ಮೂಡಲಗಿ:ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಬಗ್ಗೆ ಜಾಗೃತಿ ಕಾರ್ಯಕ್ರಮ
ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಬಗ್ಗೆ ಜಾಗೃತಿ ಕಾರ್ಯಕ್ರಮ
ಮೂಡಲಗಿ ಮಾ 15 : ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಗುರ್ಲಾಪೂರದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಬುಧವಾರ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಮತಗಟ್ಟೆಯೊಳಗೆ ಪ್ರವೇಶ ಪಡೆದ ನಂತರ ಮತಯಂತ್ರ ಸಿದ್ಧವಾಗಿರುವುದಕ್ಕೆ ಹಸಿರು ದೀಪ ಉರಿಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಬಳಿಕ ನಿಮಗೆ ಸೂಕ್ತ ಎನ್ನಿಸಿದ ಅಭ್ಯರ್ಥಿಗೆ ಮತದಾನ ಮಾಡಿ ಎಂದು ಸಾರ್ವಜನಿಕರಿಗೆ ಸಿಡಿಪಿಒ ಹಾಗೂ ಮೂಡಲಗಿ ವಲಯದ ಚುನಾವಣಾಧಿಕಾರಿ ಯಲ್ಲಪ್ಪ ಗದಾಡಿ ಸಲಹೆ ನೀಡಿದರು.
ಮತದಾನದ ಬಟನ್ ಒತ್ತಿದ ಬಳಿಕ ಅಭ್ಯರ್ಥಿ ಚಿಹ್ನೆ ಎದುರು ಕೆಂಪು ದೀಪ ಬೆಳಗುತ್ತದೆ. ಅಂತಿಮವಾಗಿ ನೀವು ಯಾರಿಗೆ ಮತದಾನ ಮಾಡಿದ್ದೀರಿ ಎಂಬುದು ವಿವಿ ಪ್ಯಾಟ್ ಯಂತ್ರದಲ್ಲಿ ಚೀಟಿಯೊಂದು 7 ಸೆಕೆಂಡ್‍ಗಳ ಕಾಲ ಕಾಣಿಸಿಕೊಂಡು, ನಂತರ ವಿವಿ ಪ್ಯಾಟ್‍ನ ಯಂತ್ರದೊಳಗೆ ಸಂಗ್ರಹವಾಗಲಿದೆ. ಈ ಚೀಟಿಯಲ್ಲಿ ನೀವು ಮತದಾನ ಮಾಡಿದ ವ್ಯಕ್ತಿಯ ಪಕ್ಷದ ಚಿಹ್ನೆ ಕಾಣಿಸಲಿದೆ ಎಂದು ವಿವರಿಸಿದರು.
ಕಡ್ಡಾಯವಾಗಿ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಮತದಾನ ಮಾಡುವ ಮೂಲಕ ಮತದಾರರು ತಮ್ಮ ಹಕ್ಕನು ಚಲಾಯಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಂದ್ರಾ ಬೋವಿ, ಅಂಗನವಾಡಿ ಮೇಲ್ವಿಚಾರಕಿ ಕಮಲಾ ಕನಶೆಟ್ಟಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.