ಗೋಕಾಕ:ಮೂಡಲಗಿಗೆ “ಸಹಕಾರ ನಗರ” ಬಿರುದನ್ನು ನೀಡಲು ಚಿಂತನೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿಗೆ “ಸಹಕಾರ ನಗರ” ಬಿರುದನ್ನು ನೀಡಲು ಚಿಂತನೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ ಜ 28 : ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಹಕಾರ ಸಂಘಗಳನ್ನು ಹೊಂದಿರುವ ಮೂಡಲಗಿ ಪಟ್ಟಣಕ್ಕೆ “ಸಹಕಾರ ನಗರ” ಎಂಬ ಬಿರುದನ್ನು ನೀಡಲು ಸರ್ಕಾರದ ಮಟ್ಟದ ಚಿಂತನೆ ನಡೆಸುತ್ತಿರುವುದಾಗಿ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ಸಂಜೆ ಪಟ್ಟಣದ ಬಸವ ರಂಗ ಮಂಟಪದಲ್ಲಿ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಗಿ ಸಹಕಾರ ವಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಸಹಕಾರ ಸಂಘಗಳನ್ನು ಹೊಂದಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿಯೇ ಸುಮಾರು 72 ಸಹಕಾರ ಸಂಘಗಳನ್ನು ಮೂಡಲಗಿ ಪಟ್ಟಣವು ಹೊಂದಿದೆ. ಇದರಿಂದ ರೈತ ಸಮುದಾಯದ ಆರ್ಥಿಕಾಭಿವೃದ್ಧಿಯಲ್ಲಿ ಹೆಚ್ಚಿನ ಅನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರ ರಂಗವನ್ನು ಮತ್ತಷ್ಟು ಬೆಳೆಸಲು ಮೂಡಲಗಿ ಪಟ್ಟಣಕ್ಕೆ ಬಿರುದು ನೀಡುವುದರ ಬಗ್ಗೆ ಗಂಭೀರ ಚಿಂತನೆ ನಮ್ಮ ಮುಂದಿದೆ. ಈಗಾಗಲೇ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರಿಗೂ ಸಹ ಇದರ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಚನ್ನಪಟ್ಟಣವನ್ನು ಗೊಂಬೆಗಳ ನಾಡು ಎಂದು ಕರೆದಂತೆ ಮೂಡಲಗಿಯನ್ನು ಸಹ ಸಹಕಾರ ನಗರ ಎಂದು ಕರೆಯಲು ಉತ್ಸುಕರಾಗಿ ಸಹಕಾರ ಇಲಾಖೆಯ ಮೂಲಕ ಸರಕಾರಕ್ಕೆ ಬಿರುದು ನೀಡುವುದರ ಬಗ್ಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಹಕಾರ ಸಂಘಗಳು ಭದ್ರವಾಗಿ ನೆಲೆಯೂರಬೇಕು. ಗಟ್ಟಿಯಾಗಿ ನಿಂತರೆ ಸಹಕಾರ ಸಂಘಗಳು ಬೆಳೆಯುತ್ತವೆ. ರೈತರ ಆರ್ಥಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಈ ಭಾಗದಲ್ಲಿ ರೈತರ ಜೀವನಾಡಿಯಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಸಹಕಾರ ಸಂಘಗಳು ಕಾರ್ಯನಿರ್ವಹಿಸಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಗದಗ ಜಿಲ್ಲೆಯ ಕನಗಿಹಾಳ ಗ್ರಾಮದಲ್ಲಿ ಸಣ್ಣರಾಮನಗೌಡ ಸಿದ್ದರಾಮನಗೌಡ ಪಾಟೀಲ ಎಂಬುವವರು 1904 ರಲ್ಲಿ ಕೆಲ ಸಮಾನ ಮನಸ್ಕ ರೈತರನ್ನು