ಘಟಪ್ರಭಾ:ಅತೀ ಹೆಚ್ಚು ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಜನಸಂಖ್ಯೆ ಕಳೆದ 75 ವರ್ಷಗಳಿಂದ ಸೌಲಭ್ಯಗಳಿಂದ ವಂಚಿತವಾಗಿದೆ : ಬಸವಜಯ ಮೃತ್ಯುಂಜಯ ಸ್ವಾಮೀಜಿ
ಅತೀ ಹೆಚ್ಚು ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಜನಸಂಖ್ಯೆ ಕಳೆದ 75 ವರ್ಷಗಳಿಂದ ಸೌಲಭ್ಯಗಳಿಂದ ವಂಚಿತವಾಗಿದೆ : ಬಸವಜಯ ಮೃತ್ಯುಂಜಯ ಸ್ವಾಮೀಜಿ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 11 :
ರಾಜ್ಯದಲ್ಲಿ ಅತೀ ಹೆಚ್ಚು ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಜನಸಂಖ್ಯೆ ಕಳೆದ 75 ವರ್ಷಗಳಿಂದ ಸಂಪೂರ್ಣವಾಗಿ ಸೌಲಭ್ಯಗಳಿಂದ ವಂಚಿತವಾಗಿದೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವ ತನಕ ಈ ಹೋರಾಟ ನಿಲ್ಲುವುದಿಲ್ಲ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ಇಂದು ಘಟಪ್ರಭಾ ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಡೆದ 2ಎ ಮೀಸಲಾತಿ ಹೋರಾಟದ ನೇತೃತ್ವಹಿಸಿ ಮಾತನಾಡಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ ನಮಗೆ ಬೇಕಾಗಿರುವುದು ನಮ್ಮ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ಕಳೆದ 75 ವರ್ಷಗಳಿಂದ ನಮ್ಮ ಸಮಾಜ ಓಟ ಬ್ಯಾಂಕ್ ಆಗಿದೆಯೆ ವಿನಹಃ ಯಾವ ಸೌಲಭ್ಯವನ್ನು ಪಡೆದುಕೊಂಡಿಲ್ಲ ಸಮಾಜದ ಮಕ್ಕಳಿಗೆ ನ್ಯಾಯ ಒದಗಿಸಬೇಕು ದಿ.13ರಂದು ಗೋಕಾಕದಲ್ಲಿ ನಡೆಯುವ ಸಮಾವೇಶದೊಳಗೆ ರಾಜ್ಯ ಸರಕಾರ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಡಿಸೆಂಬರ್ 12ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಪಂಚಮಸಾಲಿ ಸಮಾಜದ ಮುಂದಿನ ಭವಿಷ್ಯತ್ ಕಾಲದಲ್ಲಿ ತಮ್ಮ ಮಕ್ಕಳ ಬಗ್ಗೆ ಚಿಂತಿಸಬೇಕಾಗಿದೆ. ನಮ್ಮಿಂದ ಓಟ ಪಡೆದವರು ಯಾರು ಇಂದು ವಿಧಾನ ಸಭೆಯಲ್ಲಿಯಾಗಲಿ ಲೋಕಸಭೆಯಲಾಗಲಿ ಮಾತನಾಡುತ್ತಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಲಿಂಗಾಯತ ಪಂಚಮಸಾಲಿ ಸಮಾಜ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ಘಟಪ್ರಭಾದ ಪಂಚಮಸಾಲಿ ಸಮಾಜದವರಿಂದ ಬೃಹತ್ ಮೆರವಣಿಗೆ ಗ್ರಾಮದಲ್ಲಿ ನಡೆಯಿತು.
ವೇದಿಕೆಯಲ್ಲಿ ಮಾಜಿ ಸಚಿವ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ನಿಂಗಪ್ಪ ಪಿರೋಜಿ, ಪ್ರಕಾಶ ಬಾಗೋಜಿ, ರೋಹಿಣಿ ಪಾಟೀಲ, ಪಂಚನಗೌಡ ದ್ಯಾಮನಗೌಡರ, ಆರ್.ಕೆ.ಪಾಟೀಲ, ಇದ್ದರು. ಕಾರ್ಯಕ್ರಮದಲ್ಲಿ ಮಲ್ಲಾಪೂರ ಪಿಜಿ, ಘಟಪ್ರಭಾ, ಧುಪದಾಳ, ಶಿಂಧಿಕುರಬೇಟ, ಪಾಮಲದಿನ್ನಿ, ಪಂಚಮಸಾಲಿ ಸಮಾಜದವರು ಇದ್ದರು