ಗೋಕಾಕ:ಭಾರತ ಜಗತ್ತಿನ ಅತ್ಯಂತ ಬಲಿಷ್ಠ, ಪ್ರಜಾತಂತ್ರ ರಾಷ್ಟ್ರವಾಗಿ ಹೊರ ಹೊಮ್ಮಲು ಸಂವಿಧಾನ ಮಾರ್ಗದರ್ಶಿಯಾಗಿದೆ : ಪ್ರಕಾಶ ಹೊಳೆಪ್ಪಗೋಳ
ಭಾರತ ಜಗತ್ತಿನ ಅತ್ಯಂತ ಬಲಿಷ್ಠ, ಪ್ರಜಾತಂತ್ರ ರಾಷ್ಟ್ರವಾಗಿ ಹೊರ ಹೊಮ್ಮಲು ಸಂವಿಧಾನ ಮಾರ್ಗದರ್ಶಿಯಾಗಿದೆ : ಪ್ರಕಾಶ ಹೊಳೆಪ್ಪಗೋಳ
ಗೋಕಾಕ ಜ 26 : ನಮ್ಮ ದೇಶ ಪ್ರಜಾಪ್ರಭುತ್ವ, ಗಣರಾಜ್ಯವೆಂದು ಘೋಷಣೆಯಾಗಿ ಸಂವಿಧಾನ ಅಸ್ತಿತ್ವಕ್ಕೆ ಬಂದ ಈ ಸುದಿನವನ್ನು 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೆವೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು.
ಅವರು, ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡ 74ನೇ ಗಣರಾಜ್ಯೋತ್ಸವ ಸಮಾರಂಭವನ್ನು ಉದ್ಧೇಶಿಸಿ ಮಾತನಾಡುತ್ತ, ನಮ್ಮ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರಿಗೆ ನಾವೆಲ್ಲರೂ ಗೌರವ ಸಲ್ಲಿಸುವದು ಆದ್ಯಕರ್ತವ್ಯವಾಗಿದೆ. ಸ್ವತಂತ್ರ ನಂತರ ದೇಶದಲ್ಲಿ ಹಲವಾರು ಸಮಸ್ಯೆಗಳು ಉದ್ಭವಗೊಂಡರು ಆ ಸಮಸ್ಯೆಗಳನ್ನು ಸಂವಿಧಾನ ಬದ್ಧವಾಗಿ ಪರಿಹಾರಕಂಡುಕೊಳ್ಳಲಾಯಿತು. ಭಾರತ ದೇಶವು ಕೇವಲ 75ವರ್ಷಗಳಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ, ಪ್ರಜಾತಂತ್ರ ರಾಷ್ಟ್ರವಾಗಿ ಹೊರ ಹೊಮ್ಮಲು ಸಂವಿಧಾನ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಮುಂಜಾನೆ ತಹಶೀಲ್ದಾರ ಕಾರ್ಯಾಲಯದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ವಾಲ್ಮೀಕಿ ಕ್ರೀಡಾಂಗಣದಲ್ಲಿ 5ಸಾವಿರ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಲಾಯಿತು. ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆಯ ಮೇಲೆ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ಧಪ್ಪ ಹುಚ್ಚರಾಯಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ, ಡಿವೈಎಸ್‍ಪಿ ಮನೋಜಕುಮಾರ ನಾಯ್ಕ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಸಿಪಿಐ ಗೋಪಾಲ ರಾಠೋಡ, ಪಿಎಸ್‍ಐ ಎಮ್ ಡಿ ಘೋರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಗ್ರೇಡ-2 ತಹಶೀಲದಾರ ಎಲ್ ಎಚ್ ಭೋವಿ, ಮುಖಂಡರಾದ ಬಿ ಆರ್ ಕೊಪ್ಪ, ಅಶೋಕ ಪೂಜಾರಿ, ಸೋಮಶೇಖರ ಮಗದುಮ ಸೇರಿದಂತೆ ಅನೇಕರು ಇದ್ದರು.