ಗೋಕಾಕ:ಸಾವಿರಾರು ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ರಮೇಶ ಜಾರಕಿಹೊಳಿ ಉಮೇದುವಾರಿಕೆ ಸಲ್ಲಿಕೆ
ಸಾವಿರಾರು ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ರಮೇಶ ಜಾರಕಿಹೊಳಿ ಉಮೇದುವಾರಿಕೆ ಸಲ್ಲಿಕೆ
ಗೋಕಾಕ 18 : ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ಮಂಗಳವಾರದಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಮುನ್ನ, ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ನಗರದ ಕೊಳವಿ ಹನಮಂತ ದೇವರ ಗುಡಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಶಕ್ತಿ ಪ್ರದರ್ಶನ ಮಾಡಿದರು.
ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಸಹೋದರ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ , ಸುಪುತ್ರರಾದ ಅಮರನಾಥ ಜಾರಕಿಹೊಳಿ , ಸರ್ವೋತ್ತಮ ಜಾರಕಿಹೊಳಿ , ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ ಸೇರಿ ಮತ್ತಿತರ ನಾಯಕರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಗೋಕಾಕ ಜನರ ಆಶಿರ್ವಾದದಿಂದ 7ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ವಿರುದ್ಧ ವಿರುವ ಅಭ್ಯರ್ಥಿಯನ್ನು ನಾವು ಕಡಿಮೆ ಎಂದು ತಿಳಿಯದೆ ಪ್ರಬಲ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆ ಎದುರಿಸುತ್ತೇನೆ. ಜಿಲ್ಲೆಯಲ್ಲಿ ನಾನೋಬ್ಬ ಸಾಮಾನ್ಯ ಕಾರ್ಯಕರ್ತ ನನ್ನಕ್ಕಿಂತ ಪ್ರಬಲ ನಾಯಕರು ಇದ್ದಾರೆ ಮೇ 13 ರ ಫಲಿತಾಂಶದವರೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಫಲಿತಾಂಶ ಬಂದ ನಂತರ ಮಾತನಾಡುತ್ತೇನೆ ಎಂದು ಹೇಳಿದರು. ನನ್ನ ಮಗ ನನಗೆ ಬೆಂಬಲವಾಗಿ ನಾಮಪತ್ರ ಸಲ್ಲಿಸಿದ್ದಾನೆ ನಂತರ ಹಿಂಪಡಿಯುತ್ತಾನೆ ಅಷ್ಟೇ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ ವೇಳೆ ಗೋಕಾಕ ಮತಕ್ಷೇತ್ರದಿಂದ ಬಂದಿದ್ದ ಸಹಸ್ರ ಸಹಸ್ರ ಸಂಖ್ಯೆಯ ಜನಸಾಗರ ತನ್ನ ನೆಚ್ಚಿನ ನಾಯಕ ರಮೇಶ ಜಾರಕಿಹೊಳಿ ಪರ ಜಯ ಘೋಷಹಾಕಿ ನಗರದ ಬಸವೇಶ್ವರ ವೃತ್ತದಲ್ಲಿ ಬೃಹದಾಕಾರದ ಹೂಹಾರ ಹಾಕಿ ಸ್ವಾಗತಿಸಿದ್ದು , ಎಲ್ಲರ ಗಮನ ಸೆಳೆಯಿತು.