ಗೋಕಾಕ:ಯೂ ಟ್ಯೂಬ್ ಚಾನೆಲ್‍ವೊಂದರಿಂದ ಭಗೀರಥ ಸಮಾಜಕ್ಕೆ ನಿಂದನೆ : ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ – ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ
ಯೂ ಟ್ಯೂಬ್ ಚಾನೆಲ್‍ವೊಂದರಿಂದ ಭಗೀರಥ ಸಮಾಜಕ್ಕೆ ನಿಂದನೆ : ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ – ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ
ಗೋಕಾಕ ಫೆ 22 : ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯಕ್ಕೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿರುವ ಯೂ ಟ್ಯೂಬ್ ಸಂಪಾದಕನೋರ್ವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಘಟಪ್ರಭಾದ ಯೂ ಟ್ಯೂಬ್ ಚಾನೇಲ್‍ನ ಸಂಪಾದಕರು ಸುದ್ಧಿ ವಿಮರ್ಶೆ ಮಾಡುವಾಗ ಒಂದು ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ನನ್ನ ಗಮನಕ್ಕೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಸಹ ವೈರಲ್ ಆಗಿದೆ. ಕಳೆದ 20-30 ವರ್ಷಗಳಿಂದ ಅವಿಭಜಿತ ಗೋಕಾಕ ತಾಲೂಕಿನ ಎಲ್ಲ ಜನಾಂಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ನಾವುಗಳು ಯಾವುದೇ ಒಂದು ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವವರನ್ನು ಎಂದಿಗೂ ಎತ್ತಿ ಕಟ್ಟುವುದಿಲ್ಲ. ಅಂತಹವರಿಗೆ ಯಾವ ಸಂದರ್ಭದಲ್ಲೂ ನಾವು ಬೆಂಬಲಿಸುವುದಿಲ್ಲ. ಇದರಲ್ಲಿ ಕೆಲವರು ರಾಜಕೀಯ ದುರುದ್ಧೇಶದಿಂದ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ. ರಾಜಕೀಯ ಷಡ್ಯಂತ್ರವು ಇದರಲ್ಲಿ ಅಡಗಿದೆ. ಈ ಸಂಬಂಧ ಸೂಕ್ತ ತನಿಖೆಯೂ ನಡೆಯಬೇಕು. ಒಂದು ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಆಗಾಗ ಜರುಗುತ್ತಿರುತ್ತವೆ. ನಾವಂತೂ ಎಲ್ಲ ಜನಾಂಗದವರನ್ನು, ವಿವಿಧ ಧರ್ಮಿಯರನ್ನು ಕೂಡಿಸಿಕೊಂಡು ಒಂದೇ ತತ್ವದಡಿ ಹೋಗುತ್ತಿದ್ದೇವೆ. ಆದರೆ ಹಿಂದುಳಿದ ವರ್ಗಕ್ಕೆ ಸೇರಿರುವ ಭಗೀರಥ ಸಮಾಜದ ವಿರುದ್ಧ ಮಾತನಾಡಿರುವ ಯಾವುದೇ ವ್ಯಕ್ತಿ ಇರಲಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಕಳೆದ 2-3 ದಶಕಗಳಿಂದ ಕುರುಬ ಸಮಾಜವಾಗಲಿ, ಭಗೀರಥ ಸಮಾಜವಾಗಲಿ, ವೀರಶೈವ ಲಿಂಗಾಯತ ಸಮಾಜವಾಗಲಿ, ಮುಸ್ಲಿಂ ಸಮಾಜವಾಗಲಿ ಅಥವಾ ಇನ್ಯಾವುದೋ ಸಮಾಜವಾಗಲೀ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಿಕೊಂಡು ಸರ್ವರನ್ನು ಸಮಾನವಾಗಿ ಕಾಣುತ್ತಿದ್ದೇವೆ. ಎಲ್ಲ ಸಮಾಜಗಳು ಸಹ ನನ್ನನ್ನು ತಮ್ಮ ಮನೆಯ ಮಗನಂತೆ ನೋಡಿಕೊಂಡು ಆಶೀರ್ವಾದ ಮಾಡಿಕೊಂಡು ಬರುತ್ತಿದ್ದಾರೆ. ಆ ಸಮಾಜಗಳ ಭಾವನೆಗಳನ್ನು ನಾನು ಸದಾ ಗೌರವಿಸುತ್ತೇನೆ. ಒಟ್ಟಿನಲ್ಲಿ ಒಂದು ಸಮುದಾಯಕ್ಕೆ ಕೆಟ್ಟದಾಗಿ ಕಮೆಂಟ್ ಕೊಟ್ಟಿರುವ ಯೂ ಟ್ಯೂಬ್ ಚಾನೆಲ್‍ವೊಂದರ ಸಂಪಾದಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ನಾಳೆ ಭಗೀರಥ ಸಮಾಜದಿಂದ ಗೋಕಾಕ ಮತ್ತು ಮೂಡಲಗಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.