ಮೂಡಲಗಿ:ಅಯ್ಯಪ್ಪಸ್ವಾಮಿಗಳ ವೃತ ಇತರರಿಗೂ ಮಾದರಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಅಯ್ಯಪ್ಪಸ್ವಾಮಿಗಳ ವೃತ ಇತರರಿಗೂ ಮಾದರಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ ಡಿ 24 : ಭಾರತೀಯರ ದೈವಭಕ್ತಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ದೇವರ ಅನುಗ್ರಹದಿಂದ ದೇಶದಲ್ಲಿರುವ 130 ಕೋಟಿ ಜನರು ವಿವಿಧತೆಯಲ್ಲಿ ಏಕತೆಯಿಂದ ಬದುಕುತ್ತಿರುವುದು ಸೌಹಾರ್ದತೆಯ ಸಂಕೇತವಾಗಿದೆ. ಅದರಲ್ಲೂ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕೈಗೊಳ್ಳುತ್ತಿರುವ ವೃತ ಇತರರಿಗೂ ಮಾದರಿಯಾಗಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಪಟ್ಟಣದ ವೆಂಕಟೇಶ್ವರ ನಗರದ ಅಯ್ಯಪ್ಪಸ್ವಾಮಿ ಸೇವಾ ವೃಂದದಿಂದ ಇತ್ತೀಚೆಗೆ ಜರುಗಿದ 18ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಅಯ್ಯಪ್ಪಸ್ವಾಮಿಗಳ ವೃತ ತುಂಬ ಕಠಿಣದಿಂದ ಕೂಡಿದೆ. ಇಂತಹ ಕಠಿಣವಾದ ವೃತ ಕೈಗೊಳ್ಳುತ್ತಿರುವುದು ಅಯ್ಯಪ್ಪಸ್ವಾಮಿಗಳ ಮೇಲಿನ ಭಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
41 ದಿನಗಳ ಕಾಲ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಠಿಣ ವೃತವನ್ನು ಮಾಲಾಧಾರಿಗಳು ಪಾಲಿಸುತ್ತಾರೆ. ಬಡವರಿಗೆ ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಬೆಳಿಗ್ಗೆ ಎದ್ದು ತಣ್ಣಿರಲ್ಲಿ ಸ್ನಾನ ಮಾಡಿ ವೃತ ಮುಗಿಯುವತನಕ ಚಪ್ಪಲಿಯನ್ನು ಧರಿಸದೇ, ತಮ್ಮ ಐಶಾರಾಮಿ ಜೀವನ ಶೈಲಿಯನ್ನು ತ್ಯಜಿಸಿ ದುಶ್ಚಟದಿಂದ ದೂರಾಗಿ ಅಯ್ಯಪ್ಪಸ್ವಾಮಿಯ ಸೇವೆ ಮಾಡುತ್ತಿರುವುದು ಇಂದಿನ ದಿನಮಾನಗಳಲ್ಲಿ ಶ್ರೇಷ್ಠವಾಗಿದೆ. ಭಕ್ತರು ತಮ್ಮ ಕಷ್ಠಗಳನ್ನು ದೂರು ಮಾಡುವಂತೆ ಅಯ್ಯಪ್ಪಸ್ವಾಮಿಯ ಬಳಿ ಬೇಡಿಕೆಯನ್ನಿಟ್ಟು ಮಾಲಾಧಾರಿಗಳು ಮಾಲೆ ಧರಿಸುತ್ತಾರೆ. ಜೊತೆಗೆ ಕಠಿಣ ವೃತ ಪಾಲಿಸುತ್ತಾರೆ. ಕೊರೆಯುವ ಚಳಿಯಲ್ಲಿಯೂ ಸ್ವಾಮಿಯ ಸೇವೆ ಮಾಡುತ್ತಿರುವ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಎಲ್ಲರಿಗಿಂತ ಶ್ರೇಷ್ಠರು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ದತ್ತಾತ್ರೇಯ ಮಹಾಸ್ವಾಮಿಗಳು, ಬಸವಾನಂದ ಗುರುಸ್ವಾಮಿಗಳು, ರಾಮು ಮೂಡಲಗಿ, ಗುಂಡು ಹರೇಕೃಷ್ಣ, ಸುಭಾಸ ಗುರುಸ್ವಾಮಿಗಳು, ರವಿ ನೇಸೂರ ಗುರುಸ್ವಾಮಿಗಳು, ದಾದು ಗುರುಸ್ವಾಮಿಗಳು, ಲಕ್ಷ್ಮಣ ಝಂಡೇಕುರುಬರ, ಬಸು ಝಂಡೇಕುರುಬರ, ರಾಜು ಝಂಡೇಕುರುಬರ, ಬಾಳಪ್ಪ ಝಂಡೇಕುರುಬರ, ಲಕ್ಷ್ಮಣ ಹಳಬ, ಝಂಡೇಕುರುಬರ ಸಮಾಜ ಪ್ರಮುಖರು, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಮುಖಂಡ ಸಂತೋಷ ಸೋನವಾಲಕರ, ಪ್ರಶಾಂತ ನಿಡಗುಂದಿ, ಅನ್ವರ ನದಾಫ, ಸಿದ್ದು ಗಡ್ಡೇಕರ, ಪುರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅಯ್ಯಪ್ಪಸ್ವಾಮಿ ಸಮೀತಿಯಿಂದ ಸನ್ಮಾನಿಸಲಾಯಿತು.