ಬೆಳಗಾವಿ:ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ
ಮೂಡಲಗಿ ತಾಲೂಕ ರಚನೆಗೆ ಸರಕಾರಕ್ಕೆ ಶಿಫಾರಸು : ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ
ಬೆಳಗಾವಿ ಅ 9: ಮೂಡಲಗಿ ತಾಲೂಕು ರಚನೆಗೆ ಬೇಕಾದ ಅಗತ್ಯ ಶಿಫಾರಸ್ಸು ಮುಖ್ಯಮಂತ್ರಿ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ ತಿಳಿಸಿದ್ದಾರೆ.
ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು ಮೂಡಲಗಿ ತಾಲೂಕು ರಚನೆಯ ಹೋರಾಟ ನಡೆದಿರುವ ಬೆನ್ನಲಿಯೇ ಸರಕಾರಕ್ಕೆ ಅಗತ್ಯ ವರದಿ ಸಲ್ಲಿಸಲಾಗಿದ್ದು, ಬಹುಶಃ ಬುಧವಾರದಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ ದೊರೆಯಬಹುದು ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ಆಶಯ ವ್ಯಕ್ತಪಡಿಸಿದರು.
ಸಮಸ್ಯೆಯಿಲ್ಲ: ತಕ್ಕಮಟ್ಟಿಗೆ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಮಳೆ ಆಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಸುಧಾರಿಸಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ಅನಿವಾರ್ಯತೆ ಸದ್ಯಕ್ಕೆ ಕಡಿಮೆಯಾಗಿದೆ. ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಗಳು ಕುಡಿಯುವ ನೀರು, ಮೇವು ಮತ್ತು ಜಾನುವಾರುಗಳ ಔಷಧಿ, ಜನರಿಗೆ ಉದ್ಯೋಗ ಸಂಬಂಧ, ಅಗತ್ಯ ಸಿದ್ದತೆಯೊಂದಿಗೆ ಪರಿಸ್ಥಿತಿಯ ಅವಲೋಕನದಲ್ಲಿದ್ದಾರೆ ಎಂದರು. ಜಿಪಂ. ಸಿಇಓ ಆರ್. ರಾಮಚಂದ್ರನ್, ಎಡಿಸಿ ಡಾ. ಸುರೇಶ ಇಟ್ನಾಳ ಉಪಸ್ಥಿತರಿದ್ದರು.