RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪ್ರವಚಗಳ ದಿವ್ಯ ಚೇತನ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇನ್ನು ನೆನಪು ಮಾತ್ರ.

ಗೋಕಾಕ:ಪ್ರವಚಗಳ ದಿವ್ಯ ಚೇತನ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇನ್ನು ನೆನಪು ಮಾತ್ರ. 

ಪ್ರವಚಗಳ ದಿವ್ಯ ಚೇತನ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇನ್ನು ನೆನಪು ಮಾತ್ರ.

ಸಾದಿಕ ಎಂ ಹಲ್ಯಾಳ .

“ಕುದಿಯುವವರು ಕುದಿಯಲಿ,ಉರಿಯುವವರು ಉರಿಯಲಿ, ನಿನ್ನ  ಪಾಡಿಗೆ ನಿನೀರು…
ಕುದಿಯುವವರು ಆವಿಯಾಗುತ್ತಾರೆ.ಉರಿಯುವವರು ಬೂದಿಯಗುತ್ತಾರೆ “. ಎಂಬ ನಾಲ್ಕು ಮಾತುಗಳಿಂದ ಇಡೀ ನಾಡಿಗೆ ಬದುಕಲು ಕಲಿಸಿದ್ದ ಸಂತ ಇನ್ನು ನೆನಪು ಮಾತ್ರ.
ಜಗತ್ತು ಮುನ್ನಡೆಯಬೇಕಾದರೆ ಇಂತಹ ಮಹಾತ್ಮರ ಸತ್ಕಾರ್ಯಗಳಿಂದ ಎಂಬ ಸತ್ಯ ಅರಿತು ಸಾಗುತ್ತಿರುವ ಮನುಕುಲವನ್ನು ತಿದ್ದಲು ದೇವರು ಇಂತಹ ಮಹಾತ್ಮರನ್ನು ಭೂಮಿಗೆ ತರುತ್ತಾನೆ. ಅವರು ಇದಷ್ಟು ದಿನ ಅವರಿಂದ ಮನುಕುಲವನ್ನು ತಿದ್ದಿ , ತಿಡಿ ಅವರನ್ನು ಸನ್ಮಾರ್ಗದಲ್ಲಿ ನಡೆಸುವ ಪವಿತ್ರ ಕಾರ್ಯವನ್ನು ಅವರ ಹೆಗಲಿಗೆ ಹಾಕುತ್ತಾನೆ. ಆ ಭಾರವನ್ನು ಹೊತ್ತಿದ್ದ  ಶ್ರೀ ಸಿದ್ದೇಶ್ವರ ಸ್ವಾಮಿಗಳು ಬಾಳಿ,ಬದುಕಿ ತಮ್ಮ ಜೀವತಾವಧಿಯಲ್ಲಿ  ಒಂದಿಷ್ಟು ಆಚೆ ಇಚೆ ಮಾಡದೆ ತಾವು ಈ ಭೂಮಿ ಮೇಲೆ ಏಕೆ ಬಂದಿದ್ದೇವೆ ನಮ್ಮ ಕಾರ್ಯವೇನು ? ಎಂದು ತಿಳಿದುಕೊಂಡು ಇಡೀ ಮನುಕುಲಕ್ಕೆ ತಮ್ಮ ಪ್ರವಚನದ ಮೂಲಕ ಸನ್ಮಾರ್ಗವನ್ನು ತೋರಿದ ಪ್ರವಚಗಳ ದಿವ್ಯ ಚೇತನ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇಂದು ದೇವಲೋಕಕ್ಕೆ ತೆರಳಿರುವುದು ಕಂಡು ಮನಸ್ಸು ಭಾರವಾಗಿದೆ. ಮುಂದೆ ಮತ್ತೆ ಇಂತಹ ಮಹಾನ ಸಂತರನ್ನು ದೇವರು ಮತ್ಯಾವ ರೂಪದಲ್ಲಿ ಕಳುಹಿಸುತ್ತಾನೆ ಎಂಬ ಎದುರು ನೋಟ.
” ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ  ಸ್ಪಟಿಕದ ಶಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನೆಬೇಕು.
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ”.
ಎಂಬ ಬಸವಣ್ಣನವರ ವಚನ ಶ್ರೀ ಸಿದ್ದೇಶ್ವರ ಸ್ವಾಮಿಗಳ ವ್ಯಕ್ತಿತ್ವಕ್ಕೆ ಹೇಳಿ ಬರೆಯಿಸಿದಂತಹದೂ ಎಂದರೆ ತಪ್ಪಾಗಲಿಕ್ಕಿಲ್ಲ. ಶ್ರೀಗಳು ನುಡಿದಂತೆ ನಡೆದು, ನಡೆದಂತೆ ನುಡಿದು ಇಡೀ ಮನುಕುಲ ಹಾಗೆಯೇ ಬದುಕಬೇಕು ಎಂದು ಬಯಸಿ, ಮನುಕುಲವನ್ನು ತಮ್ಮ ಪ್ರವಚಗಳ ಮೂಲಕ ಪೋನಿಸಿ ಸತ್ಕಾರ್ಯಗಳನ್ನು ಮಾಡಲು ಪ್ರೇರಣಾಶಕತ್ತಿಯಾಗಿದ್ದರು. ಇಂತಹ  ಸತ್ಪುರುಷ ತಮ್ಮ ಜೀವನದ ಒಂದು ಸೆಕೆಂಡ್ ವೇಳೆ ಕೂಡಾ ವ್ಯಯಮಾಡದೆ ಮನುಕುಲವನ್ನು ಬಡಿದೆಬ್ಬಿಸುತ್ತಿದ್ದ ಪರಿ ನೋಡಲು ಎರೆಡು ಕಣ್ಣುಗಳು ಸಾಲದು.
