ಮೂಡಲಗಿ:ಕಳ್ಳಿಗುದ್ದಿಯಲ್ಲಿ ವೇಮನರ ತತ್ವ ಚಿಂತನ ಕಾರ್ಯಕ್ರಮ ಆಧ್ಯಾತ್ಮಿಕ ಚಿಂತನೆಯತ್ತ ಜನರ ಒಲವು-ಗೌಡಪ್ಪಗೋಳ
ಕಳ್ಳಿಗುದ್ದಿಯಲ್ಲಿ ವೇಮನರ ತತ್ವ ಚಿಂತನ ಕಾರ್ಯಕ್ರಮ
ಆಧ್ಯಾತ್ಮಿಕ ಚಿಂತನೆಯತ್ತ ಜನರ ಒಲವು-ಗೌಡಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ನ 14 :
ನಿತ್ಯ ಹಲವಾರು ತುಮುಲಗಳಿಗೆ ಒಳಗಾಗಿ ಮನಶಾಂತಿ, ನೆಮ್ಮದಿಯನ್ನು ಕಳೆದುಕೊಂಡಿರುವ ಮನುಷ್ಯ ಈಗ ಮತ್ತೆ ಆಧ್ಯಾತ್ಮಿಕ ಚಿಂತನೆಯತ್ತ ವಾಲುತ್ತಿದ್ದಾನೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಹೇಳಿದ್ದಾರೆ.
ಅವರು ಸಮೀಪದ ಕಳ್ಳಿಗುದ್ದಿ ಗ್ರಾಮದಲ್ಲಿ ರವಿವಾರ ಬೆನಕಟ್ಟಿಯ ಹೇಮ-ವೇಮನ ಸದ್ಬೋಧನ ಪೀಠ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ಮಹಾಯೋಗಿ ವೇಮನರ ೧೪೬ ನೇ ಮಾಸಿಕ ತತ್ವ ಚಿಂತನ ಕರ‍್ಯಕ್ರಮದಲ್ಲಿ ಉಪನ್ಯಾಸ ನೀಡಿ, ಜಂಜಾಟದ ಬದುಕಿನಲ್ಲಿ ಸಿಲುಕಿ ನೆಮ್ಮದಿಯನ್ನೇ ಕಳೆದುಕೊಂಡಿರುವ ಮಾನವನಿಗೆ ಮತ್ತೆ ಆಧ್ಯಾತ್ಮದ ಸ್ಪರ್ಶ ಅಗತ್ಯವಾಗಿದೆ ಎಂದರು.
ಸತ್ಸಂಗದಿಂದ ಬದುಕಿನಲ್ಲಿ ಬದಲಾವಣೆ ಕಾಣಬಹುದಾಗಿದ್ದು, ಇದ್ದುದರಲ್ಲಿಯೇ ತೃಪ್ತಿಯ ಜೀವನ ಸಾಗಿಸಿ ನೆಮ್ಮದಿ, ಶಾಂತಿಯನ್ನು ಕಂಡುಕೊಳ್ಳಬೇಕು ಎಂದು ಹೇಳಿದ ಗೌಡಪ್ಪಗೋಳ, ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಆದರ್ಶದ ಬದುಕು ಹಾಗೂ ಮಹಾಯೋಗಿ ವೇಮನರ ತತ್ವ ಸಂದೇಶಗಳು ಮನುಕುಲಕ್ಕೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಕರ‍್ಯಕ್ರಮ ಉದ್ಘಾಟಿಸಿದ ನಿವೃತ್ತ ಕರ‍್ಯನಿರ್ವಾಹಕ ಅಭಿಯಂತರ ರಮೇಶ ಜಂಗಲ್, ಮಹಾಯೋಗಿ ವೇಮನರು ತಮ್ಮ ತತ್ವ ಸಂದೇಶಗಳ ಮೂಲಕ ಮನುಕುಲಕ್ಕೆ ಬೆಳಕಿನ ದಾರಿ ತೋರಿದರು. ಅವರ ಪದ್ಯಗಳ ಸಾರ ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಹುಲಕುಂದ ರಾಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಾಯ್.ಎಚ್.ಮುಂಬರಡ್ಡಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರು ಕೇವಲ ರಡ್ಡಿ ಕುಲಕ್ಕೆ ಸಂಬಂಧಿಸಿದವರಲ್ಲ. ಅವರುಗಳು ಇಡೀ ಮಾನವ ಕುಲದ ಏಳಿಗೆಯನ್ನು ಬಯಸಿದವರು ಎಂದು ಹೇಳಿದರು.
ತಪರಟ್ಟಿ-ಕಳ್ಳಿಗುದ್ದಿ ಬಸವರಾಜ ಹಿರೇಮಠ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಭಿಯಂತರ ಎಚ್.ಆರ್.ಮಹಾರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ರಾಮಣ್ಣ ಮಹಾರಡ್ಡಿ, ಹೇಮ-ವೇಮನ ಸದ್ಬೋಧನ ಪೀಠದ ಮಾಲತೇಶ ಅಮಾತೆಪ್ಪನವರ ಅತಿಥಿಯಾಗಿದ್ದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಯಮನಪ್ಪ ಮಾದರ ಹಾಗೂ ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು.
ಭಜನಾ ಸಂಘದವರು ವೇಮನ ವಚನ ಪಠಿಸಿದರು. ವೆಂಕಟೇಶ ವiಹಾರಡ್ಡಿ ಸ್ವಾಗತಿಸಿದರು. ರಮೇಶ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಸ್.ಪಾಟೀಲ ನಿರೂಪಿಸಿದರು.