ಮೂಡಲಗಿ:ಮೂಡಲಗಿಯಲ್ಲಿ ಸತೀಶ ಜಾರಕಿಹೊಳಿ ಬೆಂಬಲಿಸಿ ಡಿಎಸ್‍ಎಸ್ ಒಕ್ಕೂಟದಿಂದ ಪ್ರತಿಭಟನೆ
ಮೂಡಲಗಿಯಲ್ಲಿ ಸತೀಶ ಜಾರಕಿಹೊಳಿ ಬೆಂಬಲಿಸಿ ಡಿಎಸ್‍ಎಸ್ ಒಕ್ಕೂಟದಿಂದ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ನ 10 :
ಕೋಮುವಾದಿಗಳು ಮುಚ್ಚಿಟ್ಟಿದ್ದ ಸತ್ಯವನ್ನು ಹೊರಹಾಕಿದ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಹೇಳಿಕೆಗಳು ಸತ್ಯವಾಗಿದ್ದು, ಇದನ್ನು ಅರಗಿಸಿಕೊಳ್ಳಲಾಗದ ಮನುವಾದಿಗಳು, ಒಬ್ಬ ದಲಿತ ನಾಯಕನನ್ನು ತೇಜೋವಧೆಮಾಡಲು ಹೊರಟಿದ್ದಾರೆ, ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ಬೆಳಗಾವಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ಹೇಳಿದರು.
ಗುರುವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿ ತಾಲೂಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸತೀಶ ಜಾರಕಿಹೊಳಿ ಬೆಂಬಲಿಸಿ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ ಅವರ ಮುಖಾಂತರ ಮನವಿ ಸಲ್ಲಿಸಿಸ ಸಂಧರ್ಭದಲ್ಲಿ ಮಾತನಾಡಿದ ಅವರು ಸತೀಶ ಜಾರಕಿಹೊಳಿಯವರು ಮಾಡುತ್ತಿರುವ ಸಾಮಾಜಿಕ ಕ್ರಾಂತಿ ನಮಗೆಲ್ಲಾ ಪ್ರೇರಣೆಯಾಗಿದೆ ಎಂದರು.
ದಲಿತ ಮುಖಂಡರಾದ ರಮೇಶ ಸಣ್ಣಕ್ಕಿ ಹಾಗೂ ಸತೀಶ ಕರವಾಡೆ ಮಾತನಾಡಿ, ಸತೀಶ ಜಾರಕಿಹೊಳಿಯವರ ಹೇಳಿಕೆಯಿಂದ ಯಾರನ್ನೂ ಅವಮಾನಿಸುವ ಪ್ರಶ್ನೆ ಬರುವದಿಲ್ಲಾ, ಸತ್ಯವನ್ನೇ ಹೇಳಿದ್ದು, ಇದರಲ್ಲಿ ಹಿಂದೂ ಶಬ್ದವು, ಪರ್ಶಿಯನ್ ಭಾμÉಯಲ್ಲಿ ವಿವಿಧ ಅರ್ಥಗಳನ್ನು ಕಲ್ಪಿಸುತ್ತದೆ, ಅದನ್ನೇ ಜಾರಕಿಹೊಳಿಯವರು ಹೇಳಿರುವುದು ಸತ್ಯವಾಗಿದೆ ಎಂದರು
ಮುಖಂಡರಾದ ರವಿ ಮೂಡಲಗಿ, ವಸಂತ ಕಾತೆನ್ನವರ ಹಾಗೂ ಶಿವಾನಂದ ಹೊಸಮನಿ ಮಾತನಾಡಿ, ಸರ್ಕಾರವು ಬೇಕಾದರೆ, ಇದಕ್ಕೊಂದು ಸಮಿತಿ ರಚನೆ ಮಾಡಿ ಸತ್ಯಾಸತ್ಯತೆಯನ್ನು ಅರಿತುಕೊಳ್ಳಬೇಕಾಗಿದೆ. ಸತೀಶ ಜಾರಕಿಹೊಳಿಯವರು ‘ಬುದ್ಧ, ಬಸವ, ಅಂಬೇಡ್ಕರ, ತತ್ವ ಸಿದ್ಧಾಂತಗಳನ್ನು ಕಳೆದ 25 ವರ್ಷಗಳಿಂದ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಇದನ್ನು ಸಹಿಸದೇ, ಸತೀಶ ಜಾರಕಿಹೊಳಿಯವರ ತೇಜೋವಧೆ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು, ತಪ್ಪಿದಲ್ಲಿ ದಲಿತ ಸಂಘಟನೆಗಳು ಬೀದಿಗಿಳಿದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಶಾಬಪ್ಪ ಸಣ್ಣಕ್ಕಿ, ಯಶವಂತ ಮಂಟೂರ್, ಮಲ್ಲಿಕಾರ್ಜುನ ಕಬ್ಬೂರ, ಲಗಮಣ್ಣ ಕಳಸಣ್ಣವರ, ರಾಮಚಂದ್ರ ಸಿಡ್ಲೆಪ್ಪಗೋಳ, ಪುಂಡಲೀಕ ಹಲಗಿ, ಎಲ್.ಎಸ್.ಯಕ್ಸಂಬಿ, ರಮೇಶ ಈರಗಾರ, ತಮ್ಮಣ್ಣ ಗಸ್ತಿ, ಶ್ರೀಪಾದ ನಾಗನ್ನವರ, ಸುಭಾಸ ಅಳ್ಳಿಮಟ್ಟಿ, ಮಾನಿಂಗ ಮಾದರ, ಮಾರುತಿ ಮಾವರಕರ, ಎಸ್.ವಿ.ಸಣ್ಣಕ್ಕಿ, ಲಕ್ಕಪ್ಪ ತೆಳಗಡೆ, ಜಡೆಪ್ಪ ಮಂಗಿ, ಧರ್ಮರಾಜ ಪೋಳ, ರಾಜು ಪರಸನ್ನವರ, ಯಮನಪ್ಪ ಮೇತ್ರಿ, ಸುಂದರ ಬಾಲಪ್ಪನವರ, ಜಯವಂತ ನಾಗನ್ನವರ ಸೇರಿದಂತೆ ಮೂಡಲಗಿ ತಾಲೂಕ ದಲಿತ ಸಂಘಟನೆಗಳ ಸಮೀತಿಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಮುಂಚೆ ಪುರಸಭೆ ಆವರಣದಿಂದ ದಲಿತ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನಾ ಮೇರವಣಿಗೆ ಕಲ್ಮೇಶ್ವರ ವೃತ್ತದವರಿಗೆ ನಡೆಸಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಸಚಿವೆ ಶಶಿಕಲಾ ಜೋಲೆ, ಸಂಸದ ಈರಣ್ಣ ಕಡಾಡಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.