ಗೋಕಾಕ:ಶ್ರೀ ಸಿದ್ಧೇಶ್ವರ ಸೊಸೈಟಿ: ಸನ್ 2021-22ರಲ್ಲಿ ರೂ. 9.82 ಲಕ್ಷ ಲಾಭ

ಶ್ರೀ ಸಿದ್ಧೇಶ್ವರ ಸೊಸೈಟಿ: ಸನ್ 2021-22ರಲ್ಲಿ ರೂ. 9.82 ಲಕ್ಷ ಲಾಭ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :
ಸಹಕಾರಿ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಅದರ ಚಟುವಟಿಕೆಗಳಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗಿದೆ ಎಂದು ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪ್. ಕ್ರೆಡಿಟ್ ಸೊಸೈಟಿ ಆಡಳಿತ ಮಂಡಳಿ ಚೇರಮನ್ ವಿವೇಕಾನಂದ ಚುನಮರಿ ಹೇಳಿದರು.
ಶನಿವಾರ ಸಂಘದ ಕಟ್ಟಡದಲ್ಲಿ ಜರುಗಿದ 2021-22ನೇ ಆರ್ಥಿಕ ವರ್ಷದ 24ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಹಣಕಾಸು ವರ್ಷದಲ್ಲಿ ಸಂಘವು ರೂ. 9,81,720 ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಮಹಾಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸದಸ್ಯ ನಿವೃತ್ತ ಶಿಕ್ಷಕ ಎಸ್.ವಿ.ಮಿರ್ಜಿ ಮತ್ತು ನೋಟರಿ ಎಸ್.ಬಿ.ಗೋರೋಶಿ ಅವರು ಸಂಘದ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಲು ಆಡಳಿತ ಮಂಡಳಿ ಕಾರ್ಯೋನ್ಮುಖರಾಗುವಂತೆ ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಮಲ್ಲಿಕಾರ್ಜುನ ಖೋತ ಮತ್ತು ಮಹೇಶ ಮುಚ್ಚಂಡಿಹಿರೇಮಠ, ಸಂಘದ ಸಂಸ್ಥಾಪನಾ ಅಧ್ಯಕ್ಷರೂ ಆಗಿದ್ದ ಗೋಕಾಕ ಅರ್ಬನ್ ಬ್ಯಾಂಕಿನ ನಿರ್ದೇಶಕ ಚಂದ್ರಕಾಂತ ಕುರಬೇಟ ಮತ್ತು ಸಂಘದ ಹಿತೈಷಿ ವಿಕ್ರಮ ಅಂಗಡಿ ವೇದಿಕೆಯಲ್ಲಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಭುಜನ್ನವರ ಸಂಘದ ವರದಿ ವಾಚನ ಮಂಡಿಸಿ, 2023ರಲ್ಲಿ ಸಂಘವು ಆಚರಿಸಿಕೊಳ್ಳಲಿರುವ ಬೆಳ್ಳಿಹಬ್ಬ ಆಚರಣೆ ಕಾರ್ಯಕ್ರಮದ ನಿಧಿಗೆ 2021-22ನೇ ಆರ್ಥಿಕ ವರ್ಷದ ಲಾಭಾಂಶವನ್ನು ಸಂಪೂರ್ಣವಾಗಿ ವರ್ಗಾವಣೆಗೆ ಮಾಡಲು ಸಮ್ಮತಿಸಿದ ಸದಸ್ಯರನ್ನು ಅಭಿನಂದಿಸಿದರು.
ಮಹಾಸಭೆಯಲ್ಲಿ ನಿರ್ದೇಶಕರುಗಳಾದ ಬಸವರಾಜ ಕ್ಯಾಸ್ತಿ, ಬಸವರಾಜ ಅಂಗಡಿ, ಶಂಕರ ಮಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ಹಿರಿಯ ವಕೀಲ ಎ.ವಿ.ಹುಲಗಬಾಳಿ ಸ್ವಾಗತಿಸಿ, ನಿರೂಪಿಸಿದರು. ಸಂಘದ ಕಾನೂನು ಸಲಹೆಗಾರ ರಾಮೇಶ್ವರ ಕಲ್ಯಾಣಶೆಟ್ಟಿ ವಂದಿಸಿದರು.