ಒಗ್ಗೂಡಿಸಿ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಸ್ಥಾಪಿಸಿದರು. ಪರಸ್ಪರ ಸಹಕಾರ, ನಂಬಿಗೆ, ವಿಶ್ವಾಸದ ಮೇಲೆ ಸಹಕಾರ ಸಂಘಗಳು ನಿಂತಿದ್ದು, ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ತತ್ವದಡಿ ಸಹಕಾರ ಸಂಘಗಳು ಕರ್ತವ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಪಿಕೆಪಿಎಸ್‍ಗಳ ಬಲವರ್ಧನೆಗಾಗಿ ರೈತರಿಗೆ ಪತ್ತನ್ನು ಹೆಚ್ಚಿಸುತ್ತಿದ್ದಾರೆ. ಈ ಭಾಗದ ರೈತಾಪಿ ವರ್ಗಕ್ಕೆ ಸರ್ಕಾರದಿಂದ ಹಾಗೂ ಬಿಡಿಸಿಸಿ ಬ್ಯಾಂಕ್‍ನಿಂದ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಕಡಿಮೆ ಬಂಡವಾಳವನ್ನು ಹೂಡಿ ಇಂದು 75 ವರ್ಷಗಳನ್ನು ಪೂರೈಸುತ್ತಿರುವ ಮೂಡಲಗಿ ಪಿಕೆಪಿಎಸ್ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಆತ್ಮನಿರ್ಭರ ಭಾರತದಲ್ಲಿ ದೇಶ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ. ಸಹಕಾರಿ ಸೇ ಸಮೃದ್ಧಿ ಇದು ಸಹ ವರದಾನವಾಗಿದೆ. ಸ್ವಾತಂತ್ರ್ಯ ನಂತರ ಪ್ರಥಮ ಬಾರಿಗೆ ಕೇಂದ್ರದಲ್ಲಿ ಸಹಕಾರ ಖಾತೆಯನ್ನು ಆರಂಭಿಸಿರುವ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಅಥಣಿ ಮೋಟಗಿಮಠದ ಚನ್ನಬಸವ ಮಹಾಸ್ವಾಮಿಗಳು, ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ಮತ್ತು ಮುನ್ಯಾಳ-ರಂಗಾಪೂರದ ಡಾ. ಶಿವಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ಸಂದೀಪ ಸೋನವಾಲಕರ ವಹಿಸಿದ್ದರು.
ವೇದಿಕೆಯಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ್, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಗೋವಿಂದಪ್ಪ ಸೋನವಾಲಕರ, ಬಿ.ಬಿ. ಹಂದಿಗುಂದ, ಬಸವಪ್ರಭು ನಿಡಗುಂದಿ, ಪಿಕೆಪಿಎಸ್ ಉಪಾಧ್ಯಕ್ಷೆ ನೀಲವ್ವಾ ಮಠಪತಿ, ನಿರ್ದೇಶಕರಾದ ತಿಪ್ಪಣ್ಣ ಕುರಬಗಟ್ಟಿ, ರವೀಂದ್ರ ಸಣ್ಣಕ್ಕಿ, ಶಿವಲಿಂಗಪ್ಪ ಗೋಕಾಕ, ಶ್ರೀಶೈಲ ಬಳಿಗಾರ, ಪ್ರಶಾಂತ ನಿಡಗುಂದಿ, ಮಾಯಪ್ಪ ಕಂಕಣವಾಡಿ, ಸಂಗಮೇಶ ಕೌಜಲಗಿ, ಮಲ್ಲಪ್ಪ ತಳವಾರ, ಮಾಯವ್ವ ಗುಡ್ಲಮನಿ, ಕರೆಪ್ಪ ನಾಯ್ಕ, ವೀರಣ್ಣಾ ಢವಳೇಶ್ವರ, ಮುಖ್ಯ ಕಾರ್ಯನಿರ್ವಾಹಕ ಹನಮಂತ ಶೆಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರನ್ನು ಸತ್ಕರಿಸಲಾಯಿತು. ಅಮೃತ ಮಹೋತ್ಸವದ ನಿಮಿತ್ಯ ಮೂಡಲಗಿ ಪಿಕೆಪಿಎಸ್ ಹೊರತಂದಿರುವ “ಮೂಡಲ ಬೆಳಕು” ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.