ಬೆಳಗಾವಿ:ಬೆಳಗಾವಿ: ಜಾರಕಿಹೊಳಿ ಸಹೋದರರ ಕ್ಷೇತ್ರಗಳ ಸ್ಥಿತಿ..ರಮೇಶ್ಗೆ ಹಿನ್ನಡೆ
ಬೆಳಗಾವಿ: ಜಾರಕಿಹೊಳಿ ಸಹೋದರರ ಕ್ಷೇತ್ರಗಳ ಸ್ಥಿತಿ..ರಮೇಶ್ಗೆ ಹಿನ್ನಡೆ
ಬೆಳಗಾವಿ ಮೇ 13 : ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬ ಸಹ ತನ್ನದೇ ಆದ ಪ್ರಬಲ್ಯ ಹೊಂದಿದೆ. ಈ ಬಾರಿ ಮೂವರು ಜಾರಕಿಹೊಳಿ ಸಹೋದರರು ಚುನಾವಣಾ ಕಣದಲ್ಲಿದ್ದಾರೆ. ಸದ್ಯ ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ ಹಿನ್ನಡೆ ಅನುಭವಿಸಿದ್ದಾರೆ.
ಬೆಂಗಳೂರು/ಬೆಳಗಾವಿ: ರಾಜ್ಯದ ದೊಡ್ಡ ಜಿಲ್ಲೆ ಮತ್ತು 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಬೆಳಗಾವಿ. ಈ ಜಿಲ್ಲೆಯ ರಾಜಕಾರಣ ಯಾವಾಗಲೂ ಪಕ್ಷಗಳ ನಡುವಿನ ಹೋರಾಟದೊಂದಿಗೆ ನಾಯಕರ ವೈಯಕ್ತಿಕ ವರ್ಚಸ್ಸು ಆಧಾರಿತ ಪೈಪೋಟಿಯಿಂದಲೂ ಕೂಡಿರುತ್ತದೆ.
ಇದರಲ್ಲಿ ಜಾರಕಿಹೊಳಿ ಕುಟುಂಬ ಸಹ ತನ್ನದೇ ಆದ ಪ್ರಬಲ್ಯ ಹೊಂದಿದೆ. ಈ ಬಾರಿ ಮೂವರು ಜಾರಕಿಹೊಳಿ ಸಹೋದರರು ಚುನಾವಣಾ ಕಣದಲ್ಲಿದ್ದಾರೆ.
ಜಾರಕಿಹೊಳಿ ಸಹೋದರರು ಬೇರೆ-ಬೇರೆ ಪಕ್ಷಗಳಲ್ಲಿ ಇದ್ದರೂ ಕೂಡ ತಮ್ಮ ಕುಟುಂಬ ಸದಸ್ಯರಿಗೆ ಸೋಲಾಗದಂತೆ ನೋಡಿಕೊಳ್ಳುತ್ತಾ ಬಂದಿದ್ದಾರೆ. ಮೇಲ್ನೋಟಕ್ಕೆ ಜಾರಕಿಹೊಳಿ ಬ್ರದರ್ಸ್ ಪರಸ್ಪರ ಟೀಕೆ ಮಾಡಿದರೂ ಒಳಗೆ ಎಲ್ಲರೂ ಒಂದೇ. ಒಂದು ಸರ್ಕಾರ ಉರುಳಿಸಿ ಮತ್ತೊಂದು ಸರ್ಕಾರ ತರುವಷ್ಟು ರಾಜಕೀಯ ಶಕ್ತಿಯನ್ನು ಇವರು ಹೊಂದಿದ್ದಾರೆ ಎಂಬುವುದು ಜನರ ಮಾತು. ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ಪತನದ ವಿಷಯದಲ್ಲಿ ಇದು ಸಾಬೀತು ಕೂಡಾಗಿದೆ.
ರಮೇಶ್ ಜಾರಕಿಹೊಳಿ (ಗೋಕಾಕ್): ಸದ್ಯ ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ 500 ಮತಗಳ ಹಿನ್ನಡೆ ಅನುಭವಿಸಿದ್ದಾರೆ.
