RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಬತ್ತದ ಬೆಳೆದಿಂಗಳು ಜಾಣಪದ ಜಾಣ ಡಾ‌.ಸಿ.ಕೆ.ನಾವಲಗಿ

ಗೋಕಾಕ:ಬತ್ತದ ಬೆಳೆದಿಂಗಳು ಜಾಣಪದ ಜಾಣ ಡಾ‌.ಸಿ.ಕೆ.ನಾವಲಗಿ 

ಬತ್ತದ ಬೆಳೆದಿಂಗಳು ಜಾಣಪದ ಜಾಣ ಡಾ‌.ಸಿ.ಕೆ.ನಾವಲಗಿ

ಗೋಕಾಕ ಮಾ 24  :  ಅಭಿನಂದನಾ ಗ್ರಂಥ ಎನ್ನುವುದು ಕೇವಲ ಒಂದು ಪುಸ್ತಕವಲ್ಲ , ಗ್ರಂಥದಲ್ಲಿ ಚಿತ್ರಿತವಾಗಿರುವ ವ್ಯಕ್ತಿಯನ್ನು ಮುಟ್ಟುವ ಜೊತೆಗೆ ಆ ವ್ಯಕ್ತಿಯ ಸಮಗ್ರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆಯಾಗಿರುತ್ತದೆ. ಇಂತಹ ಹೊತ್ತಿಗೆಗೆ ಗೋಕಾಕ ನಾಡಿನ ಹೆಸರಾಂತ ಜಾನಪದ ಸಾಹಿತಿ ಡಾ.ಸಿ.ಕೆ ನಾವಲಗಿ ಅವರು ಸಹ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ. 
ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. 
ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ಜಾನಪದ ಚಿಂತನ, ಜಾನಪದ ಕಥನಗೀತ ಸಂಚಯ, ಶರಣ ಸಂಗಾತ, ಜಾನಪದ ಸಮಾಲೋಕ, ವಿಮರ್ಶನ ಗ್ರಹಿಕೆ, ಗೋಕಾವಿನಾಡಿನ ಹೊನ್ನ ಬೆಳೆ, ವಚನಕಾರ ಜೇಡರದಾಸಿಮಯ್ಯ, ಉತ್ತರ ಕರ್ನಾಟಕದ ಭಜನೆ ಹಾಡುಗಳು, ಸಹೃದಯ, ಬೆಳಗಲಿ ಶರಣ ಕಿರಣ, ಅಮೃತದುಂದುಭಿ, ಸಮೃದ್ಧಿ, ಸುವರ್ಣ ಸಂಪಿಗೆ, ಚಂದ್ರಶೇಖರ ಕಂಬಾರ, ಜನಪದ ತ್ರಿಪದಿಗಳು, ಅಂಬಿರ ಚೌಡಯ್ಯನವರ ವಚನಗಳು ಹಾಗೂ ಶರೀರ ಜಾನಪದ, ಉತ್ತರ ಕರ್ನಾಟಕದ ಕೃಷಿ ಜನಪದ ಸಾಹಿತ್ಯ, ಡಾ.ಬಿ.ಎಸ್. ಗದ್ದಗಿಮಠ, ಡಾ.ಆರ್‌.ಸಿ. ಹಿರೇಮಠ, ಡಾ.ಎಂ.ಎಸ್. ಸುಂಕಾಪುರ, ಬಸವ ಬೆಳಗು, ಜಂಗಮ ಜಾನಪದ, ನನ್ನೂರು, ರಸದಾಳಿ, ಜನಪದ ರಂಗಭೂಮಿ ಕಲಾವಿದ ಶ್ರೀ ನಿಮಗಯ್ಯಸ್ವಾಮಿ ಪೂಜಾರಿ, ಪ್ರೊ. ಜ್ಯೋತಿ ಹೊಸೂರ, ಆಧುನಿಕ ಕನ್ನಡ ಆತ್ಮಕತೆಗಳು, ಬೆಳಗಾವಿ ಜಿಲ್ಲೆ ಜನಪದ ಕಲಾವಿದರು, ಡಾ. ಬಸವರಾಜ ಮಲಶೆಟ್ಟಿ, ಶರಣ ಕ್ಷೇತ್ರಗಳು, ಜಾನಪದ ಸಂಭ್ರಮ, ಹತ್ತು ಮಂದ್ಯಾಗ ಹಾಡೇನ, ಜಾನಪದ ಸಡಗರ, ಸಾಹಿತ್ಯ ಸಂವಾದ-2, ಸೋಮಲಿಂಗ ಕವಿಯ ಲಾವಣಿಗಳು, ವಚನ ಸಂಪದ, ಶೂನ್ಯ ಸಂಪದ, ಸತ್ಯಾರ್ಥಿ, ಶತಾಯುಷಿ, ಲಾವಣಿ ಸಾಮ್ರಾಟ,, ಸೋಲಿಂಗಪ್ಪ ದೊಡವಾಡ, ದೇಸೀ ಸಂಭ್ರಮ, ಸಾಹಿತ್ಯ ಸಂಕೀರ್ಣ, ಕುವೆಂಪು ಕಥನ ಕವನಗಳು, ನಿಜಗುಣ ಶಿವಯೋಗಿ  ಮುಂತಾದವು. 
ಇವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿ, ಸಿರಿಗನ್ನಡ ಗೌರವ ಪ್ರಶಸ್ತಿ, ಡಾ.ಬಿ.ಎಸ್. ಗದ್ದಗಿಮಠ ಗೌರವ ಪ್ರಶಸ್ತಿ, ರಂಗ ಸಂಸ್ಥಾನ ಪ್ರಶಸ್ತಿ ಪುರಸ್ಕಾರ ಸೇರಿದಂತೆ ರಾಜ್ಯ ಮಟ್ಟದ ಅನೇಕ ಪ್ರಶಸ್ತಿ,ಪುರಸ್ಕಾರಗಳು ದೊರೆತಿವೆ.
ಒಬ್ಬ ಪ್ರಾಧ್ಯಾಪಕನಾಗಿ ಜೀವನ ಪ್ರಾರಂಭಿಸಿ ಇಂದು ಇಡೀ ರಾಜ್ಯ ಮೆಚ್ಚುವಂತಹ ಸಾಧನೆ ಮಾಡಿ ಸಾಹಿತ್ಯಲೋಕದಲ್ಲಿ ಅತೀ ಎತ್ತರಕ್ಕೆ ಬೆಳೆದಿರುವ ಡಾ.ಸಿ.ಕೆ ನಾವಲಗಿ ಅವರು ಬೆಳಗಾವಿ ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಜಾನಪದ ಸಾಹಿತ್ಯದಲ್ಲಿ ಪಾಂಡಿತ್ಯ ಪಡೆದಿರುವ ಇವರು ಜಾನಪದ ವಿಷಯಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಸಂಶೋಧನಾತ್ಮಕ ಗ್ರಂಥಗಳನ್ನು ಬರೆದು ಸಾಹಿತ್ಯ ಲೋಕಕ್ಕೆ ಉಣಬಡಿಸಿದ್ದಾರೆ. ಇವರ ಈ ಸಾಹಿತ್ಯಕ ಸಾಧನೆಗಳನ್ನು ಗುರುತಿಸಿ ಗೋಕಾಕಕಿನ ಸಾಹಿತ್ಯ ಬಳಗವು ಇವರನ್ನು ಗೋಕಾಕ ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಹೆಮ್ಮೆಯ ಸಂಗತಿ.
ಇವರ ಸಾಹಿತ್ಯ ಸೇವೆಗೆ ಕರ್ನಾಟಕ ಸರಕಾರದ ಜಾನಪದ ತಜ್ಞ, ರಾಜ್ಯ ಮಟ್ಟದ ಅತ್ಯುತ್ತಮ  ಪುಸ್ತಕ ಬಹುಮಾನ – ಪ್ರಶಸ್ತಿಗಳು , ಹಲವು ದತ್ತಿ ಪ್ರಶಸ್ತಿಗಳು, ಅತ್ತಿಮಬ್ಬೆ, ಜಾನಪದಸಿರಿ,ಸಾಹಿತ್ಯ ಭೂಷಣ ಮೊದಲಾದ ಹತ್ತಾರು ಪ್ರಶಸ್ತಿಗಳು  ಡಾ.ಸಿ.ಕೆ ನಾವಲಗಿ ಅವರಿಗೆ ದೊರೆತಿವೆ.  ಕರ್ನಾಟಕ ಜಾನಪದ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಕರ್ನಾಟಕ ಸರಕಾರದ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟನ ಸಂಸ್ಥಾಪಕ ಸದಸ್ಯ ಸೇರಿದಂತೆ ಜಾನಪದ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಂಸ್ಥೆಗಳಿಗೆ  ಅಧ್ಯಕ್ಷರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ, ರಾಜ್ಯದ ಹಲವಾರು ಯುವ ಸಾಹಿತಿಗಳು ರಚಿಸಿದ ಗ್ರಂಥಗಳಿಗ ಮುನ್ನುಡಿಗಳನ್ನು ಬರೆದು ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಮೂಲಕ ಸಾಹಿತ್ಯದ ತೇರನ್ನು ಎಳೆಯಲು ಸಜ್ಜಾಗಿರುವ ಯುವಕರನ್ನು ಸರಿಯಾದ ಮಾರ್ಗದರ್ಶನ ಮಾಡಿ  ಅವರನ್ನು ಬೆಳೆಸುವ ಕಾರ್ಯವನ್ನು ಡಾ.ಸಿ.ಕೆ.ನಾವಲಗಿ ಅವರು ಮಾಡುತ್ತಿರುವುದು ಇತರ ದೈತ್ಯ ಸಾಹಿತಿಗಳಿಗೆ ಮಾದರಿಯಾಗಿದೆ.  ಕನ್ನಡ ಜನಪದ ಸಾಹಿತ್ಯ- ಸಂಸ್ಕೃತಿ – ಅಧ್ಯಯನ, ಬರವಣಿಗೆಯ ಪ್ರವೃತ್ತಿಯನ್ನು ನಿವೃತ್ತಿ ನಂತರವೂ ಮುಂದೆವರಸಿರುವುದು ಸಿ.ಕೆ‌.ನಾವಲಗಿ ಅವರ ನಿರಂತರ ದುಡಿಮೆಯ ಗುಣಗ್ರಾಹಿ ವ್ಯಕ್ತಿತ್ವದ ಕನ್ನಡಿ ಎಂದರೆ ತಪ್ಪಾಗಲಿಕ್ಕಿಲ್ಲ.
ಇವರ ಈ ಮಹಾನ್ ಸಾಹಿತ್ಯ – ಸಾಧನೆಯನ್ನು ಗುರುತಿಸಿ ನಗರದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಅವರ ನೂರಾರು ಅಭಿಮಾನಿಗಳು ಷಷ್ಟಪೂರ್ತಿ ಅಭಿನಂದನ ಸಮಾರಂಭವನ್ನು ಬರುವ ಮಾರ್ಚ್ 26 ರವಿವಾರದಂದು ಹಮ್ಮಿಕೊಂಡು “ಎಸಳು ಯಾಲಕ್ಕಿ ಗೊನಿ”ಎಂಬ ಅಭಿನಂದನ ಗ್ರಂಥವನ್ನು ಸರ್ಮಪಿಸಿ ನಗರದ ನಾಗರಿಕರು ಡಾ.ಸಿ.ಕೆ ನಾವಲಗಿ ಅವರನ್ನು ಸತ್ಕರಿಸಿ ಗೌರವಿಸಲಿದ್ದಾರೆ. ಈ ಶುಭ ಸಂದರ್ಭದಲ್ಲಿ ಇವರ ಸಾಹಿತ್ಯ ಸೇವೆ ಹೀಗೆಯೇ ಮುಂದೆವರೆದು ಸಾಹಿತ್ಯ ಲೋಕಕ್ಕೆ ಇವರಿಂದ ಇನ್ನಷ್ಟು,  ಮತ್ತಷ್ಟು ಮೌಲಿಕ ಗ್ರಂಥಗಳು ಹೊರಬರಲಿ ಎಂದು ಹಾರೈಸೋಣ .

Related posts: