ಗೋಕಾಕ:ಯೋಧನ ಸಾವು : ಪಾರ್ಥಿವ ಶರೀರ ಮೇಲ್ಮಟ್ಟಿಗೆ ಆಗಮಿಸಿದ ವೇಳೆ ಕಣ್ಣೀರಿನಲ್ಲಿ ಮುಳಗಿದ ಗ್ರಾಮಸ್ಥರು
ಯೋಧನ ಸಾವು : ಪಾರ್ಥಿವ ಶರೀರ ಮೇಲ್ಮಟ್ಟಿಗೆ ಆಗಮಿಸಿದ ವೇಳೆ ಕಣ್ಣೀರಿನಲ್ಲಿ ಮುಳಗಿದ ಗ್ರಾಮಸ್ಥರು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 14 :
ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿರುವ ಗೋಕಾಕ ತಾಲೂಕಿನ ಮೇಲ್ಮಟ್ಟಿ ಗ್ರಾಮದ ಶಂಕರ ಯಲಿಗಾರ (33) ಅವರು ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿದ್ದಾರೆ. ಅವರ ಅಕಾಲ ಮರಣಕ್ಕೆ ಮನೆ ಮಂದಿ ಮಾತ್ರವಲ್ಲ, ಇಡೀ ಊರೇ ಕಣ್ಣೀರಿಡುತ್ತಿದೆ.
ಶಂಕರ ಅವರು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಸೇವೆ ಸಲ್ಲಿರುತ್ತಿರುವಾಗಲೇ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಬುಧವಾರ ಅವರ ಪಾರ್ಥಿವ ಶರೀರವನ್ನು ಮೇಲ್ಮಟ್ಟಿಗೆ ಗ್ರಾಮಕ್ಕೆ ತರಲಾಗಿದೆ. ಈ ವೇಳೆ ಕುಟುಂಬಿಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೇಲ್ಮಟ್ಟಿ ಗ್ರಾಮದಲ್ಲಿ ಸೇರಿದ ಜನರು : ಸೇನಾ ವಾಹನದ ಮೂಲಕ ಪಾರ್ಥಿವ ಶರೀರವನ್ನು ಮೇಲ್ಮಟ್ಟಿ ಗ್ರಾಮಕ್ಕೆ ತರಲಾಗಿದೆ. ತಾಲೂಕು ಆಡಳಿತ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ಕುಟುಂಬಿಕರು ಗೌರವ ಸಲ್ಲಿಸಿದರು. ಯೋಧನ ಮನೆ ಮುಂದೆ ಸಾವಿರಾರು ಮಂದಿ ಜಮಾಯಿಸಿದ್ದಾರೆ. ಅಂತಿಮ ದರ್ಶನಕ್ಕಾಗಿ ಊರು ಮಾತ್ರವಲ್ಲ ಪಕ್ಕದ ಊರಿನಿಂದಲೂ ಭಾರಿ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ.
ಅಂತಿಮ ದರ್ಶನದ ಬಳಿಕ ಸಕಲ ಸರಕಾರಿ ಗೌರವದೊಂದಿಗೆ ಶಂಕರ ಯಲಿಗಾರ ಅವರ ಅಂತ್ಯಕ್ರಿಯೆ ನಡೆಯಲಿದೆ. ಸ್ಥಳದಲ್ಲಿ ೫೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.