ಮೂಡಲಗಿ:ಸೌಲಭ್ಯಗಳನ್ನು ಯೋಗ್ಯವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಿ : ಕುಮಾರಿ ಶ್ರೀದೇವಿ ಹುಲಕುಂದ
ಸೌಲಭ್ಯಗಳನ್ನು ಯೋಗ್ಯವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಿ : ಕುಮಾರಿ ಶ್ರೀದೇವಿ ಹುಲಕುಂದ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ನ 14 :
ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ, ಸಮಾಜದಲ್ಲಿ ಸಿಗುವ ಅವಕಾಶ ಸೌಲಭ್ಯಗಳನ್ನು ಯೋಗ್ಯವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕಾಗಿದೆ. ಅದರಂತೆ ನಮ್ಮ ಶಾಲೆಗಳಲ್ಲಿ ಕೂಡ ಅನೇಕ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಮಾಡುವದರ ಮೂಲಕ ಗುರುಗಳು ಮಕ್ಕಳ ಪ್ರತಿಭೆಗೆ ಸೂಕ್ರ ಅವಕಾಶ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ಶ್ರೀದೇವಿ ಹುಲಕುಂದ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರುಗಿದ ನೆಹರು ಜಯಂತಿ ಅಂಗವಾಗಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಾದ ನಾವೆಲ್ಲ ಕೇವಲ ಮೋಬೈಲ್ ಟಿವಿ.ಗಳ ಗೀಳಿಗೆ ಒಳಗಾಗದೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವದರ ಮುಖಾಂತರ ಕೇವಲ ಪಠ್ಯ ಪುಸ್ತಕಗಳನ್ನಷ್ಟೇ ಅಲ್ಲದೆ ದೊಡ್ಡ ದೊಡ್ಡ ಗ್ರಂಥಗಳನ್ನು ಓದಿ ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಇಂತಹ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿದ್ಯಾರ್ಥಿಗಳನ್ನು ಅತಿಥಿ, ಅಧ್ಯಕ್ಷರನ್ನಾಗಿ ಮಾಡಿ ಗುರುಬಳಗ ನಮಗೆ ಒಳ್ಳೆಯ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಶಾಲೆಯ ಪ್ರಧಾನ ಗುರು ಎ.ವ್ಹಿ. ಗಿರೆಣ್ಣವರ ಮಾತನಾಡಿ, ವಿದ್ಯಾರ್ಥಿಗಳು ಅಭ್ಯಾಸದ ಪಠ್ಯಕ್ರಮದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮ ಸಂಘಟಿಸುವ ಮಾತನಾಡುವ ಕಲೆಯನ್ನು ಬೆಳೆಸಿಕೊಂಡು ಕಾರ್ಯಕ್ರಮ ನಿರೂಪಿಸುವದರ ಮುಖಾಂತರ ವಿದ್ಯಾರ್ಥಿದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳ ಜನ್ಮದಿನವನ್ನು ಕೂಡ ವೇದಿಕೆಯ ಮೇಲೆ ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಕುಮಾರಿ ಸಿಂಚನಾ ಪತ್ತಾರ, ಆದರ್ಶ ಹುಲಕುಂದ, ರಾಮಲಿಂಗ ಹುಲಕುಂದ, ಲಕ್ಷ್ಮೀ ಗದಾಡಿ, ದೀಪಾ ಮರ್ದಿ, ಸುಪ್ರಿಯಾ ಗುಂಡಿ, ಯಲ್ಲಾಲಿಂಗ ಕಿಲಾರಿ, ಪ್ರೀತಿ ಗದಾಡಿ, ಸ್ನೇಹಾ ಗುಜ್ಜರ, ಪೂರ್ಣಿಮಾ ಬಾಗೇವಾಡಿ, ಭಾಗೀರಥಿ ಸವಟಗಿ, ಸಿದ್ದಮ್ಮ ಹುಲಕುಂದ, ಸುಪ್ರಿಯಾ ಗದಾಡಿ ಆಗಮಿಸಿದ್ದರು. ಎಲ್ಲ ಗುರುಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವದರ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸಿದ್ದಮ್ಮ ಹುಲಕುಂದ, ಪೂರ್ಣೀಮಾ ಬಾಗೇವಾಡಿ ನಿರೂಪಿಸಿದರು. ಪ್ರಾರಂಭದಲ್ಲಿ ಸುಪ್ರಿಯಾ ಗದಾಡಿ ಸ್ವಾಗತಿಸಿದರು. ಕೊನೆಯಲ್ಲಿ ತೇಜಶ್ವಿನಿ ಹುಲಕುಂದ ವಂದಿಸಿದರು.