ಕಾಂಗ್ರೆಸ್ನ ಮಾಜಿ ನಾಯಕ, ಬಿಜೆಪಿಯ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. 2019ರ ಉಪ ಚುನಾವಣೆ ಸೇರಿ ಸತತವಾಗಿ ಆರು ಬಾರಿ ರಮೇಶ ಗೆದ್ದಿದ್ದಾರೆ. 1999, 2004, 2008, 2013, 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದರು. ಆದರೆ, 2018-19ರ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಂಟಾದ ರಾಜಕೀಯ ಪರಿಣಾಮಗಳಿಂದ ಕಮಲ ಪಾಳಯ ಸೇರಿದ್ದರು. ಈ ಮೂಲಕ ಕೈ- ದಳ ಸಮ್ಮಿಶ್ರ ಸರ್ಕಾರ ಉರುಳಲು ಕಾರಣವಾಗಿದ್ದರು. ಕಾಂಗ್ರೆಸ್ನಿಂದ ಕ್ಷೇತ್ರದ ಪ್ರಬಲ ಸಮುದಾಯವಾದ ಲಿಂಗಾಯತ ಪಂಚಮಸಾಲಿ ಮುಖಂಡ ಡಾ. ಮಹಾಂತೇಶ ಕಡಾಡಿ ಕಣದಲ್ಲಿದ್ದು, ಜಾರಕಿಹೊಳಿಗೆ ಪೈಪೋಟಿ ಕೊಟ್ಟಿದ್ದಾರೆ. ಸದ್ಯ ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ 500 ಮತಗಳ ಹಿನ್ನಡೆ ಅನುಭವಿಸಿದ್ದಾರೆ
ಸತೀಶ್ ಜಾರಕಿಹೊಳಿ (ಯಮಕನಮರಡಿ): ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಯಮಕನಮರಡಿಯು ಸಂಕೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2008ರಲ್ಲಿ ಪ್ರತ್ಯೇಕ ಕ್ಷೇತ್ರವಾಗಿ ರಚನೆಯಾಗಿದೆ. ಈವರೆಗೆ ನಡೆದ ಮೂರೂ ಚುನಾವಣೆಗಳಲ್ಲಿ ಗೆದ್ದು ಬೀಗಿರುವ ಇವರು, ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿದ್ದಾರೆ. ಈ ಬಾರಿ ನಾಲ್ಕನೇ ಸಲ ಗೆಲುವಿನ ಮೇಲೆ ಕಣ್ಣಿಟ್ಟಿರುವ ಸತೀಶ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಸಾಕಷ್ಟು ಕಸರತ್ತು ನಡೆಸುತ್ತಿದೆ.
ಸತೀಶ್ ಜಾರಕಿಹೊಳಿ ಅವರನ್ನು ಹೇಗಾದರೂ ಮಾಡಿ ಈ ಬಾರಿ ಮಣಿಸಲೇಬೇಕೆಂದು ಪಣ ತೊಟ್ಟಿರುವ ಕಮಲ ಪಾಳಯ ಬಸವರಾಜ ಹುಂದ್ರಿ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಟಿಕೆಟ್ ಸಿಗದ ಕಾರಣ ಬಂಡಾಯ ಎದ್ದಿದ್ದ ಮಾರುತಿ ಅಷ್ಟಗಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾರುತಿ ಅಷ್ಟಗಿ ಕೇವಲ 2,850 ಮತಗಳ ಅಂತರದಿಂದ ಸೋತಿದ್ದರು. ಆದ್ದರಿಂದ ಈ ಬಾರಿ ಯಮಕನಮರಡಿ ಕ್ಷೇತ್ರದಲ್ಲಿ ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ.
ಬಾಲಚಂದ್ರ ಜಾರಕಿಹೊಳಿ (ಅರಭಾವಿ): ಜೆಡಿಎಸ್ನ ಮಾಜಿ ನಾಯಕ, ಹಾಲಿ ಬಿಜೆಪಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅರಭಾವಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. 2004 ಮತ್ತು 2008ರಲ್ಲಿ ಜೆಡಿಎಸ್ನಿಂದ ಗೆದ್ದಿದ್ದ ಬಾಲಚಂದ್ರ, 2013, 2018ರಂದು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಈ ಸಲವೂ ಗೆದ್ದು ಸತತ ಐದನೇ ಗೆಲುವು ದಾಖಲಿಸಲು ಮುಂದಾಗಿದ್ದಾರೆ.
ಈ ಬಾರಿ ಬಾಲಚಂದ್ರ ಅವರನ್ನು ಸೋಲಿಸಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದ್ದು, ಕಳೆದ ಬಾರಿ ಪರಾಭವಗೊಂಡಿದ್ದ ಅರವಿಂದ ದಳವಾಯಿ ಅವರನ್ನೇ ಮತ್ತೆ ಕಣಕ್ಕಿಳಿಸಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಭೀಮಪ್ಪ ಗಡಾದ ಸ್ಪರ್ಧೆ ಮಾಡಿದ್ದಾರೆ. ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಭೀಮಪ್ಪ ಗಡಾದ ಎರಡನೇ ಸ್ಥಾನ ಪಡೆದು ಗಮನ ಸೆಳೆದಿದ್ದರು. ಈ ಬಾರಿ ಜೆಡಿಎಸ್ನಿಂದ ಪ್ರಕಾಶ್ ರಾಮಪ್ಪ ಕಲಶೆಟ್ಟಿ ಕಣದಲ್ಲಿದ್ದಾರೆ.