RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕೌಜಲಗಿ ತಾಲೂಕು ರಚಿಸಲು ಉಪತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಗೋಕಾಕ:ಕೌಜಲಗಿ ತಾಲೂಕು ರಚಿಸಲು ಉಪತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ 

ಕೌಜಲಗಿ ತಾಲೂಕು ರಚಿಸಲು ಉಪತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಕೌಜಲಗಿ ಡಿ 30 : ಕೌಜಲಗಿ ತಾಲೂಕು ಕೇಂದ್ರ ರಚನೆಗಾಗಿ 50 ವರ್ಷಗಳಿಂದ ಹೋರಾಡುತ್ತಿದ್ದೇವೆ. ಕೌಜಲಗಿಯು ಗೋಕಾಕ ತಾಲೂಕಿನ ಅತಿ ದೊಡ್ಡ ಪಟ್ಟಣವಾಗಿದ್ದು, ಹೋಬಳಿ ಕೇಂದ್ರವಾಗಿದೆ. ಕೌಜಲಗಿಯನ್ನು ಶೀಘ್ರದಲ್ಲಿ ನೂತನ ತಾಲೂಕಾಗಿ ಘೋಷಿಸಬೇಕೆಂದು ಪಟ್ಟಣದಲ್ಲಿ ಶುಕ್ರವಾರದಂದು ಕೌಜಲಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು  ಕನ್ನಡ ಕೌಸ್ತುಭ ಸಂಘಟನೆಯ ನೇತೃತ್ವದಲ್ಲಿ ನಾಡಕಚೇರಿಯ ಉಪತಹಸಿಲ್ದಾರರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೌಸ್ತುಭ ಸಂಘಟನೆಯ ಅಧ್ಯಕ್ಷ ರಾಜು ಕಂಬಾರ ಅವರು ಮಾತನಾಡಿ,ಅವಿಭಜಿತ ಗೋಕಾಕ ತಾಲೂಕಿನ ಕೌಜಲಗಿ ಹೋಬಳಿಯ 41, ನೆರೆಯ ರಾಮದುರ್ಗ ತಾಲೂಕಿನ 10 ಹಾಗೂ ಯರಗಟ್ಟಿ ತಾಲೂಕಿನ 5  ಗ್ರಾಮಗಳ ಮಧ್ಯವರ್ತಿ ಕೇಂದ್ರವಾದ ಕೌಜಲಗಿ ಪಟ್ಟಣವನ್ನು  ತಾಲೂಕು ಕೇಂದ್ರವಾಗಬೇಕು.
ಕೌಜಲಗಿ ತಾಲೂಕಾಗಿ ರಚಿಸಬೇಕೆಂದು ತಾಲೂಕು ಪುನರ್ ವಿಂಗಡಣೆ ಆಯೋಗಗಳಿಗೆ ಅಂದಿನ  ಕೌಜಲಗಿ ತಾಲೂಕು ಹೋರಾಟಗಾರರ ಮುಖಂಡರಾಗಿದ್ದ ಆರ್.ಎಂ. ವಿರಕ್ತಮಠ ನೇತ್ರತ್ವದಲ್ಲಿ ತಾಲೂಕು ಪುನವಿರ್ಂಗಡಣಾ  ಆಯೋಗದ ಅಧ್ಯಕ್ಷರಾಗಿದ್ದ  ಎಂ.ವಾಸುದೇವರಾವ್ ಅವರಿಗೆ 1973ರಲ್ಲಿ ಮನವಿ ಸಲ್ಲಿಸಲಾಗಿತ್ತು. 1986ರಲ್ಲಿ ಟಿ.ಎಂ. ಹುಂಡೇಕಾರ, ಪಿ.ಸಿ.ಗದ್ದಿಗೌಡರ್ ಅನಂತರದ ಎಲ್ಲಾ ತಾಲೂಕು ಪುನವಿರ್ಂಗಡಣಾ ಆಯೋಗಗಳಿಗೆ ಕೌಜಲಗಿ ತಾಲೂಕು ಕೇಂದ್ರವಾಗಿಸಬೇಕೆಂದು ಮನವಿ ಸಲ್ಲಿಸಲಾಗಿದೆ.  ಆದರೆ ಇದುವರೆಗೂ ಯಾವ ಸರ್ಕಾರಗಳು ಕೌಜಲಗಿಯನ್ನು ತಾಲೂಕಾಗಿಸದೆ ಅರಭಾವಿ ವಿಧಾನಸಭಾ ಕ್ಷೇತ್ರದ ಪೂರ್ವ ಭಾಗದ ಜನತೆಗೆ ಅನ್ಯಾಯವೆಸುಗುತ್ತಾ ಬಂದಿವೆ. ಕೌಜಲಗಿಯಲ್ಲಿ ಕರ್ನಾಟಕ ನೀರಾವರಿ ಇಲಾಖೆಯ ಜಿ.ಆರ್.ಬಿ.