ಗೋಕಾಕ:ಸಚಿವರ ಹೇಳಿಕೆಯನ್ನು ನೋಡಿ ಕನಿಕರ ಬರುತ್ತಿದೆ : ಅಶೋಕ ಪೂಜಾರಿ ತಿರುಗೇಟು
ಸಚಿವರ ಹೇಳಿಕೆಯನ್ನು ನೋಡಿ ಕನಿಕರ ಬರುತ್ತಿದೆ : ಅಶೋಕ ಪೂಜಾರಿ ತಿರುಗೇಟು
ಗೋಕಾಕ ಅ 11: ತಮಗೆ ಅರಿವಿಲ್ಲದಂತೆಯೇ ಗೋಕಾಕ ವಿಧಾನಸಭಾ ಕ್ಷೇತ್ರದ ಗೋಕಾಕ-ಫಾಲ್ಸ್ ಸಹಿತ 20 ಗ್ರಾಮಗಳನ್ನು ನಿಯೋಜಿತ ಮೂಡಲಗಿ ತಾಲೂಕಿಗೆ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಸೇರ್ಪಡೆ ಮಾಡಿಸಲು ಪ್ರಯತ್ನಿಸಿದ್ದರು ಎಂದು ಘಟಪ್ರಭಾದಲ್ಲಿ ಹೇಳಿಕೆ ನೀಡಿರುವ ಸಚಿವ ರಮೇಶ ಜಾರಕಿಹೊಳಿ ಯವರ ಹತಾಶ ಮನೋಭಾವನೆಯ ಹೇಳಿಕೆಯನ್ನು ನೋಡಿ ಕನಿಕರ ಬರುತ್ತಿದೆ ಎಂದು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೂಡಲಗಿ ತಾಲೂಕ ರಚನೆಯ ಆ ಭಾಗದ ಜನರ ಹೋರಾಟ ಕಳೆದ ಸುಮಾರು 30 ವರ್ಷಗಳಿಂದ ನಡೆದಿದೆ. ಸರಕಾರದಿಂದ ನೇಮಕಗೊಂಡ ಎಲ್ಲ ಆಯೋಗಗಳು ಮೂಡಲಗಿ ತಾಲೂಕ ರಚನೆಯ ಪ್ರಸ್ತಾವನೆಯನ್ನು ಶಿಪಾರಸ್ಸು ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಕುರಿತು ಅಂತಿವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ನೇಮಿಸಿದ್ದ ಸರಕಾರದ ಹಿರಿಯ ಆಯ್.ಎ.ಎಸ್. ಅಧಿಕಾರಿ ಎಮ್.ಬಿ. ಪ್ರಕಾಶ ಅವರು ತಮ್ಮ ವರದಿಯಲ್ಲಿ ಮೂಡಲಗಿ ತಾಲೂಕ ರಚನೆಗೆ ಶಿಪಾರಸ್ಸು ಮಾಡಿದ್ದಾರೆ.
ವರದಿಯ ಆಧಾರದ ಮೇಲೆಯೇ ಸನ್ಮಾನ್ಯ ಜಗದೀಶ ಶಟ್ಟರ ರವರು ಮುಖ್ಯಮಂತ್ರಿಗಳಾಗಿದ್ದಾಗ 4 ವರ್ಷಗಳ ಹಿಂದೆಯೇ ಮೂಡಲಗಿ ತಾಲೂಕ ರಚನೆಯ ಸರಕಾರದ ಆದೇಶ ಉಳಿದ 42 ತಾಲೂಕುಗಳ ಜೊತೆಯೇ ಆಗಿದೆ.