ಸಿದ್ದೇಶ್ವರ ಶ್ರೀಗಳು ಗೋಕಾಕ ಮತ್ತು ಕಲ್ಲೋಳಿ ಗ್ರಾಮಕ್ಕೆ ಪ್ರವಚನ ಹೇಳಲು ಬಂದಾಗ ಅವರ ಪ್ರವಚನ ಕೇಳಿ ಅವರನ್ನು ಹತ್ತಿರದಿಂದ ಕಂಡು ಸಂತೋಷ ಪಟ್ಟಿದೆ.  ಅವರ ನೂರಾರು ಪ್ರವಚನಗಳನ್ನು ಯೂಟ್ಯೂಬ್ ನಲ್ಲಿ ಕೇಳಿ ಪುಣಿತನಾಗಿದ್ದೇನೆ. ಅಂತಹ ಮಹಾನ ಚೇತನನ್ನು ಕೆಳೆದುಕೊಂಡು ನಾಡು ಬಡವವಾಗಿದೆ.
ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ  ಜಿಲ್ಲೆಯ  ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1940 ಸೆಪ್ಟಂಬರ್ 5 ರಂದು ಜನಿಸಿದರು. ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು. ಗೆಳೆಯರು ಇವರನ್ನು ಪ್ರೀತಿಯಿಂದ ಸಿದ್ದು ಎಂದು ಕರೆಯುತ್ತಿದ್ದರು.   ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದರು. ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಮಹಾಬಲೇಶ್ವರ ಆರ್ ಕ್ಯಾಸನೂರು ಇವರ ಹೊಸ ಜ್ಞಾನ – ತತ್ವಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದರು
ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು.
ವಿಜಯಪುರ  ಜಿಲ್ಲೆಯ ತಿಕೋಟಾ  ತಾಲ್ಲೂಕಿನ  ಬಿಜ್ಜರಗಿ  ಗ್ರಾಮದ ಶಾಲೆಯಲ್ಲಿಯೇ ಏಳನೇ ತರಗತಿವರೆಗೆ ಓದಿದ ನಂತರ  ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಬಂದ ಅವರು ‘ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಅವರು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು.
ನಿಸ್ವಾರ್ಥ ಸೇವೆ, ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು.  ಕರ್ನಾಟಕವಲ್ಲದೆ  ಮಹಾರಾಷ್ಟ್ರದ  ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರು.
ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದವರು. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು.
ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ, ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾದ ಶ್ರೀ ಸಿದ್ದೇಶ್ವರ ಸ್ವಾಮಿಜಿಯು ದೈವಭಕ್ತ ಎಂಬ ನೈಜ ಮತ್ತು ನೇರ ಉದಾಹರಣೆಯಾಗಿದೆ. ಅವರ ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತರುತ್ತವೆ ಮತ್ತು ಅಂತಿಮವಾಗಿ ಶಾಂತಿಯುತ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ. ಮಾನವರು ಜೀವಾಧಾರಕರಾಗಿದ್ದು, ವಯಸ್ಸಿನ ಕೆಳಗೆ ದೈವಿಕರಾಗಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜೀವಂತ ದೇವರಿಗೆ ಹೋಲಿಸಬಹುದಾದ ಮಾನವರಲ್ಲಿ ಒಬ್ಬರು. ಅವರ ಗುಣಗಳನ್ನು ವಿವರಿಸುವಲ್ಲಿ ಪದಗಳು ಕಡಿಮೆಯಾಗಬಹುದು. ಅವರ ಅನಿಸಿಕೆಗಳನ್ನು ಅನಕ್ಷರಸ್ಥರಿಂದಲೂ ಚೆನ್ನಾಗಿ ಅರ್ಥಪೂರ್ಣವಾಗಿ ಅರ್ಥೈಸಿಕೊಳ್ಳಬಹುದು. ಅವರು ಬಹಳ ಅರ್ಥಮಾಡಿಕೊಳ್ಳುವ ಮತ್ತು ಆನಂದಿಸುವ ರೀತಿಯಲ್ಲಿ ಬಹಳ ಕಠಿಣ ವಿಷಯಗಳನ್ನು ಬೋಧಿಸುತ್ತಿದ್ದರು. ಉತ್ತರ ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ಸ್ವಾಮೀಜಿಯವರು ವರ್ಷಾದ್ಯಂತ ಪ್ರಯಾಣಿಸಿರುವ ಸ್ಥಳಗಳಾದ್ಯಂತ ಮತ್ತು ಅವರ ವೀಡಿಯೊಗಳನ್ನು ಆನ್ಲೈನ್ನಲ್ಲಿ ಅವರು ಪ್ರಪಂಚದಾದ್ಯಂತ ಪ್ರಸಿದ್ಧ ವ್ಯಕ್ತಿಯಾಗಿದ್ದರು. ತನ್ನ ಪದಗಳ ಮೂಲಕ ಮತ್ತು ಸಂತೋಷದಿಂದ ಸಾವಿರಾರು ಜನರ ಜೀವನವನ್ನು ಬದಲು ಮಾಡಿದ  ಶ್ರೇಯ ಅವರಿಗೆ ಸಲ್ಲುತ್ತದೆ.
ಅವರ ಉಪನ್ಯಾಸ ಸರಣಿಯ “ಬದುಕುವದು ಹೇಗೆ,” ನಾವು ಹೇಗೆ ಬದುಕಬೇಕು / ದಾರಿ ಮಾಡಿಕೊಳ್ಳಬೇಕು “ಲಕ್ಷಾಂತರ ಭಾರತೀಯರನ್ನು ರೂಪಾಂತರಿಸಿದೆ. ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷದ ಬಗ್ಗೆ ಪ್ರಾಯೋಗಿಕ ಪಾಠಗಳನ್ನು ಜನರು ಮೆಚ್ಚಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಲಮ ಪ್ರಭುನ ವಚನಗಳ ಮೇಲೆ ಅಧಿಕೃತ ಭಾಷಣಕಾರರಾಗಿದ್ಥರು.  ಅವರು ವಚನಗಳ ಬಗ್ಗೆ ಹೊಸ ಬೆಳಕನ್ನು ಎಸೆದಿದ್ದಾರೆ.
ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದು. ಹಾಗಾಗಿ ಪ್ರಶಸ್ತಿಗಳ ಅವಶ್ಯತೆಯು ನನಗಿಲ್ಲ. ಎಲ್ಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ ಎಂದು  ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪದ್ಮಶ್ರೀ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ದರು.  ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಅದನ್ನೂ ಶ್ರೀಗಳು ಸ್ವೀಕರಿಸಿರಲಿಲ್ಲ. ಹೀಗೆ ತಮಗೆ ಸಂದ ಎಷ್ಟೋ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ, “ಅವರು ಆಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಬಗ್ಗೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿತ್ವ ಅವರದು,” ಎಂದು ಸ್ವಾಮೀಜಿಯನ್ನು ಹತ್ತಿರದಿಂದ ಕಂಡಿರುವವರೊಬ್ಬರು ಹೇಳುತ್ತಾರೆ. ಅದಕ್ಕಾಗಿಯೇ ಅವರನ್ನು ಇಡೀ ನಾಡು ಶ್ರೇಷ್ಠ ಸಂತ ನಡೆದಾಡುವ ದೇವರು ಎಂದು ಬಣ್ಣಿಸುತ್ತದೆ. ಅವರ ಅಗಲಿಕೆ ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರಿಗೆ ಈ ಲೇಖನದ ಮೂಲಕ  ನುಡಿ ನಮನ ಸಲ್ಲಿಸುತ್ತಿದ್ದೇನೆ. ಅವರ ಜೀವನ ನಮ್ಮೇಲ್ಲರಿಗೂ ಪ್ರೇರಣಾದಾಯಕವಾಗಿದ್ದು, ಅವರು ಹಾಕಿ ಕೊಟ್ಟ ‌ಸನ್ಮಾರ್ಗದಲ್ಲಿ ನಡೆದು ನಾವೆಲ್ಲರೂ ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳೋಣಾ.

Related posts: