ಗೋಕಾಕ:ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ : ಭೀಮಶಿ ಗದಾಡಿ
ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ : ಭೀಮಶಿ ಗದಾಡಿ
ಗೋಕಾಕ ಮಾ 15 : ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ರಾಜ್ಯದಲ್ಲಿ ಅತಿವೃಷ್ಠಿಯಿಂದ ಪ್ರವಾಹದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನೆನಪಾಗದ ಕರ್ನಾಟಕ ರಾಜ್ಯ. ಇಂದು ಒಂದು ವಾರದಲ್ಲಿ 2ಬಾರಿ ನೆನಪಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಆರೋಪಿಸಿದರು.
ಬುಧವಾರದಂದು ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಸಭೆಯಲ್ಲಿ ಪಾಲ್ಗೊಂಡು ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನ ಸಭೆಯ ಚುನಾವಣೆಯು ಸಮೀಪಿಸುತ್ತಿರುವಾಗ ಅಭಿವೃದ್ದಿ ಕಾರ್ಯಗಳ ಲೋಕಾರ್ಪಣೆಯ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ವಾರದಲ್ಲಿ 2ದಿನ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯದ ಜನರನ್ನು ಮರಳು ಮಾಡಲು ಬರುತ್ತಿದ್ದಾರೆ. ಇಲ್ಲಿಯ ಜನಸಾಮಾನ್ಯರು ಎಲ್ಲವನ್ನು ಗಮನಿಸುತ್ತಿದ್ದಾರೆ ಬರುವ ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದರು.
ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ದೇಶದ ಎಲ್ಲ ರಾಜ್ಯ ಸರ್ಕಾರಗಳು ಹಿಂಪಡೆದರೇ ಬೊಮ್ಮಾಯಿ ನೇತೃತ್ವದ ಸರ್ಕಾರ ಹಿಂಪಡೆಯದೇ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕೆಲವು ದಿನಗಳು ಚುನಾವಣೆಗೆ ಬಾಕಿ ಇವೆ ಇನ್ನಾದರೂ ಎಚ್ಚೆತ್ತು ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಅಲ್ಲದೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲವಾದಲ್ಲಿ ಬಿಜೆಪಿಗೆ ಸೋಲು ಖಚಿತ ಎಂದು ತಿಳಿಸಿದರು.
ನಗರದಲ್ಲಿರುವ ಆಯ್‍ಡಿಎಫ್‍ಸಿ ಬ್ಯಾಂಕಿನಿಂದ ರೈತರಿಗೆ ಸಾಲ ವಸೂಲಾತಿಯ ನೆಪದಲ್ಲಿ ಅನೇಕ ರೀತಿಯ ಕಿರುಕುಳ ನೀಡಲಾಗುತ್ತಿದೆ. ಇದರ ಬಗ್ಗೆ ಬ್ಯಾಂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವುದೇ ಪ್ರಯೋಜನೆವಾಗಿರುವದಿಲ್ಲ. ಇನ್ನೂ ಒಂದು ವಾರದ ಗಡವುವನ್ನು ನೀಡುತ್ತಿದ್ದೇವೆ ಅಷ್ಟರಲ್ಲಿ ಅವರ ಲೋಪದೋಷಗಳನ್ನು ಸರಿ ಪಡಿಸಿಕೊಂಡರೇ ಒಳ್ಳೆಯದು ಆಗುತ್ತದೆ ಇಲ್ಲವಾದಲ್ಲಿ ಬ್ಯಾಂಕಿಗೆ ಬೀಗ್ ಹಾಕಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಂಕರ ಮದಿಹಳ್ಳಿ ಭೀಮಶಿ ಹುಲಕುಂದ, ಮುದಕಪ್ಪ ಗೌಡಪ್ಪನವರ, ರಮೇಶ ಗೂದಿಗೊಪ್ಪ, ರಾಯಪ್ಪ ಗೌಡಪ್ಪನವರ, ವೆಂಕಪ್ಪ ಕೊಪ್ಪದ, ಮಲ್ಲಪ್ಪ ಬಂಡಿ, ಸೋಮಪ್ಪ ಬಬಲಿ, ಸಿದ್ದಪ್ಪ ಮರ್ದಿ, ಸಿದ್ದಪ್ಪ ಗೌಡಪ್ಪನವರ, ಹನಮಂತ ಅಳಗೋಡಿ, ಮಾರುತಿ ಗೂದಿಗೋಪ್ಪ, ನಾಗರಾಜ ಗಂಗಪ್ಪಗೊಳ, ಹನಮಂತ ಚಿಪ್ಪಲಕಟ್ಟಿ ಸೇರಿದಂತೆ ಅನೇಕರು ಇದ್ದರು.