ಈ ಸಂದರ್ಭದಲ್ಲಿ ಎಮ್.ಬಿ. ಪ್ರಕಾಶ ರವರು ಶಿಪಾರಸ್ಸು ಮಾಡಿದ ಮೂಡಲಗಿ ತಾಲೂಕ ರಚನೆಯ ಪ್ರಸ್ತಾವನೆಯ ಗ್ರಾಮಗಳ ಯಾದಿ ಮತ್ತು ನಕ್ಷೆಯಲ್ಲಿ ಎಲ್ಲಿಯೂ ಸಹ ಗೋಕಾಕ ವಿಧಾನಸಭಾ ಕ್ಷೇತ್ರದ ಯಾವ ಗ್ರಾಮಗಳೂ ಸೇರ್ಪಡೆಯಾಗಿಲ್ಲ ಎಂಬುದು ದಾಖಲಾತಿಗಳಲ್ಲಿಯೇ ಸ್ಪಷ್ಟವಾಗಿದೆ. ಹಿಗಿರುವಾಗ ಗೋಕಾಕ ವಿಧಾನಸಭಾ ಕ್ಷೇತ್ರದ 20 ಗ್ರಾಮಗಳು ನಿಯೋಜಿತ ಮೂಡಲಗಿ ತಾಲೂಕಿನಲ್ಲಿ ಸೇರ್ಪಡೆಯಾಗಿದ್ದವು ಎಂದು ಹೇಳಿರುವ ಸಚಿವ ರಮೇಶ ಜಾರಕಿಹೊಳಿ ಯವರ ಹೇಳಿಕೆಯೇ ತಾಲೂಕಿನ ಜನತೆಯಲ್ಲಿ ಇಲ್ಲದ ಗೊಂದಲವನ್ನು ಸೃಷ್ಠಿಸುವ ಉದ್ದೇಶ ಹೊಂದಿದೆ ಎಂದು ಸ್ಪಷ್ಠವಾಗಿ ಮೂಡಲಗಿ ತಾಲೂಕಿನ ರಚನೆಯ ವಿಷಯದಲ್ಲಿ ಅವರ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತೆ ಮಾಡಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಗೋಕಾಕ ತಾಲೂಕಿನ ಎರಡೂ ವಿಧಾನಸಭಾ ಕ್ಷೇತ್ರಗಳಿಂದ 15-20 ವರ್ಷಗಳಿಂದ ರಮೇಶ ಜಾರಕಿಹೊಳಿ ಮತ್ತು ಅವರ ಸಹೋದರರೇ ಶಾಸಕರಾಗಿದ್ದಾರೆ. ಈ ಅವಧಿಯಲ್ಲಿ ಸಚಿವರಾಗಿಯೂ ಸಹ ಅವರೇ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೂಡಲಗಿ ತಾಲೂಕ ರಚನೆಯಂತಹ ಮಹತ್ವದ ವಿಷಯದ ಸಂಪೂರ್ಣ ವಿವರಣೆ ಇವರಿಗಿಲ್ಲವೇ? ಒಂದು ವೇಳೆ ಈ ಕುರಿತು ಅವರಿಗೆ ಸ್ಪಷ್ಟ ಕಲ್ಪನೆ ಮತ್ತು ವಿವರಣೆ ಅವರಿಗೆ ಇಲ್ಲದಿದ್ದರೆ ಅದು ಅವರ ಈ ತಾಲೂಕಿನ ಆಗುಹೋಗುಗಳ ಬಗ್ಗೆ ಇರುವ ಉದಾಸೀನ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ. ಒಂದು ವೇಳೆ ಅವರಿಗೆ ಈ ಬಗ್ಗೆ ಮೊದಲೇ ಈ ಬಗ್ಗೆ ಸ್ಪಷ್ಟತೆ ಇದ್ದರೆ ಇದನ್ನು ಆಗಲೇ ಸರಿಪಡಿಸಬಹುದಿತ್ತು ಎಂದು ಹೇಳಿದರು.
ಸಚಿವ ರಮೇಶ ಜಾರಕಿಹೊಳಿ ಯವರು ಹೇಳಿದಂತೆ ಗೋಕಾಕ ವಿಧಾನಸಭಾ ಕ್ಷೇತ್ರದ 20 ಗ್ರಾಮಗಳನ್ನು ನಿಯೋಜಿತ ಮೂಡಲಗಿ ತಾಲೂಕಿಗೆ ರಾಜಕೀಯ ಉದ್ದೇಶದಿಂದ ಸೇರ್ಪಡೆ ಮಾಡುವಂತಹ ರಾಜಕೀಯ ಮತ್ತು ಆಢಳಿತಾತ್ಮಕ ಶಕ್ತಿ ತಮಗಿದ್ದರೆ ತಾವು ಎಂದೊ ಪ್ರಯತ್ನಿಸಿ ಮೂಡಲಗಿ, ಕೌಜಲಗಿ ಮತ್ತು ಯರಗಟ್ಟಿ ತಾಲೂಕುಗಳು ರಚನೆಯಾಗಿ ಅವುಗಳನ್ನು ಒಳಗೊಂಡ ಗೋಕಾಕ ಜಿಲ್ಲೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆ ಎಂದು ವಿಚಾರ ವ್ಯಕ್ತ ಪಡಿಸಿದ್ದಾರೆ.
ಸಚಿವ ರಮೇಶ ಜಾರಕಿಹೊಳಿ ಯವರು ಗೋಕಾಕ ವಿಧಾನಸಬಾ ಕ್ಷೇತ್ರದ 20 ಗ್ರಾಮಗಳು ನಿಯೋಜಿತ ಮೂಡಲಗಿ ತಾಲೂಕಿಗೆ ಸೇರ್ಪಡೆಯಾಗುತ್ತಿದ್ದವು ಎಂಬ ಹಸಿ ಸುಳ್ಳನ್ನೇ ನೂರು ಸಲ ಹೇಳಿ ಸತ್ಯವೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇಂತಹ ಗೊಂದಲಗಳಿಗೆ ಬಲಿ ಬೀಳದಷ್ಟು ಗೋಕಾಕ ತಾಲೂಕಿನ ಜನ ಪ್ರಜ್ಞಾವಂತರಿದ್ದಾರೆ ಎಂದು ಹೇಳಿದ ಅವರು ಸಚಿವ ರಮೇಶ ಜಾರಕಿಹೊಳಿ ಯವರು ತಮ್ಮ ಬಗ್ಗೆ ನೀಡಿರುವ ಹೇಳಿಕೆ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ದವೆಂದು ತಿಳಿಸಿದ್ದಾರೆ.