ಸಿ. ವಿಭಾಗಿಯ ಕಚೇರಿ, ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಕರ್ನಾಟಕ ಪಬ್ಲಿಕ್ ಸ್ಕೂಲ್, ಪಿಯು ಕಾಲೇಜು, ಖಾಸಗಿ, ಅನುದಾನಿತ ಪ್ರಾಥಮಿಕ-ಪ್ರೌಢಶಾಲೆಗಳು, ಬ್ಯಾಂಕ್-ಸೊಸೈಟಿಗಳು ಎಲ್ಲ ಕಚೇರಿಗಳಿದ್ದು, ತಾಲೂಕಾಗಲು ಎಲ್ಲಾ ಅರ್ಹತೆಗಳನ್ನು ಕೌಜಲಗಿ ಪಟ್ಟಣ ಹೊಂದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು, ನಿಪ್ಪಾಣಿ, ಕಾಗವಾಡ ತಾಲೂಕು ಹೋರಾಟಗಳ ಜೊತೆ  ಕೌಜಲಗಿ ತಾಲೂಕು ಹೋರಾಟವು ಆರಂಭಗೊಂಡು ಅರ್ಧ ಶತಮಾನ ಕಳೆದರೂ ಇದುವರೆಗೂ ಕೌಜಲಗಿ ತಾಲೂಕಾಗಿ ರಚನೆಯಾಗಿದೆ ಉಳಿದುಕೊಂಡದ್ದು ದುರ್ದೈವದ ಸಂಗತಿಯಾಗಿದೆ. ಸರ್ಕಾರ  ತುರ್ತಾಗಿ ಹೋಬಳಿ ಕೇಂದ್ರವಾದ ಕೌಜಲಗಿಯನ್ನು ನೂತನ ತಾಲೂಕಾಗಿ ರಚಿಸದೆ ಹೋದರೆ, ಮುಂದಿನ ಕೆಲ ದಿನಗಳಲ್ಲಿ ಈ ಭಾಗದಲ್ಲಿ ಉಗ್ರ ಹೋರಾಟ ಆರಂಭವಾಗುತ್ತದೆ ಎಂದು ಎಚ್ಚರಿಸಿದ ರಾಜು ಕಂಬಾರ ಅವರು, ಜನವರಿಯಲ್ಲಿ ಕೌಜಲಗಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಸಹಕಾರ ಪಡೆದುಕೊಂಡು ಕೌಜಲಗಿಯಲ್ಲಿ  ಧರಣಿ ನಡೆಸಲಾಗುವುದೆಂದು ಹೇಳಿದರು.
ಸಾಹಿತಿ ಪ್ರಕಾಶ್ ಕೋಟಿನತೋಟ ಮಾತನಾಡಿ, ಕೌಜಲಗಿ ತಾಲೂಕು ರಚನೆಯಲ್ಲಿ ರಾಜಕೀಯ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಈ ಭಾಗದ ಜನ ಪ್ರತಿನಿಧಿಗಳು ಬಹು ವರ್ಷಗಳ ಹೋರಾಟವಾಗಿದ್ದ ಕೌಜಲಗಿಯನ್ನು ತಾಲೂಕಾಗಿಸಲು ಪ್ರಯತ್ನಿಸಬೇಕೆಂದು ಹೇಳಿದರು.
ಮನವಿ ಸ್ವೀಕರಿಸಿದ ಕೌಜಲಗಿ ಉಪತಹಸಿಲ್ದಾರ ಎಸ್.ಬಿ. ಕಟ್ಟಿಮನಿಯವರು, ಬಹು ವರ್ಷಗಳ ಬೇಡಿಕೆಯಾದ ಕೌಜಲಗಿ ತಾಲೂಕು ರಚನೆಯ ಕುರಿತು ಇಂದು ಸಲ್ಲಿಸಿದ ತಮ್ಮ ಮನವಿಯನ್ನು ಗೋಕಾಕ ತಹಶೀಲ್ದಾರ, ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕಳಿಸಲಾಗುತ್ತದೆ ಎಂದರು.
ಈ  ಸಂದರ್ಭದಲ್ಲಿ ಮುಖಂಡರಾದ ಎಂ.ಡಿ. ಖಾಜಿ, ಶಂಕರ್ ಜೊತೆನ್ನವರ, ಬಸವರಾಜ ಜೋಗಿ, ಅಶೋಕ್ ಪಾಟೀಲ, ಅಶೋಕ್ ಶಿವಾಪುರ, ಭೀಮಶಿ  ಉದ್ದಪ್ಪನವರ, ಕೃಷ್ಣ ದೇಸಾಯಿ, ಲೋಹಿತ ಯಲಿಗಾರ, ನೀಲಕಂಠ ಶಿವನಮಾರಿ, ನಾಗರಾಜ ಕತ್ತಿ, ಜಗದೀಶ್ ಶಿವಾಪುರ, ಲೋಕನಗೌಡ ಪಾಟೀಲ, ವಸಂತ ದೇಸಾಯಿ, ಬಸು ಯಂಕನೆಪ್ಪಗೋಳ,  ಚಿದಾನಂದ ವಿರಕ್ತಮಠ, ಪಟ್ಟಣದ ಹಾಗು ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು, ರೈತರು ಹಾಗೂ ಕನ್ನಡ ಕೌಸ್ತುಭದ ಪದಾಧಿಕಾರಿಗಳು ಸರ್ವ ಸದಸ್ಯರು ಹಾಜರಿದ್ದರು.

Related posts: