ಗೋಕಾಕ:ಸತೀಶ್ ಶುಗರ್ಸ್‌ನ ಸಕ್ಕರೆ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಸತೀಶ್ ಶುಗರ್ಸ್‌ನ ಸಕ್ಕರೆ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಗೋಕಾಕ: ಸತೀಶ್ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಪ್ರಸ್ತುತ ಸಕ್ಕರೆ ಘಟಕದ ಉತ್ಪಾದನಾ ಸಾಮರ್ಥ್ಯವನ್ನು 10000 ಟಿ.ಸಿ.ಡಿ ಯಿಂದ 20000 ಟಿ.ಸಿ.ಡಿ ಗೆ, ಸಹ-ವಿದ್ಯುತ್ ಘಟಕದ ಉತ್ಪಾದನಾ ಸಾಮರ್ಥ್ಯವನ್ನು 31 ಮೆ.ವ್ಯಾಟ್ ನಿಂದ 61 ಮೆ.ವ್ಯಾಟ್‌ಗೆ, ಎಥೆನಾಲ್ ಘಟಕದ ಉತ್ಪಾದನಾ ಸಾಮರ್ಥ್ಯವನ್ನು 300 ಕೆ.ಎಲ್. ನಿಂದ 600 ಕೆ.ಎಲ್.ಗೆ ವಿಸ್ತರಣೆ ಮತ್ತು ನೂತನ 12 ಟನ್ ಪ್ರತಿವಿನ ಸಾಮರ್ಥ್ಯದ ಮಲ್ಟಿ ಫೀಡ್ ಬಯೋ ಸಿ.ಬಿ.ಜಿ. ಉತ್ಪಾದನಾ ಘಟಕಗಳನ್ನೊಳಗೊಂಡು ಅಂದಾಜು 500 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿಜಿಯಲ್ಲಿ ಬುದ್ದ, ಬಸವ, ಡಾ. ಬಿ.ಆರ್. ಅಂಬೇಡ್ಕರ್, ಶಾಹು ಮಹಾರಾಜರ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸತೀಶ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಸಾಮರ್ಥ್ಯ ವಿಸ್ತರಿಸುವ ಯೋಜನೆಯ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಅತ್ಯಂತ ಕಡಿಮೆ ಅವಧಿಯಲ್ಲಿ ಸಕ್ಕರೆ, ಸಹ-ವಿದ್ಯುತ್ ಮತ್ತು ಇಥೆನಾಲ್ ಘಟಕಗಳನ್ನು ಸ್ಥಾಪಿಸುವ ಮೂಲಕ ಪ್ರಾರಂಭದಿಂದಲೂ ಅನೇಕ ಮೈಲುಗಲ್ಲುಗಳನ್ನು ಸಾಧಿಸಿದ ದಾಖಲೆಯನ್ನು ಸತೀಶ ಶುಗರ್ ಕಾರ್ಖಾನೆಯು ಹೊಂದಿದ್ದು, ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ವೇಗವಾಗಿ ಪ್ರಗತಿಯನ್ನು ಸಾಧಿಸುತ್ತಿದೆ. ಅದರಂತೆ, ಸಂಸ್ಥೆಯು ಇನ್ನು ಮುಂದೆಯೂ ಸಹ ತಮ್ಮಿಂದ ಇದೇ ರೀತಿಯ ನಿರಂತರ ಸಹಾಯ ಮತ್ತು ಸಹಕಾರವನ್ನು ಬಯಸುತ್ತಾ ಮುಂಬರುವ ಸನ್ 2025-26 ನೇ ಸಾಲಿನಲ್ಲಿ ಸತೀಶ ಶುಗರ್ ಸಮೂಹದ ಅಂಗ ಸಂಸ್ಥೆಗಳಾದ ಮೆ. ಯರಗಟ್ಟಿ ಶುಗರ್ ಪ್ರೈವೇಟ್ ಲಿಮಿಟೆಡ್ ಮತ್ತು ಸತೀಶ್ ಶುಗರ್ಸ್ ಲಿಮಿಟೆಡ್ ಯುನಿಟ್- ಕಾರ್ಖಾನೆಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಇದೇ ವೇಳೆ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ 124 ಕ್ಷೇತ್ರಗಳ ಟಿಕೆಟ್ ಘೋಷಿಸಿದ್ದು, ಇನ್ನೂಳಿದ 100 ಮತಕ್ಷೇತ್ರಗಳ ಅಭ್ಯರ್ಥಿಗಳನ್ನು ಎರಡು, ಮೂರನೇ ಪಟ್ಟಿಯಲ್ಲಿ ಘೋಷಿಸುತ್ತೇವೆ. ಬೆಳಗಾವಿ ಜಿಲ್ಲೆಯ 18 ರಲ್ಲಿ 9 ಮತಕ್ಷೇತ್ರ ಅಭ್ಯರ್ಥಿ ಘೋಷಿಸಿದ್ದು, ಇನ್ನೂ 9 ಮತಕ್ಷೇತ್ರದ ಅಭ್ಯರ್ಥಿಗಳನ್ನ ಘೋಷಣೆ ಮಾಡಬೇಕು, ಮೊದಲ ಲೀಸ್ಟ್‌ನಲ್ಲಿ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ. ಕೆಲವು ಕ್ಷೇತ್ರಗಳ ಟಿಕೆಟ್ ಚರ್ಚೆ ಮಾಡಿ ಘೋಷಿಸುತ್ತೇವೆ. ಭಿನ್ನಾಬಿಪ್ರಾಯ ಇದ್ದ ಕಡೆ ಬಂಡಾಯ ಶಮನ ಮಾಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸತೀಶ್ ಶುಗರ್ಸ್ ಲಿಮಿಟೆಡ್ ಕಾರ್ಖಾನೆ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ, ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ, ಸತೀಶ್ ಶುಗರ್ಸ್, ಬೆಳಗಾಂವ ಶುಗರ್ಸ್‌ನ ಚೇರಮನ್ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ, ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳ್ಕರ್, ಶಾಸಕ ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವರಾದ ವೀರಕುಮಾರ ಪಾಟೀಲ್, ಆರ್. ಬಿ. ತಿಮ್ಮಾಪುರ್, ಮಾಜಿ ಶಾಸಕರಾದ ಶ್ಯಾಮ ಘಾಟಗೆ, ಕಾಕಾಸಾಬೇಬ್ ಪಾಟೀಲ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಸಾವಿರಾರು ಮುಖಂಡರು, ಅಪಾರ ಸಂಖ್ಯೆಯ ರೈತರು ಪಾಲ್ಗೊಂಡಿದ್ದರು.