RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ನಮ್ಮ ನೆಲವನ್ನು ಒಂದಿಂಚೂ ಬಿಟ್ಟುಕೊಡುವುದಿಲ್ಲ. ಎಂದೆಂದಿಗೂ ಬೆಳಗಾವಿ ನಮ್ಮದೇ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ನಮ್ಮ ನೆಲವನ್ನು ಒಂದಿಂಚೂ ಬಿಟ್ಟುಕೊಡುವುದಿಲ್ಲ. ಎಂದೆಂದಿಗೂ ಬೆಳಗಾವಿ ನಮ್ಮದೇ : ಶಾಸಕ ಬಾಲಚಂದ್ರ ಜಾರಕಿಹೊಳಿ 

ನಮ್ಮ ನೆಲವನ್ನು ಒಂದಿಂಚೂ ಬಿಟ್ಟುಕೊಡುವುದಿಲ್ಲ. ಎಂದೆಂದಿಗೂ ಬೆಳಗಾವಿ ನಮ್ಮದೇ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ(ಡಾ.ಬೆಟಗೇರಿ ಕೃಷ್ಣಶರ್ಮ ವೇದಿಕೆ, ಬೆಟಗೇರಿ) : ಬೆಳಗಾವಿ ಎಂದೆಂದಿಗೂ ನಮ್ಮದೇ. ಗಡಿ ವಿವಾದ ಮುಗಿದ ಅಧ್ಯಾಯ. ಗಡಿ ವಿಷಯದಲ್ಲಿ ಪ್ರತಿ ಚುನಾವಣೆ ಬಂದಾಗೊಮ್ಮೆ ಅನಾವಶ್ಯಕವಾಗಿ ಗಡಿ ಖ್ಯಾತೆ ತೆಗೆಯುತ್ತಿರುವವರಿಗೆ ಕನ್ನಡಿಗರಾದ ನಾವು ತಕ್ಕ ಉತ್ತರ ನೀಡುತ್ತಿದ್ದೇವೆ. ಕನ್ನಡ ನೆಲ, ಜಲ, ಭಾಷೆ ಸಮಸ್ಯೆಗಳು ಎದುರಾದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಕನ್ನಡತನವನ್ನು ಮೆರೆಯಬೇಕಾಗಿದೆ ಎಂದು ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರದಂದು ತಾಲೂಕಿನ ಬೆಟಗೇರಿ ಗ್ರಾಮದ ವಿ.ವಿ. ದೇಯನ್ನವರ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಜರುಗಿದ ಗೋಕಾಕ ತಾಲೂಕಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಗಡಿ ವಿಷಯದಲ್ಲಿ ಮಹಾಜನ ವರದಿಯೇ ಅಂತಿಮವಾಗಿದೆ. ಈ ವಿಷಯದಲ್ಲಿ ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೋಸ್ಕರ ಬೆಳಗಾವಿ ನಮ್ಮದೆಂದು ವಾದಿಸುತ್ತಿದ್ದಾರೆ. ನಮ್ಮ ನೆಲವನ್ನು ಒಂದಿಂಚೂ ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಅವರು ಹೇಳಿದರು.
ಇಡೀ ದೇಶದಲ್ಲಿಯೇ ನಮ್ಮ ಕನ್ನಡ ಭಾಷೆ ಅತ್ಯಂತ ಸುಂದರ ಹಾಗೂ ಸರಳ ಭಾಷೆಯಾಗಿದೆ. ಕನ್ನಡ ನೆಲದಲ್ಲಿ ಹುಟ್ಟಿರುವವರು ನಾವೆಲ್ಲರೂ ಪುಣ್ಯವಂತರು. ಕನ್ನಡ ನಾಡು-ನುಡಿ, ನೆಲ-ಜಲ, ವಿಷಯಗಳಿಗೆ ಕಟಿಬದ್ಧರಾಗಿ ನಾವೆಲ್ಲರೂ ಹೋರಾಟ ಮಾಡಬೇಕಿದೆ. ಕನ್ನಡ ಭಾಷೆಯನ್ನು ಎಲ್ಲರೂ ಪ್ರೀತಿಸೋಣ. ಅದರಂತೆ ಬೇರೆ ಭಾಷೆಗಳ ಬಗ್ಗೆ ಗೌರವ ಇಟ್ಟುಕೊಳ್ಳೋಣ. ಕನ್ನಡ ಭಾಷೆಗೆ ಈಗಾಗಲೇ 8 ಜ್ಞಾನಪೀಠ ಪ್ರಶಸ್ತಿಗಳು ದೊರಕಿರುವುದು ಈ ನೆಲದ ಪುಣ್ಯ. ಆದ್ದರಿಂದ ಕಡ್ಡಾಯವಾಗಿ ಎಲ್ಲರೂ ಮಾತೃ ಭಾಷೆ ಕನ್ನಡ ಮಾಧ್ಯಮದಲ್ಲಿಯೇ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಂತೆ ಅವರು ಕೋರಿದರು.
ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿದ್ದೇವೆ. ಶಿಕ್ಷಣದ ಸಮಗ್ರ ಬದಲಾವಣೆಯೇ ನಮ್ಮ ಪ್ರಮುಖ ಅಸ್ತ್ರವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬೆಟಗೇರಿ ಸೇರಿದಂತೆ ಮೂಡಲಗಿ, ಖಾನಟ್ಟಿ, ಕುಲಗೋಡ ಗ್ರಾಮಗಳಲ್ಲಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳನ್ನು ಆರಂಭಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದೆ. ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಕನ್ನಡ ಕಸ್ತೂರಿ ಭಾಷೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂಬುದು ಸರ್ಕಾರದ ಆಶಯವಾಗಿದೆ. ಈ ದಿಸೆಯಲ್ಲಿ ನಮ್ಮ ವಲಯದಲ್ಲಿ ಸುಮಾರು 50 ಸಾವಿರ ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಎಂದು ಹೇಳಿದರು.
ಮೂಡಲಗಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನೇವರಿ ತಿಂಗಳಲ್ಲಿ ಏರ್ಪಡಿಸಲು ಈಗಾಗಲೇ ನಿಶ್ಚಯ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಮ್ಮೇಳನದ ಉದ್ಘಾಟನೆಗೂ ಮುನ್ನ ರಾಷ್ಟ್ರ ಧ್ವಜಾರೋಹಣವನ್ನು ಪತ್ರೆಪ್ಪ ನೀಲನ್ನವರ, ಪರಿಷತ್ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ನಾಡ ಧ್ವಜಾರೋಹಣವನ್ನು ತಾಲೂಕಾ ಕಸಾಪ ಅಧ್ಯಕ್ಷೆ ಭಾರತಿ ಮದಭಾವಿ ಅವರು ನೆರವೇರಿಸಿದರು.
ಸಮ್ಮೇಳನದ ಸಾನಿಧ್ಯವಹಿಸಿ ಮಾತನಾಡಿದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಕನ್ನಡ ನಾಡು ನುಡಿ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಆನಾದಿಕಾಲದಿಂದಲೂ ಸಹ ಹಲವಾರು ಮಹಾತ್ಮರು ಕಾರ್ಯ ಮಾಡಿದ್ದಾರೆ‌. ಕನ್ನಡ ಸಾಹಿತ್ಯಕ್ಕೆ ಬಸವಣ್ಣವರ ಕೊಡುಗೆ ಅಪಾರವಾಗಿದ್ದು, ಅವರ ವಚನಗಳು ಕನ್ನಡ ಬೆಳೆಯಲಿಕ್ಕೆ ಸಹಕಾರಿಯಾಗಿವೆ. ರಾಜ್ಯಾದ್ಯಂತ ತಾಲೂಕು ಸಮ್ಮೇಳನ, ಜಿಲ್ಲಾ ಸಮ್ಮೇಳನ, ರಾಜ್ಯ ಸಮ್ಮೇಳನ ,ವಿಶ್ವ ಸಮ್ಮೇಳನ ನಡೆದು ಕನ್ನಡವನ್ನು ಕಟ್ಟುವ ಕಾರ್ಯವನ್ನು ಮಾಡುತ್ತಿವೆ. ಕನ್ನಡದ ಪರಂಪರೆಯನ್ನು ಯಾವ ರಾಜ್ಯದಲ್ಲಿ ಕಾಣಲು ಸಾಧ್ಯವಿಲ್ಲ. ನಾವೆಲ್ಲರೂ ಕನ್ನಡ ಪ್ರೇಮವನ್ನು ಮೆರೆಯಬೇಕು. ಗೋಕಾಕ ನಾಡುನ್ನು ರಟ್ಟರು ಸೇರಿದಂತೆ  ಬಹಳ ದೊಡ್ಡ ರಾಜರನ್ನು ಕೋಟ್ಟಿದೆ ಅವರು ಸಹ ತಮ್ಮ ಆಸ್ಥಾನದಲ್ಲಿ ಕನ್ನಡ  ನಾಡು , ನುಡಿ ಕನ್ನಡ ತಾಯಿ ಸೇವೆಯನ್ನು ಮಾಡಿದ್ದಾರೆ ಅವರಂತೆ ಪ್ರಸ್ತುತ ಜಾರಕಿಹೊಳಿ ಸಹೋದರರು  ಕೂಡಾ ಕನ್ನಡದ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು .
ನಿಕಟಪೂರ್ವ ಸರ್ವಾಧ್ಯಕ್ಷ ಡಾ.ಸಿ.ಕೆ. ನಾವಲಗಿ ಅವರು 6ನೇ ಸಮ್ಮೇಳನಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ ಅವರಿಗೆ ಧ್ವಜ ಹಸ್ತಾಂತರಿಸಿದರು.ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆಯಲ್ಲಿ ಗೋಕಾಕ ತಾಲೂಕು ಕಸಾಪ ಅಧ್ಯಕ್ಷೆ ಭಾರತಿ ಮದಭಾವಿ, ನಿಕಟಪೂರ್ವ ಕಸಾಪ ಅಧ್ಯಕ್ಷ ಮಹಾಂತೇಶ ತಾಂವಶಿ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಬೆಟಗೇರಿ ಗ್ರಾಪಂ ಅಧ್ಯಕ್ಷೆ ಸಾಂವಕ್ಕಾ ಬಾನಸಿ, ಉಪಾಧ್ಯಕ್ಷ ಶಿವನಪ್ಪ ಮಾಳೇದ, ಮಾಜಿ ಗ್ರಾಪಂ ಅಧ್ಯಕ್ಷರಾದ ಬಸವಂತ ಕೋಣಿ, ಪರಮಾನಂದ ಕೋಣಿ, ಲಕ್ಷ್ಮಣ ಚಂದರಗಿ, ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಶ್ಯಾಮಾನಂದ ಪೂಜೇರಿ, ಪ.ಪೂ. ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಈರಪ್ಪ ದೇಯನ್ನವರ, ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲನ್ನವರ, ನ್ಯಾಯವಾದಿ ಎಂ.ಐ. ನೀಲನ್ನವರ, ಈರಯ್ಯ ಹಿರೇಮಠ, ಎಸ್‍ಡಿಎಂಸಿ ಅಧ್ಯಕ್ಷ ಕುತುಬುದ್ದಿನ ಮಿರ್ಜಾನಾಯ್ಕ, ಸಾಹಿತಿಗಳಾದ ಪ್ರೋ. ಚಂದ್ರಶೇಖರ ಅಕ್ಕಿ, ಮಹಾಲಿಂಗ ಮಂಗಿ, ತಾಪಂ ಇಓ ಮುರಳೀಧರ ದೇಶಪಾಂಡೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿ, ಜಿ.ಬಿ. ಬಳಗಾರ, ಕನ್ನಡ ಪರ ಸಂಘಟನೆಗಳ ಮುಖಂಡರು, ವಿವಿಧ ತಾಲೂಕು ಘಟಕಗಳ ಕಸಾಪ ಅಧ್ಯಕ್ಷರುಗಳು, ಗೋಕಾಕ ಕಸಾಪದ ಸುರೇಶ ಮುದ್ದಾರ, ಡಾ.ಮಹಾನಂದಾ ಪಾಟೀಲ, ಆರ್.ಎಲ್. ಮಿರ್ಜಿ, ಶಕುಂತಲಾ ಹಿರೇಮಠ, ರಾಜಶ್ರೀ ತೋಟಗಿ, ಎ.ಬಿ. ಚೌಗಲಾ, ಬಸವರಾಜ ಮುರಗೋಡ, ಶೈಲಾ ಕೊಕ್ಕರಿ, ಲಕ್ಷ್ಮಣ ಸೊಂಟಕ್ಕಿ, ರಾಜೇಶ್ವರಿ ಕಳಸದ, ಜಿ.ಆರ್. ಸನದಿ, ಅಡಿವೆಪ್ಪ ಭಜಂತ್ರಿ, ಬೆಟಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು, ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹಾಗೂ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಅವರು ಮಾತನಾಡಿದರು

Related posts: