ತೆ ಕಾಮಗಾರಿಯನ್ನು ಸ್ವಂತ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದು ಇದರಿಂದ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ವಾಕ್ ಸಮರಕ್ಕೆ ಪೂರ್ಣ ವಿರಾಮ ಬಿದ್ದಂತಾಗಿದೆ.
ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಹದಗೆಟ್ಟಿದ್ದ ಅಂಬೇಡ್ಕರ ವೃತ್ತ-ಟಿಪ್ಪು ಸುಲ್ತಾನ ವೃತ್ತದವರೆಗೆ ರಸ್ತೆ ಸುಧಾರಣೆ ಮಾಡುವಂತೆ ಪುರಸಭೆ ಸದಸ್ಯರು ಮತ್ತು ಸಾರ್ವಜನಿಕರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಾಗ ಶಾಸಕರು ಸರ್ಕಾರದ ಅನುದಾನ ವಿಳಂಬವಾಗಬಹುದು. ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲು ಅನಾನುಕೂಲವಾಗಬಹುದು ಎಂಬ ಹಿನ್ನೆಲೆಯಲ್ಲಿ ಸಾರ್ವಜನಿಕರ ಕೋರಿಕೆಯ ಮೇರೆಗೆ ಸ್ವತಃ ಅವರೇ ತಮ್ಮ ದುಡ್ಡಿನಲ್ಲಿ ಒಂದು ಕಿ.ಮೀ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ. ಅದಕ್ಕಾಗಿ ಮೂಡಲಗಿ ಪಟ್ಟಣದ ಸಮಸ್ತ ನಾಗರೀಕರ ಪರವಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಅಭಿವೃದ್ಧಿ ಕಾರ್ಯಗಳು ಬಂದಾಗ ಎಲ್ಲರೂ ಒಂದಾಗಿರಬೇಕು. ಮೂಡಲಗಿ ಪಟ್ಟಣದ ಅಭಿವೃದ್ಧಿಗೆ ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದಿಂದ ನಾನಾ ಯೋಜನೆಗಳಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ತಂದು ಪಟ್ಟಣವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ನಗರೋತ್ಥಾನ ಯೋಜನೆಯಡಿ ಪಟ್ಟಣದ ರಸ್ತೆಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಪಟ್ಟಣದ ಮುಖ್ಯ ರಸ್ತೆಗಳ ಸುಧಾರಣಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ನಾವೆಲ್ಲರೂ ಋಣಿಯಾಗಿರಬೇಕು. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅವರಿಗಿರುವ ಕಾಳಜಿಯನ್ನು ನಾವೆಲ್ಲರೂ ಮೆಚ್ಚಬೇಕು. ಸ್ವಂತ ದುಡ್ಡಿನಲ್ಲಿ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಿರುವ ಅವರ ಗುಣಕ್ಕೆ ನಾವು ಕೃತಜ್ಞತೆ ಸಲ್ಲಿಸೋಣ. ಇದನ್ನು ಮೂಡಲಗಿ ಪಟ್ಟಣದ ಅಭಿವೃದ್ಧಿ ಸಹಿಸದವರು ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗಿದ್ದ ಪಟ್ಟಣದ ಶಿವಬೋಧರಂಗ ಕಾಲೇಜುನಿಂದ ಗಣೇಶ ನಗರ(ಮೂಡಲಗಿ ಕ್ರಾಸ್) ವರೆಗೆ ತಮ್ಮ ಸ್ವಂತ ವೆಚ್ಚದಲ್ಲಿ 3 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಮಾಡಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬಗ್ಗೆ ಅಂದು ನಡೆಯದಿದ್ದ ಚರ್ಚೆಗಳು ಇಂದು ಏಕೆ ನಡೆಯುತ್ತಿವೆ. ಆಗಲೂ ಅವರು ತಮ್ಮ ಸ್ವಂತ ಹಣವನ್ನು ಈ ರಸ್ತೆ ಕಾಮಗಾರಿಗೆ ವಿನಿಯೋಗಿಸಿದ್ದಾರೆ. ಇಂದು ಅಂಬೇಡ್ಕರ-ಟಿಪ್ಪು ಸುಲ್ತಾನ ವೃತ್ತದ ರಸ್ತೆಗೆ ಯಾಕಿಷ್ಟು ಚರ್ಚೆಗಳು ನಡೆಯುತ್ತಿವೆ ಎಂಬುದು ಗೊತ್ತಾಗುತ್ತಿಲ್ಲ. ಒಳ್ಳೆಯ ಕೆಲಸ ಮಾಡಿದವರನ್ನು ನಾವು ಗೌರವಿಸಬೇಕು. ಅದು ನಮ್ಮ ಧರ್ಮ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಮಾಜಿ ಪುರಸಭೆ ಅಧ್ಯಕ್ಷ ರವಿ ಸಣ್ಣಕ್ಕಿ, ಪುರಸಭೆ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಸೋನವಾಲಕರ, ಅಜೀಜ ಡಾಂಗೆ, ಹುಸೇನಸಾಬ ಶೇಖ, ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಗಿರೀಶ ಢವಳೇಶ್ವರ, ಈಶ್ವರ ಕಂಕಣವಾಡಿ, ಅನ್ವರ ನದಾಫ, ಮರೆಪ್ಪ ಮರೆಪ್ಪಗೋಳ, ಈರಪ್ಪ ಮುನ್ಯಾಳ, ರುದ್ರಪ್ಪ ವಾಲಿ, ಈರಪ್ಪ ಢವಳೇಶ್ವರ, ರಾಜು ಪೂಜೇರಿ, ಸಚೀನ ಸೋನವಾಲಕರ, ಬಸು ಝಂಡೇಕುರುಬರ, ರಮೇಶ ಸಣ್ಣಕ್ಕಿ, ಪ್ರಭಾಕರ ಬಂಗೆನ್ನವರ, ರಾಮು ಝಂಡೇಕುರುಬರ, ನನ್ನುಸಾಬ ಶೇಖ, ಪ್ರಕಾಶ ಮಾದರ, ಭೀಮಶಿ ಸಣ್ಣಕ್ಕಿ, ಆನಂದ ಟಪಾಲ, ಅಬ್ದುಲಗಫಾರ ಡಾಂಗೆ, ಪ್ರಕಾಶ ಮುಗಳಖೋಡ, ದುಂಡಪ್ಪ ಶಾಬನ್ನವರ, ಉಮೇಶ ಹಳ್ಳೂರ, ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ಸಿ.ಪಿ. ಯಕ್ಷಂಬಿ, ಗುತ್ತಿಗೆದಾರ ಬಿ.ಬಿ. ದಾಸನವರ, ಮುಂತಾದವರು ಉಪಸ್ಥಿತರಿದ್ದರು.

Related posts: